ಪ್ರತಿ ಗ್ರಾಪಂ ಮಟ್ಟದಲ್ಲಿ ಸಹಕಾರಿ ಕ್ಷೇತ್ರ ಬಲವರ್ಧನೆಗೆ ಒತ್ತು

13 Srinivaspur Photo Ph- 1.
Published on

ಶ್ರೀನಿವಾಸಪುರ: ಜನರ ಹಿತದೃಷ್ಟಿಯಿಂದ ಪ್ರತಿ ಗ್ರಾಪಂ ಮಟ್ಟದಲ್ಲಿ ಸಹಕಾರಿ ಬ್ಯಾಂಕ್ ಸ್ಥಾಪಿಸಿ ಸಹಕಾರಿ ಕ್ಷೇತ್ರವನ್ನು ಬಲವರ್ಧನೆ ಮಾಡಲಾಗುವುದು ಎಂದು ಮಾಜಿ ಸ್ಪೀಕರ್, ಶಾಸಕ ಕೆ.ಆರ್. ರಮೇಶ್‌ಕುಮಾರ್ ಹೇಳಿದರು.

ಲಕ್ಷ್ಮೀಸಾಗರದಲ್ಲಿ 27 ಲಕ್ಷ ರೂಪಾಯಿಯಲ್ಲಿ ಪ್ರವಾಸೋಧ್ಯಮ ಇಲಾಖೆಯಿಂದ ನಿರ್ಮಿಸಿರುವ ಯಾತ್ರಿನಿವಾಸ್ ಭವನವನ್ನು ಗುರುವಾರ ಲೋಕಾರ್ಪಣೆಗೊಳಿಸಿ ಮಾತನಾಡಿದದರು. ಹಿಂದಿನ ಸರ್ಕಾರದಲ್ಲಿ ಆರಂಭವಾದ ಅನೇಕ ಕಾಮಗಾರಿಗಳು ಪೂರ್ಣಗೊಂಡಿರುವುದು ಸಂತಸ ತಂದಿದೆ. ಇದರಿಂದ ಮತ್ತಷ್ಟು ಚೈತನ್ಯ ತುಂಬಿ ಮುಂದಿನ ಪೀಳಿಗೆಗೆ ನೀರನ್ನು ಸಂಗ್ರಹಿಸುವ ಕೆಲಸ ಮಾಡಬೇಕಿದೆ ಎಂದರು.

ಯಾತ್ರಿನಿವಾಸ ಭವನವನ್ನು ಗ್ರಾಪಂ ಕಾರ್ಯಾಯಕ್ಕೆ ಬಳಸಿಕೊಂಡು ಈಗಿರುವ ಗ್ರಾಪಂ ಕಟ್ಟಡವನ್ನು ಡಿಸಿಸಿ ಬ್ಯಾಂಕ್ ಮಾಡುವ ಯೋಜನೆ ರೂಪಿಸಲಾಗಿದೆ. ಇದರಿಂದ ಸಹಕಾರಿ ಕ್ಷೇತ್ರವನ್ನು ಇನ್ನಷ್ಟು ಬಲವರ್ಧನೆ ಮಾಡಿದಂತಾಗುತ್ತದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಈ ಚಿಂತನೆ ಮಾಡಲಾಗಿತ್ತು ಎಂದರು.

