

ಪಾ.ಶ್ರೀ.ಅನಂತರಾಮ್ ಕೋಲಾರ
ಕೆಸಿ ವ್ಯಾಲಿ ಯೋಜನೆ ಸೇರಿ ಈ ಹಿಂದೆ ಜಿಲ್ಲೆಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಕೊಂಕು ಮಾತುಗಳನ್ನಾಡುವವರಿಗೆ ಪ್ರತಿಕ್ರಿಯೆ ನೀಡಲ್ಲ, ನಮಗೆಲ್ಲ ದೊಡ್ಡವನಾದ ಪರಮಾತ್ಮನೋಡಿಕೊಳ್ಳುತ್ತಾನೆ ಎಂದು ಜಿಲ್ಲೆಯ ಹಿರಿಯ ರಾಜಕಾರಣಿ, ಮಾಜಿ ಸಚಿವ ಕೆ.ಆರ್.ರಮೇಶ್ ಕುಮಾರ್ ವೈರಾಗ್ಯದ ನುಡಿಗಳನ್ನಾಡಿದರು.
ಕೆಸಿ ವ್ಯಾಲಿ ಯೋಜನೆ ಮುಖೇನ ಕೆರೆಗಳಿಗೆ ನೀರು ಹರಿಯುತ್ತಿರುವ ವಿಚಾರವಾಗಿ ಕೆಲ ಶಾಸಕರು ವ್ಯಕ್ತಪಡಿಸಿರುವ ಅಸಮಾಧಾನಕ್ಕೆ ಸೋಮವಾರ ವಿಜಯವಾಣಿಯೊಂದಿಗೆ ಪ್ರತಿಕ್ರಿಯಿಸಿ, ತಿಳಿವಳಿಕೆ ಕೊರತೆಯಿಂದ ನನ್ನ ವಿರುದ್ಧ ಮಾತನಾಡುವವರಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದರು.
ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಎಲ್ಲ ತಾಲೂಕುಗಳ ಅಭಿವೃದ್ಧಿಗೆ ಗಮನ ಹರಿಸಿದ್ದೇನೆಯೇ ಹೊರತು ನನ್ನ ಕ್ಷೇತ್ರಕ್ಕೆ ಹೆಚ್ಚಿನದೇನನ್ನೂ ತೆಗೆದುಕೊಂಡು ಬಂದಿಲ್ಲ, ಕೆಸಿ ವ್ಯಾಲಿ ಯೋಜನೆ ಮೂಲಕ 400 ಎಂಎಲ್‌ಡಿ ನೀರು ಪಡೆಯುವ ಹಕ್ಕು ನಮಗಿದೆ. ಈಗಾಗಲೆ 280 ಎಂಎಲ್‌ಡಿ ನೀರು ಕೆರೆಗಳಿಗೆ ಸೇರುತ್ತಿದೆ, ಇನ್ನೂ ನಾಲ್ಕು ಎಸ್‌ಟಿಪಿಗಳು ಸಿದ್ಧವಾದರೆ ಸೆಪ್ಟೆಂಬರ್‌ನೊಳಗೆ ಎಲ್ಲ 126 ಕೆರೆಗಳು ಭರ್ತಿ ಆಗಲಿವೆ ಎಂದರು.
ಕೆಸಿ ವ್ಯಾಲಿ ಎರಡನೇ ಹಂತದ ಯೋಜನೆಗೂ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಮೊದಲ ಹಂತದ ಕೆಲಸ ಮುಗಿದ ಕೂಡಲೇ ಇನ್ನೊಂದು ವರ್ಷದಲ್ಲಿ ಹೆಚ್ಚುವರಿಯಾಗಿ 200 ಕೆರೆಗಳಿಗೆ ನೀರು ಹರಿಸಲಾಗುತ್ತದೆ. ಎತ್ತರ ಪ್ರದೇಶದ ಕೆರೆಗಳು ತುಂಬಿದಲ್ಲಿ ಮಾತ್ರ ತಗ್ಗು ಪ್ರದೇಶದ ಕೆರೆಗಳಿಗೆ ನೀರು ಹರಿಯಲು ಸಾಧ್ಯ. ಈ ವಿಚಾರ ತಿಳಿಯದೆ ಇನ್ನೊಬ್ಬರ ಬಗ್ಗೆ ಟೀಕೆ ಮಾಡುವುದು ತಪ್ಪು, ಈ ಯೋಜನೆಯಲ್ಲಿ ನನ್ನ ಸ್ವಾರ್ಥವೇನೂ ಇಲ್ಲ ಎಂದು ಖಚಿತಪಡಿಸಿದರು.
