ಕಾಂತೇಶಗೆ ಲೋಕಸಭೆ ಟಿಕೆಟ್ ನೀಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ; ಕೆ.ಎಸ್. ಈಶ್ವರಪ್ಪ

13-RNR-03A
Published on

ಹಾವೇರಿ: ಲೋಕಕಲ್ಯಾಣಕ್ಕಾಗಿ ನಗರದ ಸಿಂದಗಿಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರುದ್ರಹೋಮ, ಶತರುದ್ರಾಭಿಷೇಕದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕುಟುಂಬ ಸಮೇತ ಆಗಮಿಸಿ ಪಾಲ್ಗೊಂಡಿದ್ದು ಲೋಕಸಭೆ ಚುನಾವಣೆ ಸಮೀಪವಿರುವುದರಿಂದ ಭಾರಿ ಗಮನ ಸೆಳೆಯಿತು.
ಕುಟುಂಬ ಸಮೇತರಾಗಿ ಆಗಮಿಸಿದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಶಾಂತವೀರ ಪಟ್ಟಾಧ್ಯಕ್ಷ ಗದ್ದುಗೆ ದರ್ಶನ ಪಡೆದ ಬಳಿಕ ಲೋಕಕಲ್ಯಾಣಕ್ಕಾಗಿ ಹಮ್ಮಿಕೊಂಡಿದ್ದ ರುದ್ರ ಹೋಮ, ಶತರುದ್ರಾಭಿಷೇಕದಲ್ಲಿ ಕುಟುಂಬ ಸಮೇತ ಭಾಗಿಯಾದರು. ಮಠದ ಆವರಣದಲ್ಲಿ ವಾಗೀಶಯ್ಯ ಶಾಸ್ತ್ರಿಗಳ ನೇತೃತ್ವದಲ್ಲಿ ಆಯೋಜಿಸಿದ್ದ ಹೋಮದಲ್ಲಿ ಸುಮಾರು 300ಕ್ಕೂ ಅಧಿಕ ಶಾಸ್ತ್ರಿಗಳು ಪಾಲ್ಗೊಂಡು ರುದ್ರ ಹೋಮ ನಡೆಸಿಕೊಟ್ಟರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಕೆ.ಎಸ್. ಈಶ್ವರಪ್ಪ, ಕಳೆದ 25 ವರ್ಷಗಳಿಂದ ಸಿಂದಗಿ ಮಠದ ಸಂಪರ್ಕದಲ್ಲಿದ್ದೇನೆ. ಅನೇಕ ಸಲ ಸಿಂದಗಿಮಠಕ್ಕೆ ಭೇಟಿ ನೀಡಿದ್ದೇನೆ. ಲೋಕ ಕಲ್ಯಾಣಕ್ಕಾಗಿ ರುದ್ದಹೋಮ ಶತರುದ್ರಾಭಿಷೇಕ ಮಾಡಿಸುತ್ತಿದ್ದೇನೆ ಎಂದರು.
ತಮ್ಮ ಮಗ ಕಾಂತೇಶಗೆ ಲೋಕಸಭೆ ಟಿಕೆಟ್ ನೀಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಯಾರಾಗಬೇಕು ಎನ್ನುವುದನ್ನು ರಾಜ್ಯ, ರಾಷ್ಟ್ರ ಸಮಿತಿಯವರು ತೀರ್ಮಾನ ಮಾಡುತ್ತಾರೆ. ಅವರ ತೀರ್ಮಾನಕ್ಕೆ ನಾನು ಬದ್ದ. ವಿಧಾನಸಭಾ ಚುನಾವಣೆ ವೇಳೆ ಚುನಾವಣಾ ರಾಜಕಾರಣದದಿಂದ ಸ್ಪರ್ಧೆ ಬೇಡ ಎನ್ನುವ ಸೂಚನೆ ಬಂದಿತ್ತು. ಸೂಚನೆ ಬಂದ ಐದು ನಿಮಿಷದಲ್ಲಿ ನಾನು ಪತ್ರ ಬರೆದಿದ್ದೆ. ಇದನ್ನು ಮೆಚ್ಚಿ ಪ್ರಧಾನ ಮಂತ್ರಿಗಳು ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದರು. ಅದನ್ನು ಬಿಟ್ಟರೆ ಮಗನಿಗೆ ಲೋಕಸಭಾ ಟಿಕೆಟ್ ನೀಡುವ ಮಾತುಕತೆ ಆಗಿರಲಿಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿ. ನನಗೆ ಯಾವುದೇ ಪ್ರಾಮಿಸ್ ಬಂದಿಲ್ಲ, ನಾನು ಕೇಳಿಲ್ಲ ಎಂದರು.
ಸಂಸದ ಶಿವಕುಮಾರ ಉದಾಸಿಯವರು ಚುನಾವಣೆಗೆ ನಿಲ್ಲುವುದಿಲ್ಲ ಎಂದು ನನ್ನ ಬಳಿ ಹೇಳಿದ್ದಾರೆ. ಈ ಭಾಗದ ಮಾಜಿ ಶಾಸಕರು, ಮಠಾಧೀಶರು ಹಾವೇರಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವುದು ಒಳ್ಳೆಯದು ಎಂದು ಹೇಳಿದ್ದಾರೆ. ಜನರು, ಕಾರ್ಯಕರ್ತರು ಅಪೇಕ್ಷೆ ಪಡುತ್ತಿದ್ದಾರೆ. ಸುಮಾರು 7-8 ವರ್ಷಗಳಿಂದ ಮಗನಿಗೆ ಜಿಲ್ಲೆಯ ಸಂಪರ್ಕವಿದೆ. ಇಲ್ಲೆಯೇ ಮನೆ ಮಾಡಿಕೊಂಡಿದ್ದಾನೆ. ಈ ಭಾಗದ ಮಠಾಧೀಶರು ಸಹ ನಮ್ಮ ಆಶೀರ್ವಾದ ಇದೆ ತಾವು ಸ್ಪರ್ಧಿಸಬೇಕು ಎಂದು ಸೂಚನೆ ನೀಡಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಪುತ್ರ ಕಾಂತೇಶ ಓಡಾಟ ನಡೆಸಿದ್ದಾರೆ ಎಂದರು.
ಪುತ್ರ ಕಾಂತೇಶ ಈ.ಎಸ್, ಮಾಜಿ ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net