ಹೇಳಿಕೆ ನೀಡುವಾಗ ಶಾಸಕ ರಮೇಶ್ ಕುಮಾರ್ ವಿವೇಚನೆ ಎಲ್ಲಿ ಹೋಗಿತ್ತು?

Published on

ಕೋಲಾರ: ಮಹಿಳೆಯರ ಮೇಲಿನ ಅತ್ಯಾಚಾರದ ಕುರಿತು ಶಾಸಕ ಕೆ.ಆರ್.ರಮೇಶ್ ಕುಮಾರ್ ಬೆಳಗಾವಿ ಅಧಿವೇಶನದಲ್ಲಿ ನೀಡಿರುವ ಹೇಳಿಕೆ ಖಂಡಿಸಿ ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.

ಎಸ್ಸೆನ್ನಾರ್ ಜಿಲ್ಲಾಸ್ಪತ್ರೆ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ರಮೇಶ್‌ಕುಮಾರ್ ವಿರುದ್ಧ ಘೋಷಣೆ ಕೂಗುತ್ತಾ ಎಂ.ಜಿ ರಸ್ತೆ, ಡಿವಿಜಿ ರಸ್ತೆ ಮಾರ್ಗವಾಗಿ ಮೆಕ್ಕೆ ವೃತ್ತದವರೆಗೆ ಮೆರವಣಿಗೆಯಲ್ಲಿ ಕಲ್ಪಿತ ಶವಯಾತ್ರೆ ನಡೆಸಿದರು.

ನೂರಾರು ಮಹಿಳೆಯರು ಮೆಕ್ಕೆ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ಮಾಡಿದರಲ್ಲದೆ ಅಣಕು ಶವಕ್ಕೆ ಪೊರಕೆಯಿಂದ ಹೊಡೆದು ಪ್ರತಿಕೃತಿ ದಹಿಸಿದರು.

ಜೆಡಿಎಸ್ ತಾಲೂಕು ಅಧ್ಯಕ್ಷೆ ಕೆ.ಆರ್.ರಾಜರಾಜೇಶ್ವರಿ ಮಾತನಾಡಿ, ವಿವೇಚನೆ ಬಗ್ಗೆ ನೀತಿ ಪಾಠ ಹೇಳುವ ರಮೇಶ್ ಕುಮಾರ್‌ಗೆ ಸದನದಲ್ಲಿ ಮಾತನಾಡುವಾಗ ವಿವೇಚನೆ ನೆನಪಿಗೆ ಬರಲಿಲ್ಲವೇ, ಅವರ ನಡವಳಿಕೆ ಎಂತಹದ್ದು ಎಂದು ಕ್ಷೇತ್ರದ ಜನತೆಗೆ ಪ್ರಾರಂಭದಿಂದಲೂ ಗೊತ್ತು. ಅವರ ಹೇಳಿಕೆಯಿಂದ ಇಡೀ ಜಿಲ್ಲೆಯ ಜನ ತಲೆ ತಗ್ಗಿಸುವಂತೆ ಮಾಡಿ ಮನಸ್ಸಿನ ವಿಕೃತಿಯನ್ನು ಮತ್ತೊಮ್ಮೆ ತೋರಿಸಿದ್ದಾರೆ ಎಂದು ಟೀಕಿಸಿದರು.

ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ಸದನದಲ್ಲಿ ಎಲ್ಲ ವಿಷಯಗಳ ಬಗ್ಗೆ ಮಹಾ ಮೇಧಾವಿ, ತಾನೊಬ್ಬನೇ ಸತ್ಯವಂತ ಎಂಬರ್ಥದಲ್ಲಿ ಗಂಟೆಗಟ್ಟಲೆ ಮಾತನಾಡುವ ಮುನ್ನ ಯಾವ ಮಾತು ಆಡಬೇಕು, ಅಸಂವಿಧಾನಿಕ ಪದಗಳು ಯಾವುದು ಎಂಬ ಬಗ್ಗೆ ಕನಿಷ್ಠ ಜ್ಞಾನ ಇಲ್ಲದೆ ಸಮಾಜಕ್ಕೆ ಕಳಂಕ ತರುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಟೀಕಿಸಿದರು.

ಸದನದಲ್ಲಿ ಆಡಿದ ಒಂದೇ ಒಂದು ಹೇಳಿಕೆಯಿಂದ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ ಸೇರಿ ಜಿಲ್ಲೆಯ ಮಾನವನ್ನು ದೇಶದಲ್ಲಿ ಹರಾಜು ಹಾಕಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸಮಾಜ ವಿರೋಧಿ ಹೇಳಿಕೆ ನೀಡುವವರಿಗೆ ಮತದಾರರು ತಕ್ಕ ಉತ್ತರ ನೀಡಬೇಕು ಎಂದರು.

ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ಜಿಪಂ ಮಾಜಿ ಸದಸ್ಯ ಕಿತ್ತಂಡೂರು ನಂಜುಂಡಪ್ಪ, ತಾಪಂ ಮಾಜಿ ಸದಸ್ಯ ಗೋಪಾಲಗೌಡ, ಮುಖಂಡರಾದ ವಡಗೂರು ರಾಮು, ಜನಪನಹಳ್ಳಿ ಆನಂದ್, ಅನುಭ್, ರಾಜೇಂದ್ರ, ರಾಮಾಂಜಿ, ನಾಗೇಶ್ ಇತರರಿದ್ದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ: ಡಾ.ಬಿ.ಆರ್.ಅಂಬೇಡ್ಕರ್, ಸಂವಿಧಾನದ ಬಗ್ಗೆ ಗಂಟೆಗಟ್ಟಲೆ ಮಾತನಾಡುವ ರಮೇಶ್ ಕುಮಾರ್ ಶೋಷಣೆ, ದೌರ್ಜನ್ಯ, ಕ್ರೌರ್ಯ, ಅತ್ಯಾಚಾರಕ್ಕೆ ಪ್ರೋತ್ಸಾಹಿಸುವುದು ಸಂವಿಧಾನ ವಿರೋಧಿ ಕ್ರಮವಾಗಿದೆ ಎಂಬುದು ಗೊತ್ತಿಲ್ಲವೇ? ಉನ್ನತ ಸ್ಥಾನದಲ್ಲಿದ್ದುಕೊಂಡು ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿರುವ ರಮೇಶ್ ಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಹಾಗೂ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು, ಇಲ್ಲವೇ ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ರಾಜರಾಜೇಶ್ವರಿ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net