

ಮಂಗಳೂರು : ಬಿಜೆಪಿಯ ಸಿದ್ದಾಂತಗಳಿಗೆ ಕರ್ನಾಟಕದ ಬಿಜೆಪಿ ತಿಲಾಂಜಲಿ ನೀಡಿದೆ. ಕುಟುಂಬ ರಾಜಕಾರಣದಿಂದ
ಬಿಜೆಪಿಯನ್ನು ಶುದ್ಧೀಕರಣಗೊಳಿಸಲು ಈ ಬಾರಿಯ ನೈಋತ್ಯ ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ರಘುಪತಿ ಭಟ್ ಅವರನ್ನು ಬೆಂಬಲಿಸುವ ಅಗತ್ಯವಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕುಟುಂಬ ರಾಜಕೀಯದಿಂದ ದೇಶವನ್ನು ಮುಕ್ತ ಮಾಡುವುದು ಮೋದಿ ಅವರ ಸಂಕಲ್ಪವಾದರೆ, ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ಕುಟುಂಬ ರಾಜಕೀಯ ನಡೆಯುತ್ತಿದೆ. ಅಪ್ಪ- ಮಕ್ಕಳ ಜಾತಿ ರಾಜಕೀಯದಿಂದ ಬಿಜೆಪಿ ಕಾರ್ಯಕರ್ತರು ನೋವು ಅನುಭವಿಸುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಬಿಜೆಪಿಯನ್ನು ರಾಷ್ಟ್ರೀಯ ವಿಚಾರಧಾರೆ, ರೈತ ಹೋರಾಟ , ಹಿಂದುತ್ವದ ನೆಲೆಯಲ್ಲಿ ಕಟ್ಟಿ ಬೆಳೆಸಿದ್ದೇವೆ. ಈಗ ರಾಷ್ಟ್ರೀಯತೆ ಬದಲು ಜಾತೀಯತೆ ತುಂಬಿದೆ. ಸಾಮೂಹಿಕ ನಾಯಕತ್ವದ ಬದಲು ಸರ್ವಾಧಿಕಾರಿ ನಾಯಕತ್ವ ಬಂದಿದೆ. ಇದನ್ನು ವಿರೋಧಿಸಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದೆ. ಈಗ ರಘುಪತಿ ಭಟ್ ಅವರಿಗೆ ಬಿಜೆಪಿ ಅನ್ಯಾಯ ಮಾಡಿದೆ. ಶಿವಮೊಗ್ಗದಲ್ಲಿ ಹರ್ಷ ಕೊಲೆಯಾದ ಸಂದರ್ಭ ನಕ್ಸಲ್ ಪರ ವಹಿಸಿ ಹಿಂದೂ ವಿರೋಧಿಗಳ ಜತೆ ಮೆರವಣಿಗೆ ಮಾಡಿದ ವ್ಯಕ್ತಿಗೆ ಜಾತಿ ಆಧಾರದಲ್ಲಿ ಬಿಜೆಪಿ ಟಿಕೆಟ್ ನೀಡಲಾಗಿದೆ.
ಬಿಜೆಪಿ ಕಾರ್ಯಕರ್ತರು ಇದನ್ನು ಸಹಿಸಲು ಸಾಧ್ಯವಿಲ್ಲ. ಹಾಗಾಗಿ ರಘುಪತಿ ಭಟ್ ಅವರಿಗೆ ಅಪಾರ ಬೆಂಬಲ ವ್ಯಕ್ತವಾಗಿದೆ ಎಂದರು.
ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಪರವಾಗಿದ್ದವರಿಗೆ ಮಾತ್ರ ಟಿಕೆಟ್ ನೀಡಿದ ಕಾರಣ ಬಿಜೆಪಿ ಬಲ 60ಕ್ಕೆ ಕುಸಿದಿದೆ.ಕೇಂದ್ರದ ನಾಯಕರು ಕೂಡಾ ಯಡಿಯೂರಪ್ಪ ಬಿಟ್ಟರೆ ಬೇರೆ ಯಾರೂ ಕರ್ನಾಟಕದಲ್ಲಿ ಇಲ್ಲ ಎನ್ನುವ ಭ್ರಮೆಯಲ್ಲಿದ್ದಾರೆ. ಹಿಂದುತ್ವ, ರಾಷ್ಟ್ರೀಯತೆ ಉಳಿಯಬೇಕಾದರೆ, ಕಾಂಗ್ರೆಸ್ ಸಂಸ್ಕೃತಿಯ ಕುಟುಂಬ ರಾಜಕಾರಣದಿಂದ ಬಿಜೆಪಿಯನ್ನು ಮುಕ್ತಗೊಳಿಸ ಬೇಕಾಗಿದೆ ಎಂದು ಈಶ್ವರಪ್ಪ ಹೇಳಿದರು.
ಮಾಜಿ ಕಾರ್ಪೋರೇಟರ್ ನವೀನ್‌ಚಂದ್ರ, ಉದ್ಯಮಿ ಕೃಷ್ಣ ಶೆಟ್ಟಿ, ಮಹೇಶ್, ಉಮೇಶ್ ಆರಾಧ್ಯ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.