

ಕೋಲಾರ: ದೇಶ ಸಂದಿಗ್ಧ ಪರಿಸ್ಥಿತಿ ಎದುರಿಸುವಾಗ ಕರೊನಾ ಸೋಂಕಿತರ ಚಿಕಿತ್ಸೆಗೆ ಕಾರ್ಪೋರೇಟ್ ಆಸ್ಪತ್ರೆಗಳು ಮುಂದೆ ಬರುತ್ತಿಲ್ಲ, ಸರ್ಕಾರಿ ಆಸ್ಪತ್ರೆಗಳೇ ಬೇಕಾಗಿವೆ ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ಹೇಳಿದರು.
ನಗರದ ಇಟಿಸಿಎಂ ಆಸ್ಪತ್ರೆಯಲ್ಲಿ ಇಟಿಸಿಎಂ-ನೈಟಿಂಗೇಲ್ ಮೆಡಿಕಲ್ ಟ್ರಸ್ಟ್‌ನ ಜಿರಿಯಾಟ್ರಿಕ್ ಘಟಕವನ್ನು ಶನಿವಾರ ಉದ್ಘಾಟಿಸಿ ಮಾತನಾಡಿ, ಹಿಂದೆ ವ್ಯವಸ್ಥಿತ ಸಂಚು ರೂಪಿಸಿ ಸರ್ಕಾರಿ ಆಸ್ಪತ್ರೆಗಳನ್ನು ಒನ್ ವೇ ಆಸ್ಪತ್ರೆಗಳೆಂದು ಹೀಯಾಳಿಸಲಾಗುತ್ತಿತ್ತು. ಈಗ ಅಂತಹ ಆಸ್ಪತ್ರೆಗಳನ್ನೇ ಕರೊನಾ ಚಿಕಿತ್ಸೆಗೆ ನಂಬುವಂತಾಗಿದೆ. ಸರ್ಕಾರಿ ಆಸ್ಪತ್ರೆಗಳು ಕರೊನಾವನ್ನು ಸಮರ್ಥವಾಗಿ ನಿಭಾಯಿಸುತ್ತಿವೆ ಎಂದು ಶ್ಲಾಘಿಸಿದರು.
ಬಡ ರೋಗಿ ಖಾಸಗಿ ಆಸ್ಪತ್ರೆಗಳಲ್ಲಿ ಸತ್ತರೆ ಬಿಲ್ ಚುಕ್ತಾ ಆಗದೆ ಹೆಣವನ್ನೂ ತೆಗೆಯಲಾರದ ಪರಿಸ್ಥಿತಿ ಮನಗಂಡು ನಾನು ಆರೋಗ್ಯ ಸಚಿನವಾಗಿದ್ದಾಗ ಕೆಪಿಎಂಇ ಕಾಯ್ದೆಗೆ ತಿದ್ದುಪಡಿ ತಂದಿದ್ದೆ. ಆಗ ಕೆಲ ಸಂಘಟನೆಗಳು ಇದರ ವಿರುದ್ಧ ಹೋರಾಟ ಮಾಡಿದವು, ಕೆಲವರು ಹಣ ಸಂಗ್ರಹಿಸಿ ನನ್ನನ್ನು ಸೋಲಿಸಲು ಪ್ರಯತ್ನಿಸಿದರು. ಆದರೆ ಅವರ ಆಟ ನಡೆಯಲಿಲ್ಲ ಎಂದರು.
ವೈದ್ಯಕೀಯ ಸೇವೆ ಮತ್ತು ಶಿಕ್ಷಣ ವ್ಯಾಪಾರೀಕರಣಗೊಂಡಿದೆ. ಈ ವಿಚಾರದಲ್ಲಿ ನಾನು ಹೆಚ್ಚು ಮಾತನಾಡುವುದಿಲ್ಲ. ಕಾಯಿಲೆ ಬಡವ, ಶ್ರೀಮಂತ ಎನ್ನದೆ ಎಲ್ಲರಿಗೂ ಬರುತ್ತದೆ. ಹಣವಿದ್ದವರಿಗೆ ಮಾತ್ರ ವೈದ್ಯಕೀಯ ಸೇವೆ ಎಂದಾದರೆ ಹಣವಿಲ್ಲದವರ ಗತಿ ಏನು ಎಂದು ಪ್ರಶ್ನಿಸಿದರು.
ವೈದ್ಯಕೀಯ ಶಿಕ್ಷಣ ಪಡೆಯುವವರಿಂದ ನಾನು ಸೇವೆಯಲ್ಲಿ ಕಪಟತನ ತೋರುವುದಿಲ್ಲವೆಂದು ಪ್ರಮಾಣ ಮಾಡಿಸಿಕೊಳ್ಳಲಾಗುತ್ತದೆ. ಇಂದಿನ ಸ್ಥಿತಿ ನೋಡಿದರೆ ಪ್ರಮಾಣಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ. ಹಾಗಾಗಿ ಪ್ರಮಾಣ ಮಾಡುವುದನ್ನು ಕಾನೂನಿನಿಂದ ತೆಗೆದು ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ಇಟಿಸಿಎಂ ಆಸ್ಪತ್ರೆ ಕಳೆದ ಒಂದು ಶತಕದ ಮಟ್ಟಿಗೆ ಉತ್ತಮ ಸೇವೆ ಸಲ್ಲಿಸಿದೆ ಇಲ್ಲಿ ಕೆಲಸ ಮಾಡಿದ ಅನೇಕ ವೈದ್ಯರು ಉತ್ತಮ ಚಿಕಿತ್ಸೆ ನೀಡಿ ಜನರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ. ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಮಿಷನರಿಗಳು ಸಲ್ಲಿಸಿರುವ ಸೇವೆ ಅಮೋಘವಾದ್ದದು ಎಂದು ಸ್ಮರಿಸಿದರು.
ನೈಟಿಂಗೇಲ್ ಟ್ರಸ್ಟ್‌ನ ಸಹ ಸಂಸ್ಥಾಪಕಿ ಡಾ.ರಾಧಾ ಎಸ್.ಮೂರ್ತಿ ಧ್ಯೇಯೋದ್ಧೇಶಗಳನ್ನು ವಿವರಿಸಿದರು. ಮೆಥೋಢಿಸ್ಟ್‌ನ ಜಿಲ್ಲಾ ಮೇಲ್ವಿಚಾರಕ ರೆ.ಶಾಂತಕುಮಾರ್, ಆಸ್ಪತ್ರೆ ಆಡಳಿತಾಧಿಕಾರಿ ಡಾ.ಜಾನ್ಸನ್ ಕುಂದರ್, ಟ್ರಸ್ಟ್‌ನ ಸಹ ಸಂಸ್ಥಾಪಕ ಎಸ್.ಪ್ರೇಮ್‌ಕುಮಾರ್ ರಾಜ್ ಇದ್ದರು.