ಕೆಸಿ ವ್ಯಾಲಿ ನೀರನ್ನು ಜೇಬಿನಲ್ಲಿಟ್ಟುಕೊಂಡು ಕೆರೆಗಳಿಗೆ ತುಂಬಿಸಲು ಸಾಧ್ಯವಿಲ್ಲ. ಒಂದು ಕೆರೆಯಿಂದ ಮತ್ತೊಂದು ಕೆರೆಗೆ ನೀರು ಹರಿಯುವಂತಾಗಲು ಯೋಜನೆ ಸಿದ್ಧಪಡಿಸಲಾಗಿದೆ, ಶಿವಾರಪಟ್ಟಣ ಕೆರೆ ತುಂಬಿದೆ, ಈ ಮೂಲಕ ಬಂಗಾರಪೇಟೆ ತಾಲೂಕು, ಹೊಳಲಿ ಮೂಲಕ ಮುಳಬಾಗಿಲು ಕೆರೆಗಳನ್ನು ತುಂಬಿಸಬೇಕಾಗಿದೆ. ಬೇರೆ ಯಾರಲ್ಲೋ ಇರುವ ಗೊಂದಲಕ್ಕೆ ನಾನೇಕೆ ಹೊಣೆಗಾರನಾಗಲಿ ಎಂದು ತಮ್ಮ ವಿರುದ್ಧ ಅಸಮಾಧಾನಗೊಂಡಿರುವ ಸ್ವಪಕ್ಷದ ಶಾಸಕರ ಹೆಸರು ಪ್ರಸ್ತಾಪಿಸದೆ ಸೂಚ್ಯವಾಗಿ ಉತ್ತರಿಸಿದರು.
ನೀರಿನ ವಿಚಾರದಲ್ಲಿ ರಾಜಕಾರಣ ಮಾಡುವಷ್ಟು ಸಣ್ಣವನಲ್ಲ ನಾನು. ನನಗೆ ದೊಡ್ಡ ಮನುಷ್ಯರ ಸರ್ಟಿಫಿಕೇಟ್ ಬೇಡ, ಚರಂಡಿಯಲ್ಲಿ ಹರಿಯುವ ನೀರು ಕುಡಿಯುವ ಹೀನ ಸ್ಥಿತಿಯಲ್ಲಿರುವ ಬಡವರು ನನ್ನ ಕೆಲಸ ಒಪ್ಪಿ ಆಶೀರ್ವದಿಸಿದರೆ ಅದೇ ನನಗೆ ದೊಡ್ಡ ಸರ್ಟಿಫೀಕೆಟ್ ಎಂದು ಆಕ್ರೋಶಭರಿತರಾಗಿ ಪ್ರತಿಕ್ರಿಯಿಸಿದರು.
ಕೆಸಿ ವ್ಯಾಲಿ ನೀರಿನ ವಿಚಾರವಾಗಿ ನನ್ನಲ್ಲಿ, ಜಿಲ್ಲೆಯ ಜನತೆಯಲ್ಲಿ ಯಾವುದೇ ಗೊಂದಲವಿಲ್ಲ. ಗೊಂದಲವಿದ್ದವರು ಸರ್ಕಾರದ ಬಳಿ ಇರುವ ಯೋಜನೆಗೆ ಸಂಬಂಧಿಸಿದ ವರದಿ ನೋಡಿ ಬಗೆಹರಿಸಿಕೊಳ್ಳಬಹುದು. ಅದು ಬಿಟ್ಟು ಗುಬ್ಬಿ ಮೇಲೇಕೆ ಬ್ರಹ್ಮಾಸ್ತ್ರ ಎಂದು ಪ್ರಶ್ನಿಸಿದರು.
ದ್ವೇಷದ ಮಾತುಗಳೇಕೆ?: ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಯರಗೋಳ್ ಯೋಜನೆ ಕಾಮಗಾರಿ ವೇಗ ಹೆಚ್ಚಿಸಿದೆ. ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಾಣ ಕಾರ್ಯ ಮುಗಿಸಿದೆ. ಎತ್ತಿನ ಹೊಳೆ ಯೋಜನೆ ಮೂಲಕ ಬಯಲು ಸೀಮೆ ಜಿಲ್ಲೆಗಳಿಗೆ ನೀರು ಹರಿಸುವ ಯೋಜನೆ ಕಾಮಗಾರಿಗೆ ಇದ್ದ ಅಡೆತಡೆ ನಿವಾರಿಸಿದ್ದೇನೆ. ಈ ಎಲ್ಲ ಅಭಿವೃದ್ಧಿ ಕೆಲಸದಿಂದ ನನ್ನ ಕ್ಷೇತ್ರಕ್ಕೆ ಏನೂ ಲಾಭವಿಲ್ಲ, ಆದರೂ ದ್ವೇಷದ ಮಾತುಗಳೇಕೆ ಎಂದು ರಮೇಶ್‌ಕುಮಾರ್ ಭಾವುಕರಾದರು.