

ಎಚ್.ಎಸ್.ಭರತ್‌ಕುಮಾರ್ ಶ್ರೀರಂಗಪಟ್ಟಣ
ಕ್ರೀಡಾಪಟುಗಳನ್ನಾಗಿ ತರಬೇತುಗೊಳಿಸಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಲು ಕೊಡುಗೆ ನೀಡುತ್ತಿದೆ ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮ. ಗ್ರಾಮದ ರಚನೆಗೆ ಮೂಲ ಕಾರಣೀಕರ್ತರು ಬೇರೆ ಸಮುದಾಯವಾದರೂ ಪ್ರಸ್ತುತ ಎಲ್ಲ ಸಮುದಾಯದ ಜನರು ಅನ್ಯೋನ್ಯತೆಯಿಂದ ಬದುಕು ಕಂಡಿರುವ ಗ್ರಾಮ ಇದು.
ತಾಲೂಕಿನ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕೆ.ಶೆಟ್ಟಹಳ್ಳಿ ಗ್ರಾಮ ಶ್ರೀರಂಗಪಟ್ಟಣ ಕ್ಷೇತ್ರದ ಪ್ರಮುಖ ಹೋಬಳಿ ಕೇಂದ್ರವಾಗಿದೆ. ನೀರಾವರಿ ಅನುಕೂಲತೆಯಿಂದ ಫಲವತ್ತಾದ ಕೃಷಿ ಭೂಮಿಯನ್ನು ಹೊಂದಿರುವ ಕಾರಣ ಕೃಷಿಯೇ ಇಲ್ಲಿನ ಜನರ ಪ್ರಧಾನ ಕಸುಬು ಆಗಿದೆ. ಸುಮಾರು 3 ಸಾವಿರ ಮತದಾರರನ್ನು ಹೊಂದಿರುವ ಗ್ರಾಮದ ಜತೆಗೆ ಚುನಾವಣೆಯಲ್ಲಿ ಫಲಿತಾಂಶ ನಿರ್ಧರಿಸುವ ಶಕ್ತಿ ಕೇಂದ್ರವಾಗಿದೆ. ಇಂಥ ಗ್ರಾಮ ಸಂಸ್ಕೃತಿ, ಪರಂಪರೆ, ಕಲೆ, ರಾಜಕೀಯ ಅಲ್ಲದೆ ಪ್ರಮುಖವಾಗಿ ಕ್ರೀಡೆಯಿಂದಲೇ ಪ್ರಸಿದ್ಧಿಯಾಗಿದೆ.
ಶತ, ಶತಮಾನಗಳ ಹಿಂದೆ ಈ ಗ್ರಾಮದಲ್ಲಿ ಅಸಂಖ್ಯಾತ ಕುರುಬ ಸಮುದಾಯ ಜನರು ನೆಲೆಸಿ ಕುರಿ ಕಾಯಕದೊಂದಿಗೆ ಬದುಕು ನಡೆಸುತ್ತಿದ್ದ ಕಾರಣ ಕುರುಬರ ಶೆಟ್ಟಹಳ್ಳಿ(ಕೆ.ಶೆಟ್ಟಹಳ್ಳಿ) ಎಂದು ಪ್ರಚಲಿತಗೊಂಡಿದೆ. ಆದರೆ ವಾಸ್ತವತೆಯಲ್ಲಿ ಈ ಗ್ರಾಮದಲ್ಲಿ ಹಿಂದೆ ನೆಲೆಸಿದ್ದ ಕುರುಬ ಸಮುದಾಯ ಜನರು ಕಾರಣಾಂತರಗಳಿಂದ ಬೇರೆ ಬೇರೆ ಸ್ಥಳಗಳಿಗೆ ಗುಳೆ ಹೋಗಿ ಚದುರಿ ನೆಲೆ ಕಂಡಿದ್ದು, ಇತ್ತೀಚಿನ ವರ್ಷಗಳಲ್ಲಿ ಆಗಮಿಸಿ ನೆಲೆಸಿದ ಕೇವಲ ಒಂದೇ ಒಂದು ಕುಟುಂಬ ಹೊರತುಪಡಿಸಿ ಬೇರ‌್ಯಾವ ಕುರುಬ ಸಮುದಾಯ ಕುಟುಂಬ ಪ್ರಸ್ತುತ ಇಲ್ಲಿ ನೆಲೆಸಿಲ್ಲ. ಆದರೂ ಈ ಗ್ರಾಮ ಸರ್ಕಾರದ ಎಲ್ಲ ದಾಖಲೆಗಳಲ್ಲಿಯೂ ಹಿಂದಿನಿಂದಲೂ ಕೆ.ಶೆಟ್ಟಹಳ್ಳಿ ಎಂದೇ ಉಲ್ಲೇಖವಾಗಿದ್ದೂ, ಇಲ್ಲಿರುವ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲ ಎಲ್ಲರ ಬಾಯಲ್ಲೂ ಈ ಹೆಸರೇ ಚಾಲ್ತಿಯಲ್ಲಿದೆ.
ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಪ್ರಸ್ತುತ ಒಕ್ಕಲಿಗ ಸಮುದಾಯದ ಸುಮಾರು 1 ಸಾವಿರಕ್ಕೂ ಅಧಿಕ ಸಂಖ್ಯೆಯ ಜನರ ಕುಟುಂಬಗಳಿದ್ದು, ಇವರಲ್ಲಿ ಹಲವರು ಮೂಲತಃ ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿ, ಚಿಟ್ಟನಹಳ್ಳಿ, ಇಂಗಲಕುಪ್ಪೆ ಸೇರಿದಂತೆ ಈ ಸುತ್ತಮುತ್ತಲ ವ್ಯಾಪ್ತಿಯಲ್ಲಿನ ವಿವಿಧೆಡೆಗಳಿಂದ ನೂರಾರು ವರ್ಷಗಳ ಹಿಂದೆ ಆಗಮಿಸಿ ಇಲ್ಲಿ ನೆಲೆ ಕಂಡು ಕೃಷಿ ಕಾಯಕದೊಂದಿಗೆ ನೆಮ್ಮದಿಯ ಬದುಕು ಕಂಡಿದ್ದಾರೆ. ಹಿಂದೆ ಬರಗಾಲ ಸೇರಿದಂತೆ ಕೂಲಿ ಕಾಯಕಗಳಿಗೆ ಗುಳೆ ಹೊರಟ ಜನರು ನೀರಿನ ಒಡಲು ಬತ್ತದ ಲೋಕಪಾವನಿ ನದಿ ತೀರದಲ್ಲಿ ಕೃಷಿ ,ಕೂಲಿ, ಇತರ ಕಾಯಕಗಳೊಂದಿಗೆ ಬದುಕು ಕಂಡುಕೊಂಡರು.
ಹೀಗಾಗಿ ಇವರಲ್ಲಿ ಹಲವು ವಠಾರಗಳ ಆರಾಧ್ಯ ದೈವವಾಗಿ ಮಾಣಿಕ್ಯನಹಳ್ಳಿ ಬೋರೇದೇವರು ಹಾಗೂ ಲಕ್ಷ್ಮೀದೇವಿ, ಇನ್ನು ಕೆಲವು ವಠಾರಗಳ ಜನರು ಶ್ರೀ ಚೆಲುವನಾರಾಯಣಸ್ವಾಮಿ ಹಾಗೂ ಚಿಟ್ಟನಹಳ್ಳಿ ಶ್ರೀಹಿರಿಯಮ್ಮ ದೇವಿಯ ಆರಾಧಕರಾಗಿದ್ದಾರೆ.
ಇನ್ನು ಗ್ರಾಮದಲ್ಲಿ ಪರಿಶಿಷ್ಟ ಜಾತಿಯ 1250 ಕ್ಕೂ ಹೆಚ್ಚು ಸಂಖ್ಯೆಯ ಜನರ ಕುಟುಂಬಗಳಿವೆ. ಇವರಲ್ಲಿ ಹಲವರು ಮೂಲ ನಿವಾಸಿಗಳೇ ಆಗಿದ್ದು, ಇನ್ನು ಕೆಲವರು ಮೇಲುಕೋಟೆ, ಚುಂಚನಗಿರಿ ಕಡೆಗಳ ಗ್ರಾಮಗಳಿಂದ ಇಲ್ಲಿ ನೆಲೆಸಿದ್ದಾರೆ. ಹಲವು ಸಂಖ್ಯೆಯಲ್ಲಿರುವ ಮೂಲ ನಿವಾಸಿಗಳು ಕರೀಘಟ್ಟಣ್ಣನ ಒಕ್ಕಲು ಎಂದೇ ಬಿಂಬಿತವಾಗಿದ್ದು, ಇವರು ಕರಿಘಟ್ಟ ಬೆಟ್ಟದಲ್ಲಿರುವ ಶ್ರೀನಿವಾಸಸ್ವಾಮಿ ಹಾಗೂ ಗ್ರಾಮದಲ್ಲಿರುವ ಕಾಳಮ್ಮ ದೇವಿಯ ಆರಾಧಕರಾಗಿದ್ದಾರೆ. ವಲಸೆ ಬಂದು ನೆಲೆಸಿದವರಲ್ಲಿ ಹಲವರು ಶ್ರೀ ಚೆಲುವರಾನಾರಯಣಸ್ವಾಮಿ ಹಾಗೂ ಚುಂಚನಗಿರಿಯ ಶ್ರೀಭೈರವನ ಜೋಗಿಗಳಾಗಿ ಗುರುತಿಸಿಕೊಂಡಿದ್ದಾರೆ.
