

ಕೆ.ಆರ್.ಪೇಟೆ: ನನ್ನ ಗೆಲುವಿಗೆ ಕಾರಣಕರ್ತರಾದ ಮತದಾರರ ಆಶಯದಂತೆ ಮುಂದಿನ ದಿನಗಳಲ್ಲಿ ಕೆಲಸ ನಿರ್ವಹಿಸಲಿದ್ದೇನೆ ಎಂದು ನೂತನ ಶಾಸಕ ಎಚ್.ಟಿ.ಮಂಜು ಭರವಸೆ ನೀಡಿದರು.
ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಸಂತೆಬಾಚಹಳ್ಳಿ ಮತ್ತು ರಂಗನಾಥಪುರ ಕ್ರಾಸ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ ತಿಳಿಸಿದರು. ನನ್ನ ಹಾಗೂ ಜೆಡಿಎಸ್ ಮೇಲೆ ನಂಬಿಕೆ ಇಟ್ಟು ಮತ ನೀಡುವ ಮೂಲಕ ತಾಲೂಕಿನಲ್ಲಿ ಬದಲಾವಣೆಯನ್ನು ತಂದಿದ್ದೀರಿ. ಕಳೆದ 3-4 ತಿಂಗಳಿನಿಂದಲೂ ನಿಮ್ಮೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ಮತದಾರರ ಹೃದಯದಲ್ಲಿ ಸ್ಥಾನ ಪಡೆದಿದ್ದೇನೆ. ಸಾಮಾನ್ಯ ಸೇವಕನಾಗಿ ಕೆಲಸ ಮಾಡುವ ಮೂಲಕ ನಿಮ್ಮ ಋಣ ತೀರಿಸಲಿದ್ದೇನೆ. ನಿಮ್ಮ ಕಷ್ಟಸುಖಗಳಲ್ಲಿ ಭಾಗಿಯಾಗಲಿದ್ದೇನೆ. ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಕಂಕಣಬದ್ಧನಾಗಿ ಕೆಲಸ ಮಾಡುವ ಮೂಲಕ ನಿಮ್ಮ ನಂಬಿಕೆ ಹುಸಿಯಾಗದಂತೆ ನೋಡಿಕೊಳ್ಳುತ್ತೇನೆ ಎಂದರು.
ತಾಲೂಕಿನ ಅಭಿವೃದ್ಧಿಗೆ ನಮ್ಮ ಶಕ್ತಿಮೀರಿ ಪ್ರಯತ್ನಿಸಲಾಗುವುದು. ಯಾವುದೇ ಕಾರಣಕ್ಕೂ ದ್ವೇಷ, ಮೋಸ, ವಂಚನೆ ಮುಂತಾದುವುಗಳಿಗೆ ಹಾಗೂ ಅನೈತಿಕ, ಅಕ್ರಮ ಚಟುವಟಿಕೆಗಳಿಗೆ ಗಮನ ಕೊಡದೇ ಅಣ್ಣತಮ್ಮಂದಿರಂತೆ ಎಲ್ಲ್ಲ ಸಮುದಾಯಗಳೊಂದಿಗೆ ವಿಶ್ವಾಸದಿಂದ ಜೀವನ ನಡೆಸುವ ಮೂಲಕ ಮಾದರಿಯಾಗೋಣ. ಸರ್ಕಾರದಿಂದ ದೊರೆಯಬಹುದಾದ ಎಲ್ಲ ರೀತಿಯ ಅನುದಾನಗಳನ್ನು ನನ್ನ ಶಕ್ತಿಮೀರಿ ತರಲು ಪ್ರಯತ್ನಿಸುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತಾಲೂಕಿನ ಅಭಿವೃದ್ಧಿಗೆ ಅರ್ಪಣಾ ಮನೋಭಾವದಿಂದ ಕೆಲಸ ಮಾಡಲಿದ್ದೇನೆ ಎಂದು ಭರವಸೆ ನೀಡಿದರು.
ಮನ್ಮುಲ್ ನಿರ್ದೇಶಕ ಡಾಲು ರವಿ ಮಾತನಾಡಿ, ಮಂಜಣ್ಣ ಜನಸಾಮಾನ್ಯರ ಕೈಗೆ ಸುಲಭವಾಗಿ ಸಿಗುವ ವ್ಯಕ್ತಿಯಾಗಿದ್ದು, ನಿಮ್ಮ ಗ್ರಾಮದ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸಲಿದ್ದಾರೆ ಎಂದರು.
ದೊಡ್ಡಕ್ಯಾತನಹಳ್ಳಿ, ಚಿಕ್ಕಕ್ಯಾತನಹಳ್ಳಿ, ಹುಬ್ಬನಹಳ್ಳಿಮ ಲೋಕನಹಳ್ಳಿ, ಹಡೇನಹಳ್ಳಿ, ಅಮಚಹಳ್ಳಿ, ಹೊಸಹಳ್ಳಿ, ಸಂತೇಬಾಚಹಳ್ಳಿ ಲಕ್ಷ್ಮೀಪುರ, ಸೋಮೇನಹಳ್ಳಿ, ಕೊತ್ತಮಾರನಹಳ್ಳಿ, ನಾಯಕನಹಳ್ಳಿ, ಕೊಡಗಹಳ್ಳಿ, ಬಿಕ್ಕಸಂದ್ರ, ಅಪ್ಪನಹಳ್ಳಿ, ಮಾವಿನಕಟ್ಟೆಕೊಪ್ಪಲು, ಮಾಳಗೂರು, ಹರಪನಹಳ್ಳಿ, ರಂಗನಾಥಪುರ, ಬೊಪ್ಪನಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಿಗೆ ಭೇಟಿ ನೀಡಿ ಮತದಾರರಿಗೆ ಕೃತಜ್ಞತೆ ಸಲ್ಲಿಸಲಾಯಿತು.
ಜೆಡಿಎಸ್ ತಾಲೂಕು ಅಧ್ಯಕ್ಷ ಜಾನಕೀರಾಮು, ತಾಪಂ ಮಾಜಿ ಸದಸ್ಯ ಮೋಹನ್, ಸಂತೇಬಾಚಹಳ್ಳಿ ಹೋಬಳಿ ಅಧ್ಯಕ್ಷ ರವಿಕುಮಾರ್, ನಿವೃತ್ತ ಶಿಕ್ಷಕ ಕೃಷ್ಣೇಗೌಡ ಇತರರು ಇದ್ದರು.