

ಕೋಲಾರ: ಕೇಂದ್ರ ಸರ್ಕಾರ ಎಲ್ಲ ನೀತಿ ನಿಯಮಗಳಿಗೆ ಗುಡ್‌ಬೈ ಹೇಳಿ ಕೋಚ್ ಫ್ಯಾಕ್ಟರಿ ರದ್ದುಪಡಿಸಿದ್ದಾಗಿ ಹೇಳುತ್ತಿರುವುದು ಸರ್ವಾಧಿಕಾರಿ ಧೋರಣೆ ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ವಾಗ್ದಾಳಿ ನಡೆಸಿದರು.
ಶ್ರೀನಿವಾಸಪುರದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ಬದಲು ರೈಲ್ವೆ ಕಾರ್ಯಾಗಾರ ಸ್ಥಾಪಿಸಲು ಮುಂದಾಗಿರುವ ಕುರಿತು ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಕೋಚ್ ಫ್ಯಾಕ್ಟರಿ ಮಂಜೂರಾಗಬೇಕಿದ್ದರೆ ಕ್ಯಾಬಿನೆಟ್ ತೀರ್ಮಾನ, ಯೋಜನಾ ಆಯೋಗ, ಅಲ್ಲಿಂದ ರೈಲ್ವೆ ಬೋರ್ಡ್‌ನಲ್ಲಿ ಎಸ್ಟಿಮೇಟ್ ಆಗಿ ಕ್ಯಾಬಿನೇಟ್‌ನ ಎಕನಾಮಿಕ್ ಅಫೇರ್ಸ್‌ನ ಉಪ ಸಮಿತಿ ಹಣಕಾಸು ವಿಭಾಗವು ಕ್ಲಿಯರೆನ್ಸ್ ಕೊಟ್ಟ ಮೇಲೆ ಸಂಸತ್‌ನಲ್ಲಿ ಅಂಕಿತಗೊಂಡು ಪಿಂಕ್ ಬುಕ್‌ಗೆ ಬರುತ್ತದೆ. ಇದನ್ನು ಬದಲಿಸಲು ಬರುವುದಿಲ್ಲ. ಹೊಸ ಕೋಚ್ ಫ್ಯಾಕ್ಟರಿ ಬೇಕಿಲ್ಲವೆಂದು ಕೇಂದ್ರದವರು ಹೇಳುವುದಾದರೆ ನಾವಾ ಎಸ್ಟಿಮೇಟ್ ನೀಡಿದ್ದು? ದೇಶಕ್ಕೆ ಎಷ್ಟು ಕೋಚ್‌ಗಳ ಅಗತ್ಯವಿದೆ ಎಂದು ರೈಲ್ವೆ ಬೋರ್ಡ್, ಕೇಂದ್ರ ಸರ್ಕಾರ, ರೈಲ್ವೆ ಮಂತ್ರಾಲಯಕ್ಕೆ ತಿಳಿದಿರಲಿಲ್ಲವೇ ಎಂದು ಪ್ರಶ್ನಿಸಿದರು.
ಕಾನೂನು ಬಲ್ಲವನಾಗಿ, ನಿಯಮಗಳ ಪರಿಚಯ ಇದ್ದವನಾಗಿ, ಎಲ್ಲ ಕಾನೂನಾತ್ಮಕ ಪ್ರಕ್ರಿಯೆ ಮುಗಿದಿದ್ದರಿಂದ ಕೋಚ್ ಫ್ಯಾಕ್ಟರಿ ಆಗಿಯೇ ಆಗುತ್ತದೆ ಎಂದು ಹೇಳಿದ್ದೆ. ಈಗಲೂ ಮಾತಿಗೆ ಬದ್ಧ. ಆದರೆ ದೇಶ ನಡೆಸುವವರು ಈ ಮನೋಭಾವಕ್ಕೆ ಬಂದು ಬಿಟ್ಟರೆ ಗತಿಯೇನು ಎಂದು ಕಳವಳ ವ್ಯಕ್ತಪಡಿಸಿದರು.
ಮುನಿಯಪ್ಪ ಕೋಚ್ ಫ್ಯಾಕ್ಟರಿಗಾಗಿ ಹೋರಾಟ ಮಾಡುವುದಾದರೆ ಸಂತೋಷ. ನಾನು ಹುಟ್ಟಿದಾಗಿನಿಂದ ನಿರಂತರ ಹೋರಾಟ ಮಾಡಿಕೊಂಡೇ ಬರುತ್ತಿದ್ದೇನೆ. ಹೀಗಿರುವಾಗ ಕೋಚ್ ಫ್ಯಾಕ್ಟರಿಗೆ ಹೊಸದಾಗಿ ಹೋರಾಟ ಶುರು ಮಾಡುವ ಅಗತ್ಯವಿಲ್ಲ ಎಂದು ಟಾಂಗ್ ನೀಡಿದರು.
ರಾಜಕೀಯ ಬೇಸರ!: ರಾಜಕಾರಣ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಅವರು ಸಾರ್ವಜನಿಕ ಜೀವನಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಕೆಲ ದಿನಗಳಿಂದ ಮೌನ ವಹಿಸಿದ್ದೇನೆ. ಅಭಿವೃದ್ಧಿ ವಿಚಾರಕ್ಕಷ್ಟೇ ಪ್ರತಿಕ್ರಿಯೆ ನೀಡಿದ್ದೇನೆ ಎಂದರು.
ಕ್ಲಿಯರ್ ಮಾಡಿದ್ರೆ ಭೂಮಿ ಕೊಡ್ತಾರೆ: ತುಮಕೂರಿನ ಬೈರಗೊಂಡ್ಲು ಬಳಿ ಜಲಾಶಯ ನಿರ್ಮಾಣಕ್ಕೆ ಕೊರಟಗೆರೆ, ದೊಡ್ಡಬಳ್ಳಾಪುರದ ರೈತರ 2000 ಎಕರೆ ಜಮೀನು ಭೂ ಸ್ವಾಧೀನಗೊಳಿಸಬೇಕಿದ್ದು, ಪರಿಹಾರ ವಿತರಣೆಯಲ್ಲಿ ತಾರತಮ್ಯವಾಗದಂತೆ ಭೂ ಸ್ವಾಧೀನ ಕಾಯ್ದೆಯಲ್ಲಿ ವಿನಾಯಿತಿಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಸಚಿವ ಸಂಪುಟದಲ್ಲಿ ಕ್ಲಿಯರ್ ಮಾಡಿದರೆ ರೈತರು ಭೂಮಿ ಬಿಟ್ಟುಕೊಡುತ್ತಾರೆ. ಕೂಡಲೇ ಕೆಲಸ ಶುರುವಾದರೆ ಮುಂದಿನ ವರ್ಷವಾದರೂ ನೀರು ತರುವ ಆಸೆ ನಮ್ಮದು ಎಂದು ರಮೇಶ್‌ಕುಮಾರ್ ಹೇಳಿದರು.