ಇವರೊಂದಿಗೆ ವೀರಶೈವ ಲಿಂಗಾಯತರು, ಮಡಿವಾಳರು, ಕುಂಬಾರರು ಹಾಗೂ ಉಪ್ಪಾರ ಶೆಟ್ಟರು ಸಮುದಾಯಗಳು ಸೇರಿದಂತೆ ಹಲವು ಮುಸ್ಲಿಂ ಕುಟುಂಬಗಳೊಂದಿಗೆ ಸುಮಾರು 500 ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಜನರು ಇಲ್ಲಿದ್ದಾರೆ.
ಕೆ.ಶೆಟ್ಟಹಳ್ಳಿ ಕುರುಬರ ಶೆಟ್ಟಹಳ್ಳಿ ಮಾತ್ರವಲ್ಲ ಇದು ಕ್ರೀಡಾಪಟುಗಳ ಶೆಟ್ಟಹಳ್ಳಿ ಎಂದು ಹೆಸರುವಾಸಿಯಾಗಿದೆ. ಈ ಗ್ರಾಮದಲ್ಲಿ ಹಿಂದಿನಿಂದಲೂ ಕುಸ್ತಿ ಅತ್ಯಂತ ನೆಚ್ಚಿನ ಕ್ರೀಡೆಯಾಗಿದ್ದು, ಹಲವು ಪೈಲ್ವಾನರನ್ನು ಈ ಗ್ರಾಮದಲ್ಲಿದ್ದ ಗರಡಿ ಮನೆ ಹೊಂದಿತ್ತು. ಆದರೆ ಕಾಲಕ್ರಮೇಣ ಗರಡಿ ಮನೆ ಶಿಥಿಲವಾದಂತೆ ಕುಸ್ತಿಪಟುಗಳು ಕ್ಷೀಣಿಸಿದರು.
ಆದರೆ ಕಬಡ್ಡಿ ಹಾಗೂ ಖೋಖೋ ಎಂದಾಕ್ಷಣ ಕ್ಷೇತ್ರದ ಜನರ ತಲೆಗೆ ಥಟ್ ಎಂದು ಹೊಳೆಯುವ ಗ್ರಾಮದ ಹೆಸರೇ ಕೆ.ಶೆಟ್ಟಹಳ್ಳಿ ಆಗಿದೆ. ಇದಕ್ಕೆ ಇಂಬು ನೀಡುವಂತೆ ಗ್ರಾಮದಲ್ಲೂ ಸಾಕಷ್ಟು ಹೊನಲು-ಬೆಳಕಿನ ಕ್ರೀಡಾಕೂಟಗಳನ್ನು ಆಯೋಜಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ನಡೆಯುವ ಕ್ರೀಡಾಕೂಟಗಳಲ್ಲಿ ಗ್ರಾಮದ ಕ್ರೀಡಾಪಟುಗಳು ಭಾಗಿಯಾಗಿ ಪ್ರಶಸ್ತಿಗಳನ್ನು ಬಾಚಿಕೊಂಡು ಬರುತ್ತಾರೆ.
ಖೋಖೋ ಕ್ರೀಡಾಕೂಟದಲ್ಲೂ ಈ ಗ್ರಾಮದ ಸಾಕಷ್ಟು ಕ್ರೀಡಾಪಟುಗಳು ಮೇಲುಗೈ ಸಾಧಿಸಿದ್ದು, ಜಿಲ್ಲೆ, ರಾಜ್ಯ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲೂ ಹೆಸರು ಗಳಿಸಿದ್ದಾರೆ.
