

ದೇವದುರ್ಗ: ಕರೊನಾ ತಡೆಗೆ ಸರ್ಕಾರ ಮೇ 24ರವರೆಗೆ ಲಾಕ್‌ಡೌನ್ ಜಾರಿಗೊಳಿಸಿದ ಕಾರಣ ತೀವ್ರ ಸಮಸ್ಯೆ ಎದುರಿಸುತ್ತಿರುವ ಬಡವರು, ನಿರ್ಗತಿಕರು ಸೇರಿ ಇತರೆ ವರ್ಗದ ಜನರಿಗೆ ಉಚಿತವಾಗಿ ಉಪಾಹಾರ ಹಾಗೂ ಊಟ ಪೂರೈಕೆ ಮಾಡಲು ಶಾಸಕ ಕೆ.ಶಿವನಗೌಡ ನಾಯಕ (ಕೆಶಿನಾ)ಬಳಗ ಮುಂದಾಗಿದೆ.
ಪಟ್ಟಣದ ಬಿಇಒ ಕಚೇರಿ ಪಕ್ಕದಲ್ಲಿ ಉಪಾಹಾರ ಹಾಗೂ ಅಡುಗೆ ತಯಾರಿಕೆಗೆ ವ್ಯವಸ್ಥೆ ಮಾಡಿದ್ದು, ಆರು ಅಡುಗೆ ಭಟ್ಟರು ಊಟ ಹಾಗು ಉಪಾಹಾರ ತಯಾರಿಸುತ್ತಿದ್ದಾರೆ. ಬಡವರು, ನಿರ್ಗತಿಕರು ಮಾತ್ರವಲ್ಲ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು, ಪುರಸಭೆ ಸಿಬ್ಬಂದಿ, ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೊಲೀಸರು, ಬೀದಿಬದಿ ವ್ಯಾಪಾರಿಗಳು ಸೇರಿ ಹಸಿದು ಬಂದ ಎಲ್ಲರಿಗೂ ಉಪಾಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ.
ಮೇ 14ರಿಂದ ಊಟದ ವ್ಯವಸ್ಥೆ ಮಾಡಲಾಗಿದ್ದು, ವ್ಯಾನ್‌ಗಳಲ್ಲಿ ಸರ್ಕಾರಿ ಆಸ್ಪತ್ರೆ ಸೇರಿ 23 ಖಾಸಗಿ ಆಸ್ಪತ್ರೆಗಳಿಗೆ ಉಪಾಹಾರ ಹಾಗೂ ಊಟ ಪಾರ್ಸಲ್ ಮಾಡಲಾಗುತ್ತಿದೆ. ಕೆ.ಶಿವನಗೌಡ ನಾಯಕ ಅಭಿಮಾನಿಗಳು ಹಾಗೂ ಸ್ವಯಂ ಸೇವಕರು ಆಹಾರ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. ಬೆಳಗ್ಗೆ 700 ಜನರಿಗೆ ಉಪಾಹಾರ ಮತ್ತು ಮಧ್ಯಾಹ್ನ 600 ಜನರಿಗೆ ಬೇಕಾದ ಊಟ ತಯಾರಿಸಿ ಪಾರ್ಸಲ್ ಮಾಡಲಾಗುತ್ತಿದೆ. ಜತೆಗೆ ಪ್ರತಿಯೊಬ್ಬರಿಗೆ ಒಂದು ಲೀಟರ್ ನೀಡಲಾಗುತ್ತಿದೆ.
ದೇವದುರ್ಗ: ತಾಲೂಕಿನ ಜಾಲಹಳ್ಳಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ರೋಗಿಗಳಿಗೆ ಪಟ್ಟಣದ ಉಡುಪಿ ಮೀನಾಕ್ಷಿ ಹೋಟೆಲ್ ಮಾಲೀಕ ಹನುಮೇಶ ಕೃಷ್ಣಪ್ಪ ಸೋಮವಾರ ಉಚಿತವಾಗಿ ಉಪಾಹಾರ, ಕುಡಿವ ನೀರು ವಿತರಣೆ ಮಾಡಿದರು.
ಭಾನುವಾರದಿಂದ ಮೂರು ದಿನ ಯಾವುದೇ ಹೋಟೆಲ್‌ಗಳು ತೆರೆಯದ ಕಾರಣ ಆಸ್ಪತ್ರೆಗೆ ಬಂದಿರುವ ರೋಗಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ತುಂಬಾ ತೊಂದರೆಯಾಗಿತ್ತು. ಇದನ್ನು ಗಮನಿಸಿ ಸೋಮವಾರ ಹಾಗೂ ಮಂಗಳವಾರ ಎರಡು ದಿನ ಉಪಾಹಾರದ ವ್ಯವಸ್ಥೆ ಮಾಡಲಿದ್ದಾರೆ. ಆಸ್ಪತ್ರೆಗೆ ಬರುವ ಬಹುತೇಕ ರೋಗಿಗಳು ಹಾಗೂ ಸಿಬ್ಬಂದಿ ನಿತ್ಯ ನನ್ನ ಹೋಟೆಲ್‌ನಿಂದಲೇ ಉಪಾಹಾರ ಖರೀದಿಸುತ್ತಿದ್ದರು. ಆದರೆ, ಸಂಪೂರ್ಣ ಲಾಕ್‌ಡೌನ್‌ಗೆ ಆದೇಶ ಮಾಡಿರುವುದರಿಂದ ವಿವಿಧ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ತೊಂದರೆಯಾಗಿದೆ. ಅವರು ತಮ್ಮ ನೋವು ಹೇಳಿಕೊಂಡ ಹಿನ್ನೆಲೆಯಲ್ಲಿ ರೋಗಿಗಳಿಗೆ ಹಾಗೂ ಸಿಬ್ಬಂದಿಗೆ ಎರಡು ದಿನಗಳ ಮಟ್ಟಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗುವುದು ಎಂದು ಹನುಮೇಶ ತಿಳಿಸಿದರು.
ಲಾಕ್‌ಡೌನ್ ಯಶಸ್ವಿಗೆ ರಸ್ತೆಗಳಲ್ಲಿ ನಿಂತು ಕೆಲಸ ಮಾಡುವ ಪೊಲೀಸ್ ಸಿಬ್ಬಂದಿಗೆ ಉಪಾಹಾರದ ವ್ಯವಸ್ಥೆ ಮಾಡಿದರು. ಜಾಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಹಾದೇಪ್ಪ, ಹನುಮೇಶ ಉಡುಪಿ, ಸಿಬ್ಬಂದಿ ರಾಜು, ವೀರೇಶ, ಖಾನ್‌ಸಾಬ್, ವೀರೇಶ ಪಾಟೀಲ್ ಮೇದಿನಾಪುರ, ಸಂಗಮೇಶ ಮೂಲಿಮನಿ, ಮೂನ್ನಾ, ಅಣ್ಣಯ್ಯ ಉಡುಪಿ, ವೆಂಕಟೇಶ ಪಾನ್‌ಪಾಶ್ ಇದ್ದರು.