

ಮೈಸೂರು: ಅಗ್ರಹಾರದಲ್ಲಿರುವ ಶ್ರೀಕೃಷ್ಣರಾಜೇಂದ್ರ ಸಹಕಾರ ಬ್ಯಾಂಕಿನ ನೆಲ ಅಂತಸ್ತಿನ ನವೀಕೃತ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಆ. 9ರಂದು ಸಂಜೆ 4 ಗಂಟೆಗೆ ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕ್ ಸದಸ್ಯರು ಹಾಗೂ ಸಾರ್ವಜನಿಕರು ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಬ್ಯಾಂಕ್ ಅಧ್ಯಕ್ಷ ಡಿ.ಬಸವರಾಜು (ಬಸಪ್ಪ) ಮನವಿ ಮಾಡಿದ್ದಾರೆ.
ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಟಿ.ಎಸ್.ಶ್ರೀವತ್ಸ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲೆಂದು ಶೆಟ್ಟಪ್ಪ ಸಿದ್ದಪ್ಪ ಅವರು 1919ರಲ್ಲಿ ಕೆ.ಆರ್.ಬ್ಯಾಂಕ್ ಸ್ಥಾಪಿಸಿದರು. 106 ವರ್ಷಗಳನ್ನು ಪೂರ್ಣಗೊಳಿಸಿದ್ದು, ಶತಮಾನದ ಹಿರಿಮೆ ಹೊಂದಿದೆ. 25 ಪೈಸೆಯಿಂದ ಆರಂಭವಾದ ಬ್ಯಾಂಕ್ ನೂರಾರು ಕೋಟಿ ರೂ. ವಹಿವಾಟು ನಡೆಸಿದೆ. ಎ ಗ್ರೇಡ್ನಲ್ಲಿರುವ ನಮ್ಮ ಬ್ಯಾಂಕಿನಲ್ಲಿ ಪ್ರಸ್ತುತ 9028 ಸದಸ್ಯರಿಂದ ವಾರ್ಷಿಕ 95 ಕೋಟಿ ರೂ. ವಹಿವಾಟು ನಡೆಸುತ್ತಿದೆ. 14 ಕೋಟಿ ಸ್ವಂತ ಬಂಡವಾಳ, 78 ಕೋಟಿ 25 ಲಕ್ಷ ದುಡಿಯುವ ಬಂಡವಾಳ, 65 ಕೋಟಿ ಠೇವಣಿ, 45 ಕೋಟಿ 61 ಲಕ್ಷ ರೂ. ಸಾಲ ನೀಡಲಾಗಿದೆ ಎಂದು ಡಿ.ಬಸವರಾಜು ಮಾಹಿತಿ ನೀಡಿದ್ದಾರೆ.
ಬ್ಯಾಂಕ್ ಕೇಂದ್ರ ಮತ್ತು ರಾಜ್ಯ ಸರ್ಕಾರದ ಭದ್ರತಾ ಪತ್ರಗಳಲ್ಲಿ ಹಾಗೂ ಠೇವಣಿಗಳಲ್ಲಿ 25 ಕೋಟಿ ರೂ. 33 ಲಕ್ಷ ಮೊತ್ತವನ್ನು ಹೂಡಿಕೆ ಮಾಡಲಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ 32 ಲಕ್ಷ ನಿವ್ವಳ ಲಾಭ ಗಳಿಸಿರುತ್ತದೆ. ಬ್ಯಾಂಕ್ ಸಂಪೂರ್ಣವಾಗಿ ಕಂಪ್ಯೂಟರೀಕರಣಗೊಂಡಿದೆ. ನವೀಕೃತ ಕೆಳಅಂತಸ್ತಿಗೆ ಬ್ಯಾಂಕ್ ಕೆಲಸಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ.
ಮಾಜಿ ಕೇಂದ್ರ ಸಚಿವರಾದ ಎಂ.ರಾಜಶೇಖರಮೂರ್ತಿ, ಮಾಜಿ ಶಾಸಕ ಎಚ್.ಗಂಗಾಧರನ್, ವೇದಾಂತ ಹೆಮ್ಮಿಗೆ ಅವರು ಅಧ್ಯಕ್ಷರಾಗಿ ಕೆಲಸ ಮಾಡಿರುವ ಸಂಸ್ಥೆಯ ಅಧ್ಯಕ್ಷನಾಗಿರುವುದು ಹೆಮ್ಮೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಯಾವುದೇ ಬೇಡಿಕೆ ಇಡುವುದಿಲ್ಲ ಎಂದು ಬಸವರಾಜು ತಿಳಿಸಿದ್ದಾರೆ.
ಡಿ.ಅನಂತ ವೀರಪ್ಪ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾಗಿದ್ದು, ಎಚ್.ಎಸ್.ಸರ್ವಮಂಗಳ ಬ್ಯಾಂಕಿನ ಆಡಳಿತ ಮಂಡಳಿಯ ಉಪಾಧ್ಯಕ್ಷೆಯಾಗಿದ್ದಾರೆ. ಎಚ್.ವಾಸು, ನಂ.ಸಿದ್ದಪ್ಪ, ಎಚ್.ವಿ.ಭಾಸ್ಕರ್, ಎಂ.ಎನ್.ನವೀನ್ಕುಮಾರ್, ಜಿ.ಎಂ.ಪಂಚಾಕ್ಷರಿ, ಎಂ.ಡಿ.ಪಾರ್ಥಸಾರಥಿ, ಪ್ರತಿಧ್ವನಿ ಪ್ರಸಾದ್, ಎಂ.ಎಸ್.ಅರುಣ್ ಸಿದ್ದಪ್ಪ, ನಾಗಜ್ಯೋತಿ ಪ್ರತಿಧ್ವನಿ ಪ್ರಸಾದ್, ತಾಯೂರು ಗಣೇಶ್ ಮೂರ್ತಿ, ಎಂ.ಶಿವಪ್ರಕಾಶ್ ಆಡಳಿತ ಮಂಡಳಿಯ ಸದಸ್ಯರಾಗಿದ್ದಾರೆ.