ಉಳಿದಂತೆ ಅಥ್ಲೆಟಿಕ್ಸ್ ಕ್ರೀಡಾಕೂಟಗಳಾದ ಓಟದ ಸ್ಪರ್ಧೆ, ಉದ್ದ ಜಿಗಿತ, ಎತ್ತರದ ಜಿಗಿತ, ಗುಂಡು -ಭರ್ಜಿ ಎಸೆತ, ತಟ್ಟೆ ಎಸೆತ, ಸ್ಕಾರ್ಪ್ ಬಾಲ್ ಹಾಗೂ ಯೋಗಾಭ್ಯಾಸಗಳಲ್ಲಿ ಗ್ರಾಮದ ಮಕ್ಕಳು ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಗಣನೀಯ ಸಾಧನೆಗಳೊಂದಿಗೆ ಗಮನಾರ್ಹ ಹೆಸರುಗಳಿಸಿದ್ದಾರೆ.
ಹಿಂದೆ ನಮ್ಮೂರು ಸಾಕಷ್ಟು ಜನ ಪೈಲ್ವಾನರನ್ನು ಹೊಂದಿತ್ತು. ಆ ಕಾಲದಲ್ಲಿ ನರಸೇಗೌಡರು ಎಂಬ ಹಿರಿಯ ಗುರುಗಳಿದ್ದು, ಅವರ ಮಾರ್ಗದರ್ಶನದಲ್ಲಿ ಸಾಕಷ್ಟು ಜನರು ಪೌಷ್ಟಿಕ ಆಹಾರ ಸೇವನೆಯೊಂದಿಗೆ ನರಸೇಗೌಡರ ಗರಡಿ ಮನೆಯಲ್ಲಿ ನಿಯಮಿತ ಅಭ್ಯಾಸಗಳೊಂದಿಗೆ ಸಾಧನೆ ಮಾಡಿ, ಸುತ್ತಮುತ್ತ ನಡೆಯುತ್ತಿದ್ದ ಸಾಕಷ್ಟು ಕುಸ್ತಿ ಪಂದ್ಯಾವಳಿಯಲ್ಲಿ ಭಾಗಿಯಾಗಿ ಗೆದ್ದು ಹೆಸರು ಮಾಡಿದ್ದೇವು. ನಂತರದಲ್ಲಿ ಸಾಕಷ್ಟು ಜನರಿಗೆ ವಿದ್ಯೆ ಕಲಿಸಿ ಪೈಲ್ವಾನರನ್ನಾಸಿಗಿದ್ದೇವೆ. ದೇಸಿ ಕ್ರೀಡೆ ಕಾರಣದಿಂದಲೇ ನಮ್ಮೂರಿನಲ್ಲಿ ಹಲವರು ಆರೋಗ್ಯಯುತ ಬದುಕು ಕಂಡಿದ್ದೇವೆ. ಬಿ.ರಾಮೇಗೌಡ ಸ್ಟೂಡೆಂಟ್ ಪೈಲ್ವಾನ್ ಕೆ.ಶೆಟ್ಟಹಳ್ಳಿ ಗ್ರಾಮ ತನ್ನದೆ ಆದ ವಿಶೇಷ ಹಿನ್ನೆಲೆ ಜತೆಗೆ ರಾಜಕೀಯ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಸಾಧಕರನ್ನು ಹೊಂದಿದ್ದು, ಎಲ್ಲ ಸಮುದಾಯಗಳಿಗೂ ನೆಲೆ ನೀಡಿರುವ ನಮ್ಮೂರು ಒಂದು ಶಕ್ತಿ ಕೇಂದ್ರವೆಂದರೆ ತಪ್ಪಿಲ್ಲ. ನಾವೆಲ್ಲವರೂ ಈ ಗ್ರಾಮದಲ್ಲಿ ಅನ್ಯೋನ್ಯತೆಯಿಂದ ಬದುಕುತ್ತಿದ್ದು, ರಾಜ್ಯದ ಸಹಕಾರ ಕ್ಷೇತ್ರದ ಎಲ್ಲ ಸ್ಥಾನಗಳಲ್ಲಿ ನನ್ನನ್ನು ಸೇರಿದಂತೆ ನಮ್ಮೂರಿನ ಹಲವರು ಅಲಂಕರಿಸಿದ್ದಾರೆ. ನಮ್ಮೂರಿನ ಬಾಲಕ-ಬಾಲಕಿಯರು ಹಾಗೂ ಯುವಕ-ಯುವತಿಯರು ಕ್ರೀಡಾ ಕ್ಷೇತ್ರದಲ್ಲಿ ತೋರುತ್ತಿರುವ ಸಾಧನೆ ಸದಾ ಕಾಲಕ್ಕೂ ಶ್ಲಾಘನೀಯ. ಎಸ್.ಎಲ್.ಲಿಂಗರಾಜು ಹಿರಿಯ ಮುಖಂಡ