ಮೂಲಸೌಕರ್ಯ ಕಾಣದ ಕೆ.ಪಾತೂರು ಸರ್ಕಾರಿ ಶಾಲೆ

111
ಕೆ.ಪಾತೂರಿನ ಸರ್ಕಾರಿ ಪ್ರಾಥಮಿಕ ಶಾಲಾವರಣದಲ್ಲಿ ಗಿಡಗಂಟಿಗಳು ಬೆಳೆದಿರುವುದು.
Published on

ಶ್ರೀನಿವಾಸಪುರ: ಹಲವು ಕಡೆ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚಲ್ಪಡುತ್ತಿವೆ. ಆದರೆ ಕೆ.ಪಾತೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿದ್ದರೂ, ಶಾಲೆ ಬಗ್ಗೆ ಇಲಾಖೆಯಾಗಲಿ, ಶಿಕ್ಷಕರಾಗಲಿ ಗಮನ ಹರಿಸುತ್ತಿಲ್ಲ. ಶಾಲಾ ಆವರಣದಲ್ಲಿ ರಾಶಿ ರಾಶಿ ಗಿಡ&ಗಂಟಿಗಳು, ಪೊದೆಗಳು ಬೆಳೆದು ಅರಣ್ಯದಂತೆ ವಿಷ ಪೂರಿತ ಜೀವಿಗಳಿಗೆ ವಾಸಸ್ಥಾನವಾಗಿದ್ದು, ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ.

ತಾಲೂಕಿನ ಆಂಧ್ರಗಡಿ ಭಾಗದ ಯರ್ರಂವಾರಿಪಲ್ಲಿ ಗ್ರಾಪಂಗೆ ಒಳಪಡುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮೂಲ ಸೌಕರ್ಯ ವಂಚಿತವಾಗಿದೆ. ಶಾಲೆಯಲ್ಲಿ ಸುಮಾರು 2,0-30 ವಿದ್ಯಾರ್ಥಿಗಳು ದಾಖಲಾಗಿದ್ದು, ಶಾಲೆಯ ಪ್ರವೇಶದ್ವಾರದಲ್ಲಿ ರಸ್ತೆ ಸೌಕರ್ಯವಿಲ್ಲ, ರಸ್ತೆಯ ಎಡ-ಬಲದಲ್ಲಿ ಪೊದೆಗಳು ಸೃಷ್ಟಿಯಾಗಿವೆ. ಶಾಲೆಯಲ್ಲಿ ಎರಡು ಕೊಠಡಿಗಳಿದ್ದು, ಒಂದೇ ಕೊಠಡಿಯಲ್ಲಿ ಎಲ್ಲ ತರಗತಿಗಳ ಪಾಠ&ಪ್ರವಚನ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸಹ ಶಿಕ್ಷಕ ನಾರಾಯಣಸ್ವಾಮಿ ಪಾಠ-ಪ್ರವಚನ ಮುಂದುವರೆಸಿದ್ದು, ಮುಖ್ಯಶಿಕ್ಷಕ ವೆಂಕಟರವಣಪ್ಪ ಹೆಚ್ಚಾಗಿ ಶಾಲೆಗೆ ಗೈರು ಹಾಜರಾಗಿರುತ್ತಾರೆ. ಶಾಲೆ ಆವರಣ ಒಂದು ಮೂಲೆಯಲ್ಲಿ ಗ್ರಾಮಕ್ಕೆ ಶುದ್ಧ ನೀರಿನ ಘಟಕ, ಪಕ್ಕದಲ್ಲೇ ಕಲ್ಲುಗಳ ರಾಶಿ, ಅದರ ಪಕ್ಕದಲ್ಲಿ ಹಳೆಯ ಕಟ್ಟಡ, ಇದರ ಮಧ್ಯೆ ತರಗತಿಗಳನ್ನು ನಡೆಸುವ ಕಟ್ಟಡ, ಇದರ ಪಕ್ಕದಲ್ಲೇ ಅರಳೆಗಿಡ ಹುಲ್ಲು, ಮುಳ್ಳು ಪೊದೆಗಳು, ಬಳ್ಳಿಗಳು, ಯಥೆಚ್ಚವಾಗಿ ಬೆಳೆದು ಪೊದೆಗಳಾಗಿ ನಿಂತಿವೆ. ಇಷ್ಟೆಲ್ಲಾ ಸಮಸ್ಯೆಗಳ ಮಧ್ಯೆ ಶಿಕ್ಷಕರು ತಮಗೇನೂ ಗೊತ್ತಿಲ್ಲದಂತೆ ಪಾಠ ಪ್ರವಚನಗಳನ್ನು ಮುಗಿಸಿ ಹಿಂತಿರುಗುತ್ತಿದ್ದಾರೆ.

