

ರಟ್ಟಿಹಳ್ಳಿ: ತಾಲೂಕಿನ ಮಾಸೂರು ಗ್ರಾಮದ ಹತ್ಯೆಯಾದ ಯುವತಿ ಸ್ವಾತಿ ಬ್ಯಾಡಗಿ ಮನೆಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮಂಗಳವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ವೇಳೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ನಿಮಗೆ ಇನ್ನು ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಅವರ ಉತ್ತಮ ಭವಿಷ್ಯಕ್ಕಾಗಿ ತಾವು ಧೈರ್ಯದಿಂದ ಇರಬೇಕು. ಈಗಾಗಲೇ ಪೊಲೀಸ್ ಇಲಾಖೆ ಆರೋಪಿಗಳನ್ನು ಬಂಧಿಸಿದೆ. ಪ್ರಾಮಾಣಿಕ ತನಿಖೆ ನಡೆಸಿ, ಕೊಲೆಗಾರರಿಗೆ ತಕ್ಕ ಶಿಕ್ಷೆ ನೀಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ರೀತಿ ಅಹಿತಕರ ಘಟನೆಗಳು ಯಾವುದೇ ಕುಟುಂಬದಲ್ಲಿ ಆಗಬಾರದು. ನೀವು ಧೈರ್ಯದಿಂದ ಇರಬೇಕು. ನಿಮ್ಮ ಜತೆ ನಾವೆಲ್ಲರೂ ಇದ್ದೇವೆ ಎಂದು ಯುವತಿ ತಾಯಿಗೆ ಸಾಂತ್ವ ಹೇಳಿ, 50 ಸಾವಿರ ರೂಪಾಯಿ ನೆರವು ನೀಡಿದರು.
ಸ್ಥಳೀಯ ಕಬ್ಬಿಣಕಂತಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಾರತ ದೇಶ ಉತ್ತಮ ಸಂಸ್ಕೃತಿ ಮತ್ತು ಸಂಸ್ಕಾರ ಹೊಂದಿದೆ. ಇಂದಿನ ಯುವಕ-ಯುವತಿಯರು ಕೀಳು ಅಭಿರುಚಿಗೆ ತಮ್ಮ ಬದುಕು ಹಾಳು ಮಾಡಿಕೊಂಡು ಅನಾಹುತದ ಎಡೆಗೆ ಸಾಗುತ್ತಿದ್ದಾರೆ. ಈ ರೀತಿಯ ಘಟನೆಗಳು ದೇಶದ ಅಭದ್ರತೆಗೆ ಕಾರಣವಾಗುತ್ತದೆ. ಯುವಪೀಳಿಗೆಗೆ ನಾವೆಲ್ಲರೂ ಉತ್ತಮ ಸಂಸ್ಕಾರ, ಮೌಲ್ಯಗಳು, ಸಂಸ್ಕೃತಿ ಬಗ್ಗೆ ತಿಳಿಸಬೇಕು, ನಮ್ಮ ನಾಡು ಮತ್ತು ರಾಷ್ಟ್ರದ ರಕ್ಷಣೆ ಬಗ್ಗೆ ಅರಿವು ಮೂಡಿಸುವುದರೊಂದಿಗೆ ಈ ರೀತಿ ಘಟನೆಗಳು ಆಗದಂತೆ ನಾವೆಲ್ಲರೂ ಜವಾಬ್ದಾರಿಯಿಂದ ಇರಬೇಕಾಗುತ್ತದೆ. ಮೃತ ಯುವತಿ ಸ್ವಾತಿ ಬಗ್ಗೆ ಹೆಚ್ಚು ಆಲೋಚಿಸದೇ ಉಳಿದ ಇಬ್ಬರು ಹೆಣ್ಣು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಆತ್ಮವಿಶ್ವಾಸದಿಂದ ಇರಬೇಕು ಎಂದು ಸಾಂತ್ವನ ಹೇಳಿದರು.
ವೀರಶೈವ ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಪರಮೇಶ್ವರಪ್ಪ ಹಲಗೇರಿ, ಮಾಲತೇಶ ಬೆಳಕೇರಿ, ಬಸವರಾಜ ಆಡಿನವರ, ರಾಘವೇಂದ್ರ ಹರವಿಶೆಟ್ಟರ್, ಗಿರೀಶ ಪಾಟೀಲ, ಸಿದ್ದು ಹಲಗೇರಿ, ದರ್ಶನ ಅಡಗಂಟಿ, ರಾಜು ಸುಣಗಾರ ಉಪಸ್ಥಿತರಿದ್ದರು.