ಇದು ನನ್ನ ವಿರುದ್ಧದ ಷಡ್ಯಂತ್ರ ; ಸಿದ್ಧಗಂಗಾ ಮಠದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ

15 tmk eshwarappa
Published on

ತುಮಕೂರು: ರಾಜಕಾರಣದಲ್ಲಿ ಈ ಮಟ್ಟದ ಷಡ್ಯಂತ್ರ ನಾನು ನೋಡಿರಲಿಲ್ಲ, ಹೀಗೆ ಮಾಡಿರುವವರಿಗೆ ರಾಜಕಾರಣಕ್ಕಾಗಿ ನಾವು ಮಾಡಿರೋ ತಪ್ಪೇನು ಅನ್ನೋದು ಅರ್ಥ ಆಗಬೇಕು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಪೂರ್ವದಲ್ಲಿ ಶುಕ್ರವಾರ ಸಂಜೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಡಾ.ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದು ಸುದ್ದಿಗಾರರ ಜತೆ ಮಾತನಾಡಿದರು. ಆತ್ಮಹತ್ಯೆ ವಿಚಾರದಲ್ಲಿ ಇದು ನನ್ನ ವಿರುದ್ಧದ ಷಡ್ಯಂತ್ರ ಎಂದು ಇಡೀ ರಾಜ್ಯದ ಸಾಮಾನ್ಯ ಜನರಿಗೂ ಗೊತ್ತಿದೆ, ಸತ್ಯ ಹೊರಬರಬೇಕು ಎಂಬ ಹಿನ್ನೆಲೆಯಲ್ಲಿ ಸಿಎಂ ತನಿಖೆಗೂ ಆದೇಶಿಸಿದ್ದಾರೆ, ಈ ಷಡ್ಯಂತ್ರದ ವಿರುದ್ಧ ನಿರ್ದೋಷಿಯಾಗಿ ಹೊರಬರುತ್ತೇನೆ ಎಂದು ರಾಜ್ಯದ ಮಠಾಧೀಶರು ಆಶೀರ್ವಾದ ಮಾಡಿದ್ದಾರೆ ಎಂದರು.

ಬಿಜೆಪಿಯ ರಾಷ್ಟ್ರ, ರಾಜ್ಯ ನಾಯಕರು, ಸಚಿವರು, ಶಾಸಕರು ಹಾಗೂ ಎಲ್ಲ ಕಾರ್ಯಕರ್ತರಿಗೆ ಇರಿಸುಮುರಿಸು ಆಗಬಾರದು ಎಂಬ ಒಂದೇ ಕಾರಣಕ್ಕೆ ರಾಜೀನಾಮೆ ನೀಡುತ್ತಿದ್ದೇನೆ, ಆದಷ್ಟು ಬೇಗ ತನಿಖೆಯ ವರದಿ ಹೊರಬರುವ ನಿಟ್ಟಿನಲ್ಲಿ ಸಿಎಂಗೆ ಮನವಿ ಮಾಡಿದ್ದೇನೆ ಎಂದರು.

ಇದು ನನ್ನ ವಿರುದ್ಧದ ಷಡ್ಯಂತ್ರ ಎಂದು ತುಂಬಾ ಸ್ಪಷ್ಟವಾಗಿದೆ, ಗುತ್ತಿಗೆದಾರ ಸಂತೋಷ್ ಪಾಟೀಲ್ ಇವತ್ತು ನಮ್ಮ ಜತೆ ಇಲ್ಲ, ಆ ಬಗ್ಗೆಯೂ ಎರಡೆರಡು ಅಭಿಪ್ರಾಯ ಬರ್ತಿದೆ, ಅದು ಆತ್ಮಹತ್ಯೆಯೋ? ಕೊಲೆಯೋ? ಅನ್ನೋದನ್ನ ಅನೇಕರು ಅನುಮಾನಿಸಿದ್ದಾರೆ, ಕೊಲೆಗಾರರು ಯಾರು ಅಂತ ಹೊರಬರಬೇಕು, ಷಡ್ಯಂತ್ರದ ಹಿಂದೆ ಯಾರಿದ್ದಾರೆ ಅನ್ನೋದು ಹೊರಬರಬೇಕು ಎಂದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಡಾ.ಎಂ.ಆರ್.ಹುಲಿನಾಯ್ಕರ್, ಮಧುಗಿರಿ ಬಿಜೆಪಿ ಅಧ್ಯಕ್ಷ ಬಿ.ಕೆ.ಮಂಜುನಾಥ್ ಮತ್ತಿತರರು ಇದ್ದರು.

ನನ್ನ ರಾಜ್ಯ ರಾಜಕಾರಣ ಅಂತ್ಯ ಎಂದು ಹೇಳಿವವರ ಮಾತು ಕೇಳಿ ಈಶ್ವರಪ್ಪ ನಕ್ಕರು ಅಂತ ಹೇಳಿ. ಇಂತಹ ನೂರು ಜನರನ್ನು ನಾನು ನೋಡಿದ್ದೇನೆ ಅಂತ ಹೇಳಿ, ಈ ರೀತಿಯಾಗಿ ನನ್ನ ರಾಜಕೀಯ ಅಂತ್ಯ ಆಗಲ್ಲ. ಈ ಪಕ್ಷಕ್ಕೋಸ್ಕರ, ಈ ದೇಶಕ್ಕೋಸ್ಕರ, ಜೀವ ಇರೋವರೆಗೂ ಹೋರಾಟ ಮಾಡ್ತೀನಿ. ಮುಂದಿನ ಚುನಾವಣೆಗೆ ಸ್ಪರ್ಧಿಸುವ ತೀರ್ಮಾನವನ್ನು ಪಕ್ಷ ಮಾಡಲಿದೆ. ಕೆ.ಎಸ್.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net