ಸ್ಮಾರಕ, ರಂಗಮಂದಿರ ನಿರ್ಮಾಣಕ್ಕೆ ಅನುದಾನ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

K.S. Narasimhaswamy Award Ceremony Mandya
Published on

ಮಂಡ್ಯ: ನಾಡು ಕಂಡ ಶ್ರೇಷ್ಟ ಸಾಹಿತಿಗಳ ಪೈಕಿ ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಅಪರೂಪ ಎನಿಸಿದ್ದಾರೆ. ಮಲ್ಲಿಗೆ ಕವಿ ಎಂದೇ ಮನೆ ಮಾತಾಗಿದ್ದಾರೆ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ಕೆಎಸ್‌ನ ಅವರ ಮನೆಯನ್ನು ಸ್ಮಾರಕ ಮಾಡಲು ಹಾಗೂ ಕಿಕ್ಕೇರಿಯಲ್ಲಿ ಬಯಲು ರಂಗಮಂದಿರ ನಿರ್ಮಾಣ ಸೇರಿದಂತೆ ಕೆಎಸ್‌ನ ಟ್ರಸ್ಟ್ ಅಭಿವೃದ್ಧಿಗೆ ಅನುದಾನ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕೆಎಸ್‌ನ ಸಾಹಿತ್ಯ ಹಾಗೂ ಕಾವ್ಯ ಗಾಯನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಅಭಿವೃದ್ಧಿಯಾಗಬೇಕು. ಸ್ಥಳೀಯ ಅನುದಾನ ಬಳಸಿಕೊಂಡು ಕಿಕ್ಕೇರಿಯಲ್ಲಿರುವ ಅವರ ಮನೆಯನ್ನು ಸ್ಮಾರಕ ಮಾಡಬೇಕು. ಜತೆಗೆ ಬಯಲು ರಂಗಮಂದಿರ ನಿರ್ಮಾಣ ಮಾಡಲು ಬೇಕಾದ ಅಗತ್ಯ ಅನುದಾನಕ್ಕೆ ಈಗಾಗಲೇ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದರು.

ಜಗತ್ತಿನ ಯಾವ ದೇಶದಲ್ಲೂ ಇರದ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಯ ಶ್ರೀಮಂತಿಕೆ ಭಾರತದ ಹೊಂದಿದೆ. ಕುವೆಂಪು, ದ.ರಾ.ಬೇಂದ್ರೆ ಅವರಂತಹ ಮಹಾನ್ ಸಾಹಿತಿಗಳು ದೇಶದ ಸಾಹಿತ್ಯ ವೈಭವವನ್ನು ಹೆಚ್ಚಿಸಿದ್ದಾರೆ. ಅವರೆಲ್ಲರ ಸಾಧನೆಗಳು ಕುರಿತು ಮುಂದಿನ ಪೀಳಿಗೆಗೆ ತಿಳಿಸುವ ಜವಬ್ದಾರಿ ನಮ್ಮದಾಗಿದೆ. ನಾಡಿನ ಸಾಹಿತಿಗಳಾದ ಪು.ತಿ.ನರಸಿಂಹಾಚಾರ್ ಹಾಗೂ ಕೆ.ಎಸ್.ನರಸಿಂಹಸ್ವಾಮಿ ಅವರ ಟ್ರಸ್ಟ್‌ಗಳ ಜವಾಬ್ದಾರಿ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಹಾಗೂ ಪ್ರೊ.ಕೃಷ್ಣೇಗೌಡ ಅವರಿಗೆ ನೀಡಲಾಗಿದೆ. ಟ್ರಸ್ಟ್ ಅಭಿವೃದ್ಧಿ ಕಾರ್ಯಕ್ಕೆ ಸಂಪೂರ್ಣ ಬೆಂಬಲ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸಿದ್ದರು. ಮೈಷುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ, ಮುಡಾ ಅಧ್ಯಕ್ಷ ನಯೀಂ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಮಲ್ಲಿಕಾರ್ಜುನ ಬಾಲದಂಡಿ, ಟ್ರಸ್ಟ್ ಅಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಇತರರಿದ್ದರು.

ಇದೇ ವೇಳೆ ಸಾಹಿತ್ಯ ಪ್ರಶಸ್ತಿಯನ್ನು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಸಾಹಿತಿ ಡಾ.ನಾ.ದಾಮೋದರ ಶೆಟ್ಟಿ ಹಾಗೂ ಕಾವ್ಯಗಾಯನ ಪ್ರಶಸ್ತಿಯನ್ನು ಗಾಯಕರಾದ ಸಂಗೀತಾ ಕಟ್ಟಿ, ರಮೇಶ್‌ಚಂದ್ರ ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು. ಗಾಯಕರು ಕೆ.ಎಸ್.ನರಸಿಂಹಸ್ವಾಮಿ ಗೀತೆಗಳ ಹಾಡಿದರು. ಅಂತೆಯೇ ನೃತ್ಯ ಪ್ರದರ್ಶನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net