ಮುಖ್ಯಶಿಕ್ಷಕ ವೆಂಕಟರವಣಪ್ಪ ಅವರು ತಮ್ಮ ವೃತ್ತಿ ಬಿಟ್ಟು ಪ್ರವೃತ್ತಿಯಲ್ಲೇ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಶಾಲೆಗೆ ಮನ ಬಂದಂತೆ ಬರುತ್ತಾರೆ, ವ್ಯವಸಾಯ ಇತರೆ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಶಾಲೆಗೆ ಕ್ರಮಬದ್ಧವಾಗಿ ಬರುವುದನ್ನು ಕಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸಂಬಂಧಪಟ್ಟ ಮೇಲಾಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ವಿದ್ಯಾರ್ಥಿಗಳ ಆರೋಗ್ಯ ಕ್ಷೇಮಕ್ಕಾಗಿ ಸರ್ಕಾರದಿಂದ ಬಿಡುಗಡೆಯಾಗುವ ವಾರ್ಷಿಕ ಅಭಿವೃದ್ಧಿ ಅನುದಾನ ಸದ್ಬಳಿಸಿಕೊಂಡು ಶಾಲೆಗೆ ಮೂಲ ಸೌಕರ್ಯ ಒದಗಿಸಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ನರೇಗಾ ಯೋಜನೆಯ ಅನುದಾನ ಬಳಸಿ ಅಭಿವೃದ್ಧಿ ಕೆಲಸಗಳ ಜತೆಗೆ ಸ್ವಚ್ಛತೆಗೆ ಆದ್ಯತೆ ನೀಡಬೇಕಾಗಿರುವ ಯರ್ರಂವಾರಿಪಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ಕಾರ್ಯವೈಖರಿ ಶೂನ್ಯವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸಹ ಶಿಕ್ಷಕನಿಂದ ಉದ್ಧಟತನದ ಉತ್ತರ: ಶಾಲೆಯ ಆವರಣಕ್ಕೆ ಸಾರ್ವಜನಿಕರು, ಪತ್ರಕರ್ತರು ಭೇಟಿ ನೀಡಲು ಮುಂದಾದರೆ ಮೇಲಾಧಿಕಾರಿಗಳಿಂದ ಅನುಮತಿ ಪತ್ರವಿದ್ದಲ್ಲಿ ಮಾತ್ರ ಶಾಲೆಗೆ ಬನ್ನಿ, ಇಲ್ಲದಿದ್ದರೆ ಬರಬೇಡಿ, ಹೊರಹೋಗಿ ಎಂದು ಗ್ರಾಮಸ್ಥರಿಗೆ ಗದರುತ್ತಾರೆ.

ಸ್ವಂತ ಖರ್ಚಿನಿಂದ ಶಾಲಾ ಆವರಣದಲ್ಲಿ 2-3 ಬಾರಿ ಸ್ವಚ್ಛ ಮಾಡಿಸಿದ್ದೇನೆ. ನರೇಗಾ ಯೋಜನಯಡಿ ಸುತ್ತಲೂ ಕಾಂಪೌಂಡ್​ ನಿಮಾರ್ಣವಾಗಿದೆ. ಗ್ರಾಮದ ಅಭಿವೃದ್ಧಿ ವಿಷಯದ ಬಗ್ಗೆ ಪಂಚಾಯಿತಿಯಲ್ಲಿ ಮನವಿ ಮಾಡಿದಾಗ ಪಿಡಿಒ ಸ್ಪಂದಿಸುತ್ತಿಲ್ಲ. ಗ್ರಾಮದಲ್ಲಿ ಹಲವು ಕೆಲಸಗಳು ಕುಂಟಿತವಾಗಿವೆ, ಪಿಡಿಒ ಸಹ ನಮಗೆ ಬಿಲ್ಲು ಪಾವತಿಸುವುದಿಲ್ಲ. - ಬಾಬು ಪ್ರಕಾಶ್​ ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net