

ಬೆಂಗಳೂರು: ಹೆಬ್ಬಾಳ ಮೇಲ್ಸೇತುವೆಯ ಹೆಚ್ಚುವರಿ ಪಥ ನಿರ್ಮಾಣದ ಭಾಗವಾಗಿ ಕೈಗೆತ್ತಿಕೊಂಡಿರುವ ಕೆ.ಆರ್.ಪುರ ಲೂಪ್ ಕಾಮಗಾರಿ ಶೀಘ್ರವೇ ಪೂರ್ಣಗೊಳ್ಳಲಿದ್ದು, ಆ.15ರ ವೇಳೆ ಸಂಚಾರಕ್ಕೆ ಮುಕ್ತಗೊಳಿಸಲು ಬಿಬಿಎಂಪಿ ಹಾಗೂ ಬಿಡಿಎ ಸಹಮತ ವ್ಯಕ್ತಪಡಿಸಿವೆ.
ಹೆಬ್ಬಾಳ ಜಂಕ್ಷನ್ ಅಭಿವೃದ್ಧಿಗೆ ಸಂಬಂಧಿಸಿ ಸೋಮವಾರ ಪಾಲಿಕೆ ಹಾಗೂ ಪೊಲೀಸ್ ಇಲಾಖೆಯ ಮುಖ್ಯಸ್ಥರು ಜಂಟಿ ಪರಿಶೀಲನೆ ನಡೆಸಿ ಕೆಲವೊಂದು ಉಪಕ್ರಮ ಕೈಗೊಳ್ಳಲು ಒಪ್ಪಿಕೊಳ್ಳಲಾಗಿದೆ. ಇದೇ ವೇಳೆ ಹೆಬ್ಬಾಳ ಜಂಕ್ಷನ್‌ನಲ್ಲಿ ಸಮಗ್ರ ಅಭಿವೃದ್ಧಿಗಾಗಿ ವಿನ್ಯಾಸ ರೂಪಿಸಿ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಬಿಬಿಎಂಪಿ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗಳಿಗೆ ಸೂಚಿಸಿದರು.
ಈ ವೇಳೆ ಮಾತನಾಡಿದ ಅವರು, ಹೆಬ್ಬಾಳ ಜಂಕ್ಷನ್‌ನಲ್ಲಿ ಬಿಡಿಎಯಿಂದ ಮೊದಲ ಹಂತದ ಕಾಮಗಾರಿ ನಡೆಯುತ್ತಿದ್ದು, ಕೆ.ಆರ್.ಪುರ ಕಡೆಯಿಂದ ನಗರದೊಳಗೆ ಬರುವ ಲೂಪ್ ಕೆಲಸ ಬಹುತೇಕ ಪೂರ್ಣಗೊಂಡಿದೆ. ಇದು ಉದ್ಘಾಟನೆಗೆ ಸಿದ್ದಗೊಂಡಿದ್ದು, ಶೀಘ್ರವೇ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಜತೆಗೆ ಮೆಟ್ರೋ ಕಾಮಗಾರಿ, ಕೆ-ರೈಡ್ ನಿಂದ ಸಬರ್ಬನ್ ರೈಲ್ವೇ ಕಾಮಗಾರಿ, ಪಾಲಿಕೆಯಿಂದ ಟನಲ್ ರಸ್ತೆ ಸೇರಿ ಇನ್ನಿತರ ಕಾಮಗಾರಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಜಂಕ್ಷನ್ ಅಭಿವೃದ್ಧಿಗೆ ವಿನ್ಯಾಸ ರೂಪಿಸಲು ಸೂಚಿಸಲಾಗಿದೆ ಎಂದರು.
ಜಲಾವೃತ ಸಮಸ್ಯೆಗೆ ಶಾಶ್ವತ ಪರಿಹಾರ:
ನಾಗವಾರ ಜಂಕ್ಷನ್‌ನಲ್ಲಿ ಮೆಟ್ರೋ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಇಲ್ಲಿ ಮಳೆಗಾಲದ ವೇಳೆ ಜಲಾವೃತವಾಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಹೊಸದಾಗಿ ಪೈಪ್‌ಲೈನ್ ಕಾಮಗಾರಿ ನಡೆಸಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಸೈಡ್ ಡ್ರೈನ್‌ಗಳಲ್ಲಿ ಸ್ವಚ್ಛತೆ ಕಾಪಾಡಿ ಸರಾಗವಾಗಿ ನೀರು ಹರಿದುಹೋಗುವಂತೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕೆ.ಆರ್.ಪುರ ಮೆಟ್ರೋ ನಿಲ್ದಾಣದ ಬಳಿ ಪಾದಚಾರಿಗಳ ಓಡಾಟಕ್ಕೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಸುಗಮ ಪಾದಚಾರಿ ಮಾರ್ಗ ನಿರ್ಮಾಣ ಮಾಡಬೇಕು. ಮೇಲ್ಸೇತುವೆ ಕೆಳಭಾಗದಲ್ಲಿ ಸ್ವಚ್ಛತೆ ಕಾಪಾಡಿ ಸೌಂದರ್ಯೀಕರಣ ಕೆಲಸ ಕೈಗೆತ್ತಿಕೊಳ್ಳಲು ಮುಖ್ಯ ಆಯುಕ್ತರು ಸೂಚಿಸಿದರು.
ತಪಾಸಣೆ ವೇಳೆ ಬಿಬಿಎಂಪಿ ಮುಖ್ಯ ಅಭಿಯಂತರ ಲೋಕೇಶ್, ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.
ಹೆಬ್ಬಾಳ ಜಂಕ್ಷನ್‌ನಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ವೇಳೆ ಸಂಚಾರಿ ಪೊಲೀಸ್ ವಿಭಾಗದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ರಿಂಗ್ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ತಗ್ಗಿಸಲು ಉಪಕ್ರಮ ಕೈಗೊಳ್ಳಲಾಗುತ್ತಿದೆ.
- ಸೀಮಂತ್ ಕುಮಾರ್ ಸಿಂಗ್, ನಗರ ಪೊಲೀಸ್ ಆಯುಕ್ತ