

ಶ್ರೀನಿವಾಸಪುರ: ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಭಾಷಣ ಮಾಡುವುದು, ನೋಟ್ ಅಮಾನ್ಯಿಕರಣಗೊಳಿಸಿದ್ದು ಬಿಟ್ಟರೆ ಸಾರ್ವಜನಿಕವಾಗಿ ಪ್ರಯೋಜನಕ್ಕೆ ಬರುವ ಯಾವುದೇ ಅಭಿವೃದ್ಧಿ ಮಾಡಿಲ್ಲ. ಬಿಜೆಪಿ ಅಬ್ಬರದ ನಡುವೆಯೂ ಕ್ರೇಜಿವಾಲ್ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ ಎಂದರೆ ಅಭಿವೃದ್ಧಿಗೆ ಪ್ರಜಾಪ್ರಭುತ್ವದಲ್ಲಿ ಬೆಲೆ ಇದೆ ಎಂಬುದು ಸಾಭೀತಾಯಿತು ಎಂದು ಮಾಜಿ ಸ್ಪೀಕರ್, ಶಾಸಕ ಕೆ.ಆರ್.ರಮೇಶ್‌ಕುಮಾರ್ ಹೇಳಿದರು.
ಕಸಬಾ ಹೋಬಳಿಯ ಜೆ.ತಿಮ್ಮಸಂದ್ರ ಗ್ರಾಪಂ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ಸ್ಥಳೀಯ ಸರ್ಕಾರಗಳು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ಗ್ರಾಮಗಳಿಗೆ ತೆರಳಿ ಗ್ರಾಮಸಭೆ ನಡೆಸಿ ಗ್ರಾಮಕ್ಕೆ ಅಗತ್ಯವಿರುವ ಮೂಲಸೌಕರ್ಯ ಒದಗಿಸಿಕೊಡಬೇಕು. ಸದಸ್ಯರಾಗಿ ಆಯ್ಕೆಯಾಗುವವರು ಗ್ರಾಮದ ಕಷ್ಟ ಸುಖ ಬಗೆಹರಿಸಬೇಕೇ ಹೊರತು ಅಧಿಕಾರದ ದರ್ಪ ತೋರಬಾರದು ಎಂದರು.
ಗ್ರಾಪಂ ಚುನಾವಣೆ ಸಮೀಪಿಸುತ್ತಿವೆ. ಇದಕ್ಕೆ ಪಕ್ಷದ ಚಿಹ್ನೆ ಇರುವುದಿಲ್ಲ. ಜನರಿಗೆ ಅಗತ್ಯವಿರುವ ಮೂಲ ಸೌಲಭ್ಯ ನೀಡಿ ಗೌರವದಿಂದ ನಡೆದುಕೊಂಡರೆ ಮಾತ್ರ ಗೆಲ್ಲಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ವಿಧಾನಸಭೆ, ಲೋಕಸಭೆ ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಪಂಚಾಯಿತಿಗಳು ಗ್ರಾಮಸಭೆ ನಡೆಸುವ ಮೂಲಕ ಪಕ್ಷಭೇದ ಮರೆತು ಸೌಭ್ಯ ನೀಡಬೇಕು. ಕಳೆದ ಬಾರಿ ತಾಲೂಕಿನ 475 ಗ್ರಾಮಗಳಿಗೆ ನಾನೇ ಭೇಟಿ ನೀಡಿ ಪಕ್ಷಾತೀತವಾಗಿ 18 ಸಾವಿರ ಮನೆಗಳನ್ನು ನೀಡಿದ ಪರಿಣಾಮ ಇಂದು ಗುಡಿಸಲು ರಹಿತ ತಾಲೂಕಾಗಿ ನೋಡಲು ಸಾಧ್ಯವಾಯಿತು ಎಂದರು.
ಮುಂದಿನ ದಿನಗಳಲ್ಲಿ ನಗರಗಳಿಗಿಂತ ಸುಂದರವಾಗಿ ಗ್ರಾಮೀಣ ಪ್ರದೇಶವನ್ನು ನೋಡುವ ಮಹಾದಾಸೆ ಇದೆ. ಪ್ರತಿ ಗ್ರಾಮಕ್ಕೂ ಸಿಮೆಂಟ್ ರಸ್ತೆ, ಚರಂಡಿ ಮತ್ತು ಕಸ ವಿಲೇವಾರಿ ಘಟಕ ನಿರ್ಮಿಸಲಾಗುವುದು. ಇಷ್ಟೆಲ್ಲ ಅಭಿವೃದ್ಧಿಯತ್ತ ನಾವು ಸಾಗುತ್ತಿದ್ದರೂ ನಮ್ಮ ಮೇಲೆ ಇಲ್ಲ-ಸಲ್ಲದ ಆರೋಪಗಳು ಬರುತ್ತಲೇ ಇವೆ. ಅವುಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ನನ್ನಲ್ಲಿ ಎಷ್ಟೇ ಪರಿಶೋಧನೆ ಮಾಡಿದರೂ, ಪ್ರಕರಣಗಳು ದಾಖಲು ಮಾಡಿದರೂ, ಅಕ್ರಮ ಮತ್ತು ಸ್ವಾರ್ಥ ಕಾಣುವುದಿಲ್ಲ. ನನ್ನ ಆಸ್ತಿ ಮತ್ತು ಸಂಪಾದನೆಸಮತೋಲನವಾಗಿದೆ. ವಿನಾಕಾರಣ ಮಾನಸಿಕವಾಗಿ ತೊಂದರೆ ನೀಡುತ್ತಿದ್ದಾರೆ ಎಂದರು.
ಗ್ರಾಪಂ ಅಧ್ಯಕ್ಷ ವೆಂಕಟರೆಡ್ಡಿ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಆಲವಟ ಶ್ರೀರಾಮರೆಡ್ಡಿ, ಕೋಚಿಮುಲ್ ನಿರ್ದೇಶಕ ಹನುಮೇಶ್, ಮಾಜಿ ನಿರ್ದೇಶಕ ಮುನಿವೆಂಕಟಪ್ಪ, ಜಿಪಂ ಮಾಜಿ ಸದಸ್ಯ ಅಯ್ಯಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ತಾಪಂ ಅಧ್ಯಕ್ಷ ನರೇಶ್, ಸದಸ್ಯೆ ಲಕ್ಷ್ಮೀದೇವಮ್ಮ, ಮಾಜಿ ಸದಸ್ಯ ಕೆ.ಕೆ.ಮಂಜುನಾಥ್‌ರೆಡ್ಡಿ, ಗುತ್ತಿಗೆದಾರರಾದ ಎ.ಎಸ್.ಮಂಜುನಾಥರೆಡ್ಡಿ, ಆರ್.ಎನ್.ಚಂದ್ರಶೇಖರ್, ಎಪಿಎಂಸಿ ನಿರ್ದೇಶಕಿ ಕೆ.ವಿ.ರೂಪಾವತಿ, ಗ್ರಾಪಂ ಉಪಾಧ್ಯಕ್ಷೆ ಕೃಷ್ಣಮ್ಮ ಇದ್ದರು.