

ಮೈಸೂರು: ಜಯನಗರ ಕೆ.ಶಿವರಾಮ್ ಬಡವಾಣೆಯಲ್ಲಿ ಅಭಿಮಾನಿಗಳ ಬಳಗದಿಂದ ಭಾನುವಾರ ಆಯೋಜಿಸಿದ್ದ ಕೆ.ಶಿವರಾಮ್ ಪುಣ್ಯಸ್ಮರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸ್ಮರಿಸಲಾಯಿತು.
ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಜೀವನದಲ್ಲಿ ಪಟ್ಟ ಕಷ್ಟಗಳು, ಪರಿಶ್ರಮದಿಂದ ಸಾಧನೆ ಮಾಡಿದ್ದನ್ನು ಅರಿತಿದ್ದ ಐಎಎಸ್ ಅಧಿಕಾರಿ ಕೆ.ಶಿವರಾಮ್ ಅವರು ಸಹ ಅವರ ಹಾದಿಯನ್ನೇ ಕಂಡುಕೊಂಡಿದ್ದರು. ಬಡ ಕುಟುಂಬದ ಹಿನ್ನೆಲೆಯಿಂದ ಬೆಳೆದು ಸರ್ಕಾರಿ ಶಾಲೆಯಲ್ಲಿಯೇ ಓದಿದ ಶಿವರಾಮ್, ಕನ್ನಡದಲ್ಲೇ ಪ್ರಥಮ ಬಾರಿಗೆ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಬರೆದು ಯಶಸ್ವಿಯಾಗಿ ಉತ್ತೀರ್ಣರಾಗುವ ಮೂಲಕ ಚರಿತ್ರೆ ಸೃಷ್ಟಿಸಿದ್ದರು ಎಂದು ಸ್ಮರಿಸಿದರು.
ಅದಕ್ಕೂ ಮೊದಲು ಹಲವು ಸರ್ಕಾರಿ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದರೂ ಅದನ್ನು ಬಿಟ್ಟು ಕಠಿಣ ಶ್ರಮದಿಂದ ಐಎಎಸ್ ಪರೀಕ್ಷೆ ಬರೆದು ಯಶಸ್ವಿಯಾಗಿದ್ದರು. ಮೈಸೂರಿನಲ್ಲಿಯೂ ನಗರ ಪಾಲಿಕೆ ಆಯುಕ್ತರಾಗಿ ನಾಗರಿಕರ ಮನೆ ಬಾಗಿಲಿಗೆ ತೆರಳಿ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಿದ ದಕ್ಷ ಆಡಳಿತಗಾರ. ತಮ್ಮ ಅಧಿಕಾರಾವಧಿಯಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಿ ಜನಾನುರಾಗಿಯಾಗಿದ್ದರು.ಪರಿಶಿಷ್ಟ ಜಾತಿಯವರು ನಿಧನರಾದರೆ ಅವರ ಶವಸಂಸ್ಕಾರಕ್ಕೆ ಆರ್ಥಿಕ ಸಹಾಯ ನೀಡುವ ಪರಿಪಾಠ ಪ್ರಾರಂಭಿಸಿದ್ದರು. ಅಂಬೇಡ್ಕರ್ ಅವರ ಸಿದ್ಧಾಂತ, ಸಂವಿಧಾನದ ಆಶಯಗಳನ್ನು ಈಡೇರಿಸುವ ಪಾಲಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದರು ಎಂದು ಬಣ್ಣಿಸಿದರು.
ಮಾಜಿ ಮೇಯರ್ ಪುರುಷೋತ್ತಮ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್, ಮುಖಂಡರಾದ ಜೆ.ರವಿ, ನಾಗರಾಜು, ಮಹದೇವು, ಸುಶೀಲಾ, ಛಲವಾದಿ ಶಿವು, ಪ್ರಶಾಂತ್, ಗುಣಶೇಖರ್, ಮಧುರಾಜ್ ಇತರರು ಇದ್ದರು. ಇದೇ ವೇಳೆ ಸಮಾಜ ಸೇವಕರಾದ ಜಯರಾಜ್ ಅವರಿಂದ ಮಕ್ಕಳಿಗೆ ಪುಸ್ತಕ ಲೇಖನ ಸಾಮಗ್ರಿ ವಿತರಿಸಲಾಯಿತು.