ಮಧುಗಿರಿ: ರಾಜಕೀಯದಲ್ಲಿ ಯಾರೂ ಸಂನ್ಯಾಸಿಗಳಲ್ಲ, ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ಪ್ರಕಟಿಸುತ್ತೇನೆ ಎಂದು ಹೇಳುವ ಮೂಲಕ ಮಾಜಿ ಸಚಿವ ಜಯಚಂದ್ರ ಅವರಿಗೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಟಾಂಗ್ ನೀಡಿದರು.
ಅಕ್ಟೋಬರ್ ಅಥವಾ ನವೆಂಬರ್ ವೇಳೆಗೆ ಉಪ ಚುನಾವಣೆ ನಡೆಯುವ ನಿರೀಕ್ಷೆಯಿದ್ದು, ಇದರ ಬಗ್ಗೆ ಹೆಚ್ಚೇನು ಮಾತನಾಡುವುದಿಲ್ಲ. ಮಾಸಾಂತ್ಯದಲ್ಲಿ ದಿವಂಗತ ಸತ್ಯನಾರಾಯಣ್ ಅವರ ಪುಣ್ಯತಿಥಿ ಹಮ್ಮಿಕೊಳ್ಳಲಾಗಿದೆ. ಈಗ ಅದರ ಬಗ್ಗೆ ಮಾತನಾಡುವುದು ಸರಿಯಲ್ಲ. ನಂತರದ ದಿನಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಲಿದ್ದು, ರಾಜಕೀಯದಲ್ಲಿರುವ ಎಲ್ಲರಿಗೂ ಆಸೆ ಆಕಾಂಕ್ಷೆಗಳಿರುತ್ತವೆ. ನಮ್ಮ ಪಕ್ಷದಿಂದ ಏನೆಲ್ಲ ಅಭಿಪ್ರಾಯಗಳು ಬರುತ್ತವೆ, ಇತರ ಪಕ್ಷಗಳಲ್ಲಿ ಯಾವ ಹೇಳಿಕೆಗಳು ಬರುತ್ತವೆ ಎಂಬುದನ್ನೆಲ್ಲ ಕ್ರೋಡೀಕರಿಸಿ ಮುಂದಿನ ದಿನಗಳಲ್ಲಿ ಮಾಧ್ಯಮದ ಮುಂದೆ ನಿರ್ಧಾರ ಪ್ರಕಟಿಸುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಟೋಲ್ ರದ್ದು ಮಾಡುತ್ತೇನೆ: ಮಧುಗಿರಿಯನ್ನು ಜಿಲ್ಲೆಯನ್ನಾಗಿಸುವುದು, ಎತ್ತಿನಹೊಳೆ ಮೂಲಕ ತಾಲೂಕಿನ 56 ಕೆರೆಗಳಿಗೆ ನೀರು ಹರಿಸುವುದು, ಮಧುಗಿರಿ ಬೆಟ್ಟಕ್ಕೆ ರೋಪ್‌ವೇ ಅಳವಡಿಸಿ ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡುವುದು, ತಾಲೂಕಿನಲ್ಲಿ ಕೈಗಾರಿಕೆಗಳಿಗೆ ಆದ್ಯತೆ ನೀಡುವುದು ನನ್ನ ಕನಸಿನ ಯೋಜನೆಗಳು. ಈ ಯೋಜನೆಗಳನ್ನು ಜಾರಿಗೆ ತರಲು ಶ್ರಮಿಸುತ್ತೇನೆ. ಮುಂದಿನ ದಿನಗಳಲ್ಲಿ ಶಾಸಕನಾಗಿ ಆಯ್ಕೆಯಾದರೆ ಜನರು ವಿರೋಧಿಸುತ್ತಿರುವ ಪಾವಗಡ-ಮಳವಳ್ಳಿ ರಸ್ತೆಯಲ್ಲಿನ ಟೋಲ್ ರದ್ದುಪಡಿಸಲಾಗುವುದು ಎಂದು ಭರವಸೆ ನೀಡಿದರು.
ರಾಷ್ಟ್ರೀಯ ಕ್ರಿಬ್ಕೋ ನಿರ್ದೇಶಕ ಆರ್.ರಾಜೇಂದ್ರ, ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಎನ್.ಗಂಗಣ್ಣ, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಸದಸ್ಯರಾದ ಮಂಜುನಾಥ್ ಆಚಾರ್, ಲಾಲಾಪೇಟೆ ಮಂಜುನಾಥ್, ತಿಮ್ಮರಾಯಪ್ಪ,
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್.ರಾಜಗೋಪಾಲ್, ತುಮುಲ್ ಮಾಜಿ ಅಧ್ಯಕ್ಷರಾದ ಬಿ.ನಾಗೇಶ್ ಬಾಬು, ಬಿ.ಎನ್ . ನರಸಿಂಹಮೂರ್ತಿ ಇತರರಿದ್ದರು
ಜಿದ್ದಿಗೆ ವೇದಿಕೆಯಾಗುವುದೇ ಶಿರಾ ಕ್ಷೇತ್ರ : ರಾಜಕೀಯವಾಗಿ ಜಿಲ್ಲೆಯ ಬದ್ಧ ವೈರಿಗಳು ಎಂದು ಗುರುತಿಸಿಕೊಂಡಿರುವ ಕೆ.ಎನ್.ರಾಜಣ್ಣ ಹಾಗೂ ಟಿ.ಬಿ.ಜಯಚಂದ್ರ ನಡುವಣ ಸಮರಕ್ಕೆ ಮುಂಬರುವ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ವೇದಿಕೆಯಾಗುವ ಸೂಚನೆಯಿದೆ. ಮಧುಗಿರಿ ಮತ್ತು ಶಿರಾ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಮಾಡಿದ್ದರೂ ಪರಸ್ಪರ ರಾಜಕೀಯ ದ್ವೇಷದಿಂದಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಬ್ಬರೂ ಘಟಾನುಘಟಿಗಳು ಸೋಲನುಭವಿಸಬೇಕಾಯಿತು. ಈಗ ಮತ್ತೆ ಕೆ.ಎನ್.ರಾಜಣ್ಣ ಶಿರಾ ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದು, ಜಯಚಂದ್ರ ಅವರನ್ನು ಸ್ವ-ಕ್ಷೇತ್ರದಲ್ಲೇ ಕಟ್ಟಿಹಾಕಲು ರಾಜಣ್ಣ ಅಖಾಡಕ್ಕಿಳಿಯಲಿದ್ದಾರೆ ಎನ್ನಲಾಗಿದೆ.