

ಮಂಡ್ಯ: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಲು ಸ್ವಪಕ್ಷದವರಿಗೆ ಕೋಟ್ಯಂತರ ರೂ ಹಣ ಸಂದಾಯವಾಗಿದೆ ಎನ್ನುವ ಆಡಿಯೋ ವಿವಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಗಳ ತಲುಪಿದೆ.
ಜೂ.19ರಂದು ವೈರಲ್ ಆಗಿದ್ದ ಆಡಿಯೋದಲ್ಲಿ ಹಣ ಸಂದಾಯದ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಪ್ರಮುಖವಾಗಿ ಮನ್‌ಮುಲ್ ನಿರ್ದೇಶಕ ಡಾಲು ರವಿ ಮಾತನಾಡಿದ್ದಾರೆನ್ನುವ ಆರೋಪ ಕೇಳಿಬಂದಿತ್ತು. ಈ ಸಂಬಂಧ ಕೆ.ಆರ್.ಪೇಟೆ ಕಾಂಗ್ರೆಸ್ ಮುಖಂಡರು ರವಿ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಕೆ.ಆರ್.ಪೇಟೆ ಪಟ್ಟಣ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಆದರೆ ಯಾವುದೇ ಬೆಳವಣಿಗೆಯಾಗದ ಹಿನ್ನೆಲೆಯಲ್ಲಿ ಜಿಲ್ಲಾ ಎಸ್ಪಿ ಎನ್.ಯತೀಶ್ ಅವರನ್ನು ಭೇಟಿ ಮಾಡಿ ಮತ್ತೊಂದು ದೂರು ದಾಖಲು ಸಲ್ಲಿಸಿದರು.
ಏನಿದು ವಿವಾದ?: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಲು ಹುನ್ನಾರ ನಡೆದಿತ್ತು. ಅದರಂತೆ ಪಕ್ಷದ ಮುಖಂಡರಿಗೆ ಹಣ ನೀಡಲಾಗಿತ್ತು. ವಿಜಯ್ ರಾಮೇಗೌಡಗೆ ಒಂದು ಕೋಟಿ ರೂ, ಸುರೇಶ್‌ಗೆ ಒಂದು ಕೋಟಿ ರೂ, ಪ್ರಕಾಶ್‌ಗೆ 70 ಲಕ್ಷ ರೂ, ನಾಗೇಂದ್ರ ಎಂಬುವರಿಗೆ 40 ಲಕ್ಷ ರೂ, ಕೃಷ್ಣಮೂರ್ತಿಗೆ 30 ರಿಂದ 35 ಲಕ್ಷ ರೂ, ಕೋಡಿಮಾರನಹಳ್ಳಿ ದೇವರಾಜುಗೆ 26 ಲಕ್ಷ ರೂ ನೀಡಲಾಗಿತ್ತು ಎನ್ನುವ ಆಡಿಯೋ ವೈರಲ್ ಆಗಿತ್ತು. ಇದನ್ನು ಡಾಲು ರವಿ ಮಾತನಾಡಿದ್ದಾರೆನ್ನುವ ಆರೋಪ ಕೇಳಿಬಂದಿತ್ತು.
ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿಯೇ ಸದ್ದು ಮಾಡಿತ್ತು. ಇದಾದ ಬಳಿಕ ಆರೋಪಕ್ಕೆ ಸಾಕ್ಷೃ ನೀಡುವಂತೆ ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದರು. ಆದರೆ ಯಾವುದೇ ಸ್ಪಂದನೆ ಸಿಗದ ಕಾರಣಕ್ಕೆ ಠಾಣೆಗೆ ಪ್ರತ್ಯೇಕ ದೂರುಗಳನ್ನು ನೀಡಿದ್ದರು. ಬಳಿಕವೂ ಯಾವುದೇ ಕ್ರಮವಾಗದ ಹಿನ್ನೆಲೆಯಲ್ಲಿ ಜಿಲ್ಲಾ ಎಸ್ಪಿಯನ್ನು ಭೇಟಿ ಮಾಡಿದರು.
ವೈಯಕ್ತಿಕ ಗೌರವಕ್ಕೆ ಧಕ್ಕೆ: ವಿಜಯ್ ರಾಮೇಗೌಡ, ಎಂ.ಡಿ.ಕೃಷ್ಣಮೂರ್ತಿ, ಕೋಡಿಮಾರನಹಳ್ಳಿ ದೇವರಾಜು, ಕಿಕ್ಕೇರಿ ಸುರೇಶ್ ಮತ್ತು ನಾಗೇಂದ್ರ ಜಿಲ್ಲಾ ಎಸ್ಪಿ ಅವರೊಂದಿಗೆ ಸುಮಾರು ಹೊತ್ತು ಚರ್ಚೆ ನಡೆಸಿದರು. ಸಾಕ್ಷಾೃಧಾರವಿಲ್ಲದೇ ಮಾಡಿರುವ ಆರೋಪದಿಂದ ನಮ್ಮ ವೈಯಕ್ತಿಕ ಗೌರವಕ್ಕೆ ಧಕ್ಕೆಯಾಗಿದೆ. ಮಾತ್ರವಲ್ಲದೆ ಸಾರ್ವಜನಿಕ ಹಾಗೂ ರಾಜಕೀಯ ಭವಿಷ್ಯಕ್ಕೆ ಚ್ಯುತಿ ಉಂಟಾಗಿದೆ. ಪಕ್ಷದ ಕಾರ್ಯಕರ್ತರು ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು. ದೂರು ಸ್ವೀಕರಿಸಿದ ಜಿಲ್ಲಾ ಎಸ್ಪಿ ಎನ್.ಯತೀಶ್, ಪ್ರಕರಣದ ಬಗ್ಗೆ ತನಿಖೆ ನಡೆಸಿ ಕ್ರಮ ವಹಿಸುವ ಭರವಸೆ ನೀಡಿದರು.