ಜಿಪಂ ಸದಸ್ಯ ಗೋವಿಂದಸ್ವಾಮಿ ಮಾತನಾಡಿ, ಶಾಸಕ ರಮೇಶ್ ಕುಮಾರ್ ಅವರ ಸಾಮಾಜಿಕ ನ್ಯಾಯದಡಿ ಗ್ರಾಮಗಳು ಸರ್ವತೋಮುಖ ಅಭಿವೃದ್ಧಿಯತ್ತ ಸಾಗಿವೆ. ಪ್ರತಿ ವರ್ಗದವರ ಬದುಕಿಗೆ ಅನುಸಾರವಾಗಿ ಯೋಜನೆ ರೂಪಿಸಿ ಪ್ರತಿ ಫಲಾನುಭವಿಗೂ ಸೌಲಭ್ಯ ಸಿಗುವಂತಾಗಿದೆ. ಪ್ರತಿ ಗ್ರಾಮದಲ್ಲಿ ಶುದ್ಧ ನೀರಿನ ಘಟಕ, ರಸ್ತೆ, ಚರಂಡಿ ನಿರ್ಮಾಣದೊಂದಿಗೆ ರಾಜ್ಯವನ್ನೇ ಹಸಿವುಮುಕ್ತ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಕೋಚಿಮುಲ್ ಮಾಜಿ ಅಧ್ಯಕ್ಷ ಕೊಂಡಸಂದ್ರ ಶಿವಾರೆಡ್ಡಿ, ತಾಪಂ ಸದಸ್ಯ ಶ್ರೀರಾಮಪ್ಪ, ಮಾಜಿ ಅಧ್ಯಕ್ಷ ಎಸ್.ವಿ. ಸುಧಾಕರ್, ಮಾಜಿ ಸದಸ್ಯೆ ಗೌರಮ್ಮ, ಗ್ರಾಪಂ ಅಧ್ಯಕ್ಷ ವಿನೋದ್ ಕುಮಾರ್, ಉಪಾಧ್ಯಕ್ಷೆ ರುಕ್ಮಿಣಿಯಮ್ಮ, ಯಲ್ದೂರು ವಿಎಸ್‌ಎಸ್‌ಎನ್ ಅಧ್ಯಕ್ಷ ನಾರಾಯಣಸ್ವಾಮಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ವೆಂಕಟೇಶಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಅಶೋಕ್, ಮಾಜಿ ಸದಸ್ಯ ನಾಗರಾಜ್, ಎಪಿಎಂಸಿ ನಿರ್ದೇಶಕ ಯೋಗೇಶ್‌ಗೌಡ ಇದ್ದರು.

ಮತ್ತೊಮ್ಮೆ ಮುಖ್ಯಮಂತ್ರಿಯಾಗ್ತಾರೆ: ಬೆಳೆಗಳಿಗೆ ಸ್ಥಳೀಯವಾಗಿ ದರ ನಿಗದಿಪಡಿಸಲು ಸಮಿತಿ ರಚನೆ ಜತೆಗೆ ಪಂಚಾಯಿತಿ ಮಟ್ಟದಲ್ಲಿ ಶೀತಲ ಕೇಂದ್ರ ಪ್ರಾರಂಭಿಸಬೇಕು. ಬೆಳೆಗಳನ್ನು ಸರ್ಕಾರವೇ ಖರೀದಿಸಲು ಕನಿಷ್ಠ 2 ಕೋಟಿ ರೂ., ಮೀಸಲಿಡಬೇಕೆಂದು ಕಾಂಗ್ರೆಸ್ ಆಡಳಿತಾವಧಿಯಲ್ಲಿ ಯೋಜನೆ ರೂಪಿಸಲಾಗಿತ್ತು. ಅದಕ್ಕಾಗಿ ಒಂದು ಸಮಿತಿ ರಚಸಿ ನನ್ನನ್ನು ಅಧ್ಯಕ್ಷರಾಗಿ ನೇಮಿಸಲಾಗಿತ್ತು. ಇಂತಹ ಸಿದ್ದರಾಮಯ್ಯನವರನ್ನೇ ಸೋಲಿಸಿದ ಕೀರ್ತಿ ನಮ್ಮ ಜನತೆಗಿದೆ. ಇದಕ್ಕಿಂತ ತಪ್ಪು ನಿರ್ಧಾರ ಮತ್ತೊಂದಿಲ್ಲ. ಆದರೆ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತಾರೆ. ಜತೆಗೆ ಅವರು ಅಂದುಕೊಂಡ ಯೋಜನೆಗಳನ್ನು ಕಾರ್ಯಗತಗೊಳಿಸುವ ಜವಾಬ್ದಾರಿ ನನ್ನದು ಎಂದು ರಮೇಶ್‌ಕುಮಾರ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net