ನಮ್ಮ ಕುಟುಂಬ ಆಸ್ತಿ ಮಾಡಿಕೊಂಡಿಲ್ಲ: ಪಕ್ಷೇತರ ಅಭ್ಯರ್ಥಿ ವಿಜಯಾನಂದ ಹೇಳಿಕೆ

Halchal)
Published on

ಮಂಡ್ಯ: ಜನತಾ ಶಿಕ್ಷಣ ಸಂಸ್ಥೆ(ಪಿಇಟಿ) ಅಂತಹ ದೊಡ್ಡ ಸಂಸ್ಥೆಯನ್ನು ಕಟ್ಟಿದ ನಮ್ಮ ತಾತ ಕೆ.ವಿ.ಶಂಕರಗೌಡರು ಹಾಗೂ ನಮ್ಮ ತಂದೆ ಸಚ್ಚಿದಾನಂದ ಅವರು ನನಗೆ ಆಸ್ತಿ ಮಾಡಿ ಕೊಟ್ಟಿಲ್ಲ. ನಮ್ಮ ಕುಟುಂಬಕ್ಕೆ ಜನರೇ ಆಸ್ತಿ ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್.ವಿಜಯಾನಂದ ತಿಳಿಸಿದರು.

ತಾಲೂಕಿನ ಉಪ್ಪಾರಕನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಂಟಗೌಡನಹಳ್ಳಿ, ಉಪ್ಪಾಕನಹಳ್ಳಿ, ಮಲ್ಲಘಟ್ಟ, ಚೋಕನಹಳ್ಳಿ, ಕರಡಿಕೊಪ್ಪಲು, ಹಬ್ಬದ ಮಾರನಹಳ್ಳಿ ಗ್ರಾಮಗಳಲ್ಲಿ ಮತಯಾಚನೆ ಮಾಡಿದ ಅವರು, ಕೆ.ವಿ.ಶಂಕರಗೌಡರು 1952 ರಲ್ಲಿ ಪಿಇಎಸ್ ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡಿದರು. ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಇಂದು ದೇಶ-ವಿದೇಶಗಳಲ್ಲಿ ನೆಲೆಸಿದ್ದಾರೆ. ಸಾವಿರಾರು ಜನರು ಸರ್ಕಾರಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ನಾನು, ಎಚ್.ಎನ್.ಯೋಗೇಶ್, ಮಹಾಲಿಂಗೇಗೌಡ ಆಕಾಂಕ್ಷಿಗಳಾಗಿದ್ದೆವು. ಆದರೆ ಪಕ್ಷಕ್ಕಾಗಿ ದುಡಿದ ನಮಗೆ ಟಿಕೆಟ್ ನೀಡದೆ ಬೇರೆ ಕ್ಷೇತ್ರಕ್ಕೆ ಸೇರಿದ ವ್ಯಕ್ತಿಗೆ ಟಿಕೆಟ್ ನೀಡಿ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಇದರಿಂದ ಬಹಳ ಬೇಸರವಾಗಿ ನಾವೆಲ್ಲ ಸೇರಿ ಒಗ್ಗಟ್ಟಾಗಿ ಅಭ್ಯರ್ಥಿ ಹಾಕೋಣವೆಂದು ಶಾಸಕ ಎಂ.ಶ್ರೀನಿವಾಸ್ ಅವರ ನೇತೃತ್ವದಲ್ಲಿ ಚರ್ಚೆ ಮಾಡಿದವು. ಅದರಂತೆ ಸ್ವಾಭಿಮಾನಿ ಪಡೆಯಿಂದ ನಾನು ಅಭ್ಯರ್ಥಿಯಾಗಿದ್ದೇನೆ. ನನಗೆ ವಾಸ ಮಾಡಲು ಸ್ವಂತ ಮನೆ ಇಲ್ಲ. ನೀವೇ ನನ್ನ ಆಸ್ತಿ, ಕ್ಷೇತ್ರದ ಜನತೆ ಒಂದು ಅವಕಾಶ ನೀಡಿದರೆ ನಿಮ್ಮ ಅಭಿವೃದ್ಧಿಗಾಗಿ ದುಡಿಯುತ್ತೇನೆ. ನಾನು ಕಣದಿಂದ ಹಿಂದೆ ಸರಿಯುತ್ತೇನೆ ಎನ್ನುವ ಮಾಹಿತಿ ಹರಿಬಿಡಲಾಗಿದೆ. ನನ್ನ ವಿರೋಧಿಗಳು ಆ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ. ಯಾವ ಕಾರಣಕ್ಕೂ ಜೆಡಿಎಸ್ ಅಭ್ಯರ್ಥಿ ಜತೆ ಕೈಜೋಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಶಾಸಕ ಎಂ.ಶ್ರೀನಿವಾಸ್ ಮಾತನಾಡಿ, ನನ್ನ ಸ್ಥಾನ ತುಂಬಲು ಕೆ.ವಿ.ಶಂಕರಗೌಡ ಕುಟುಂಬದ ಕುಡಿ ವಿಜಯಾನಂದ ಸಮರ್ಥ ಅಭ್ಯರ್ಥಿ. ಜನತಾದಳದ ಅಭ್ಯರ್ಥಿಗಿಂತ ಹೆಚ್ಚಿನ ಮತವನ್ನು ಅವರಿಗೆ ನೀಡಿ ಅವರನ್ನು ಗೆಲ್ಲಿಸುವ ಮೂಲಕ ಹಣ ಬಲ ದೊಡ್ಡದೋ ಜನಬಲ ದೊಡ್ಡದೋ ಎಂಬುದನ್ನು ಕ್ಷೇತ್ರದ ಜನತೆ ತೋರಿಸಬೇಕು ಎಂದು ಮನವಿ ಮಾಡಿದರು.

ಜಿಪಂ ಮಾಜಿ ಸದಸ್ಯ ಎಚ್.ಎನ್.ಯೋಗೇಶ್, ಮುದ್ದನಘಟ್ಟ ಮಹಾಲಿಂಗೇಗೌಡ, ಬಸರಾಳು ತಿಮ್ಮೇಗೌಡ, ಲೋಕೇಶ್, ವಿಶಾಲ್ ರಘು, ಭೈರವ, ಸಾತನೂರು ಶಿವಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net