

ಮೈಸೂರು: ಸಾಮಾನ್ಯ ಮನುಷ್ಯರು ಅಂಧರ ಕಣ್ಣಿನಲ್ಲಿ ಲೋಕವನ್ನು ಕಾಣುವ ಪ್ರಯತ್ನ ಮಾಡಬೇಕು. ಶ್ರವಣ ದೋಷವುಳ್ಳವರ ಕಿವಿಯಲ್ಲಿ ಕೇಳುವುದನ್ನು ಕಲ್ಪಿಸಿಕೊಳ್ಳಬೇಕು. ಹಾಗೇ ನೋಡಲು, ಕೇಳಲು ಸಾಧ್ಯವಾದರೇ ಮನುಷ್ಯ ದುರಾಹಂಕಾರ ದೂರವಾಗುತ್ತದೆ ಎಂದು ವಿಮರ್ಶಕ ಪ್ರೊ.ಓ.ಎಲ್.ನಾಗಭೂಷಣ ಸ್ವಾಮಿ ಅಭಿಪ್ರಾಯಪಟ್ಟರು.
ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಸಮಾಜವಾದಿ ಅಧ್ಯಯನ ಕೇಂದ್ರ ಹಾಗೂ ರಂಗಾಂತರಂಗ ಸಂಸ್ಥೆ ವತಿಯಿಂದ ಕುವೆಂಪುನಗರದ ರಂಗಾಂತರಂಗ ಸಂಸ್ಥೆ ಸಭಾಂಗಣದಲ್ಲಿ ಭಾನುವಾರ ಕೆ.ಎಸ್.ಸುಚೇತ ರಚನೆಯ ‘ಕೇಳದ ಕಿವಿಗಳು ಹೇಳಿದ ಕಥೆಗಳು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿಶೇಷ ಚೇತನರು ಅನಾಥ ಭಾವವನ್ನು ಅನುಭವಿಸುತ್ತಾರೆ. ಅವರಿಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಅವರ ವೈಫಲ್ಯವನ್ನು ಸಂವೇದಶೀಲರನ್ನಾಗಿ ಅರಿಯಬೇಕು. ಕೆ.ಎಸ್.ಸುಚೇತ ಅವರ ಕೇಳದ ಕಿವಿಗಳ ಹೇಳಿದ ಕತೆಗಳು ಪುಸ್ತಕ ಮನುಷ್ಯನ ಅಹಂಕಾರಕ್ಕೆ ಚುಚ್ಚಲಿದೆ ಎಂದರು.
ಕೃತಿ ಬಿಡುಗಡೆ ಮಾಡಿದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಗಳ ನಿರ್ದೇಶಕಿ ಪ್ರೊ.ಎಂ.ಪುಷ್ಪಾವತಿ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ವಿಶೇಷ ಚೇತನರಿಗೋಸ್ಕರ ಅನೇಕ ಕೃತಿಗಳು ಬಂದಿವೆ. ಅದರಲ್ಲಿ ಈ ಕೃತಿ ವಿಶೇಷವಾಗಿದೆ. ಶ್ರವಣ ದೋಷವುಳ್ಳವರ ಅನುಭವಗಳನ್ನು ಕೃತಿ ಹೇಳಲಿದೆ ಎಂದರು.
ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ಸಹಾಯಕ ಅಧ್ಯಾಪಕ ಡಾ.ಪಿ.ಎ.ನಾಗರಾಜ, ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ನಿವೃತ್ತ ವಿಜ್ಞಾ ಡಾ.ಇ. ರತಿರಾವ್, ಅನ್ನಪೂರ್ಣ ಪಬ್ಲಿಷಿಂಗ್ ಹೌಸ್‌ನ ಪ್ರಕಾಶನದ ಪ್ರಕಾಶಕ ಬಿ.ಕೆ.ಸುರೇಶ್, ಲೇಖಕರಾದ ನಾ.ದಿವಾಕರ್, ಕೆ.ಎಸ್. ಸುಚೇತ ಹಾಗೂ ಇತರರು ಇದ್ದರು.