

ಆಲಮಟ್ಟಿ: ಛತ್ರಪತಿ ಶಿವಾಜಿ ಮಹಾರಾಜರ ಆಡಳಿತಾವಧಿಯಲ್ಲಿ ಹಿಂದುಗಳಷ್ಟೇ ಮುಸ್ಲಿಮರು ಸಂತುಷ್ಟರಾಗಿದ್ದರು. ಶಿವಾಜಿ ಮಹಾರಾಜರು ಇರದಿದ್ದರೆ ನಾವ್ಯಾರೂ ಇರುತ್ತಿರಲಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು.
ಆಲಮಟ್ಟಿ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಗಲಕೋಟೆಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳಿಂದ ಪರವಾನಗಿ ಪಡೆದು ಶಿವಾಜಿ ಮಹಾರಾಜರ ಪುತ್ಥಳಿ ಪ್ರತಿಷ್ಟಾಪನೆ ಮಾಡಲು ಹೊರಟಿರುವ ಹಿಂದುಪರ ಸಂಘಟನೆಗಳಿಗೆ ತಡೆಯೊಡ್ಡುತ್ತಿರುವುದು ಸರಿಯಲ್ಲ. ಕೂಡಲೇ ಅವಕಾಶ ನೀಡಬೇಕು. ಜನರು ಇದೆಲ್ಲವನ್ನೂ ನೋಡುತ್ತಿದ್ದು, ಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದರು.
ಈ ಬಾರಿ ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದರೆ ಅಚ್ಚರಿಯಿಲ್ಲ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದವರು ರಾಜ್ಯದಲ್ಲಿ ಬಿಜೆಪಿ ಒಂದು ಸ್ಥಾನವೂ ಗೆಲ್ಲುವುದಿಲ್ಲ ಎಂದು ಹೇಳಿದ್ದರು. ಆದರೆ ಕಾಂಗ್ರೆಸ್ ಕೇವಲ ಒಂದು ಸ್ಥಾನ ಗೆದ್ದಿದೆ, ಈ ಬಾರಿ ಅದನ್ನೂ ಕೂಡ ಕಳೆದುಕೊಳ್ಳಲಿದೆ ಎಂದರು.
ರಾಜ್ಯ ಸರ್ಕಾರ ಹಿಂದುಗಳನ್ನು ಕಡೆಗಣಿಸಿ ಮುಸ್ಲಿಮರ ಓಲೈಕೆಯಲ್ಲಿ ತೊಡಗಿದೆ. ಜಗದೀಶ ಶೆಟ್ಟರ್ ಅವರನ್ನು ಪಕ್ಷ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಈಗ ಕಾಂಗ್ರೆಸ್‌ನಲ್ಲಿ ಎಂಎಲ್‌ಸಿ ಮಾಡಿ ಕೂಡಿಸಿದೆ. ಅವರು ಬಿಜೆಪಿಯಲ್ಲಿದ್ದಾಗ ಗೋ ಹತ್ಯೆ, ಮತಾಂತರ ಸೇರಿದಂತೆ ಹಿಂದುಗಳ ರಕ್ಷಣೆಗಾಗಿ ನಿಲ್ಲುತ್ತಿದ್ದರು. ಈಗ ಕಾಂಗ್ರೆಸ್ ಸೇರಿದಾಕ್ಷಣ ಗೋವುಗಳನ್ನು ಕೊಲ್ಲಿರಿ, ಹೆಣ್ಣುಮಕ್ಕಳನ್ನು ಮತಾಂತರಗೊಳಿಸಿ ಎಂದು ಹೇಳುತ್ತಾರಾ? ಎಂದು ಪ್ರಶ್ನಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಎಷ್ಟು ಜನ ಅವಲಂಬಿಸಿದ್ದಾರೆ ಎನ್ನುವುದು ಕಾಂಗ್ರೆಸ್‌ನವರಿಗೆ ಗೊತ್ತಿದೆ. ಅವರ ಹಿತ ಕಾಪಾಡಲು ನೀರಾವರಿ ಯೋಜನೆ ಸೇರಿದಂತೆ ದೀರ್ಘಾವಧಿ ಯೋಜನೆಗಳಿಗೆ ಆದ್ಯತೆ ನೀಡಿಲ್ಲ. ಜನಪ್ರಿಯ ಯೋಜನೆಗಳ ಬೆನ್ನು ಬಿದ್ದು ರಾಜ್ಯವನ್ನು ಲೂಟಿ ಹೊಡೆಯುವ ಕೆಲಸದಲ್ಲಿ ತೊಡಗಿದೆ ಎಂದು ಆಪಾದಿಸಿದರು. ಈ ಸಂದರ್ಭದಲ್ಲಿ ಸಾಬು ಮಾಶ್ಯಾಳ, ರಾಜು ಬಿರಾದಾರ, ಶಂಕರ ಕುಂಬಾರ ಇದ್ದರು.