

ಮಂಜುನಾಥ ಎಸ್ ಸಿ ಹೊಸಕೋಟೆ
ಆರೋಗ್ಯ ಹದಗೆಟ್ಟರೆ ಆರೋಗ್ಯ ಕೇಂದ್ರಗಳತ್ತ ದೌಡಾಯಿಸುವುದು ಸಾಮಾನ್ಯ. ಆದರೆ ಆರೋಗ್ಯ ಕೇಂದ್ರಕ್ಕೇ ಅನಾರೋಗ್ಯ ಕಾಡುತ್ತಿದ್ದರೆ ರೋಗಿಗಳು ಹೋಗುವುದಾದರೂ ಎಲ್ಲಿಗೆ?
ತಾಲೂಕಿನ ಕೆ.ಮಲ್ಲಸಂದ್ರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಅವ್ಯವಸ್ಥೆಗೆ ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗುತ್ತಿರುವುದು ಹೀಗೆ… ಆರೋಗ್ಯ ಕೇಂದ್ರದ ಅನಾರೋಗ್ಯವನ್ನು ಮೊದಲು ಸರಿಪಡಿಸಲಿ ಎಂಬ ಆಗ್ರಹ ಕೇಳಿಬರುತ್ತಿದ್ದು, ಇಲ್ಲಿನ ದುಸ್ಥಿತಿ ಬಗ್ಗೆ ಸ್ಥಳೀಯರು ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ.
ಆರೋಗ್ಯ ಕೇಂದ್ರ ಇರುವುದಾದರೂ ಏಕೆ?
ಆರೋಗ್ಯ ಕೇಂದ್ರದಲ್ಲಿ ಕನಿಷ್ಠ ರಕ್ತದೊತ್ತಡ ತಪಾಸಣೆ ಯಂತ್ರವೂ ಕಾರ್ಯನಿರ್ವಹಿಸುತ್ತಿಲ್ಲ ಎಂದರೆ ಇಲ್ಲಿನ ಅವ್ಯವಸ್ಥೆ ಹೇಗಿದೆ ಎಂಬುದನ್ನು ಸುಲಭವಾಗಿ ಊಹಿಸಬಹುದು. ಮಕ್ಕಳ ತೂಕ ತಪಾಸಣೆ ಯಂತ್ರ ಕೆಟ್ಟು ಹೋಗಿ ವರ್ಷಗಳೇ ಕಳೆದಿದ್ದರೂ ಸಂಬಂಧಪಟ್ಟರು ಇತ್ತ ಗಮನ ಹರಿಸಿಲ್ಲ. ಕೆಲವೊಂದು ಪ್ರಾಥಮಿಕ ತಪಾಸಣೆಗೂ ಹೊಸಕೋಟೆಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಸಾಗಹಾಕುತ್ತಾರೆ ಎಂದರೆ ಈ ಆರೋಗ್ಯ ಕೇಂದ್ರ ಇರುವುದಾದರೂ ಏಕೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ದುರಸ್ತಿಗೂ ಗ್ರಹಣ: ಕಳೆದ ನಾಲ್ಕೈದು ತಿಂಗಳುಗಳಿಂದ ಆರೋಗ್ಯ ಕೇಂದ್ರ ಕಟ್ಟಡದ ಕೆಲವೊಂದು ಭಾಗದಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿದ್ದರೂ ಅದು ಮುಗಿಯುವ ಲಕ್ಷಣ ಕಂಡುಬರುತ್ತಿಲ್ಲ. ಇದರಿಂದ ಸಾರ್ವಜನಿಕರು ಅನಾನುಕೂಲ ಎದುರಿಸುವಂತಾಗಿದೆ.
ಡಿ ಗ್ರೂಪ್ ನೌಕರರಿಲ್ಲ: ಕಸ ಗುಡಿಸಲು, ಕುಡಿವ ನೀರು ಸಂಗ್ರಹಿಸಲು, ಸ್ವಚ್ಛತಾ ಕಾರ್ಯ ನಿರ್ವಹಿಸಲು ಡಿ ಗ್ರೂಪ್ ನೌಕರರಿಲ್ಲದೆ ಅವ್ಯವಸ್ಥೆಯ ತಾಣವಾಗಿದೆ, ಈ ಕೆಲಸಗಳನ್ನು ಇಲ್ಲಿಯ ಆಶಾ ಕಾರ್ಯಕರ್ತರಿಂದಲೇ ದಬ್ಬಾಳಿಕೆಯಿಂದ ಮಾಡಿಸಲಾಗುತ್ತಿದೆ, ಕೆಲಸ ಮಾಡದಿದ್ದರೆ ನೋಟಿಸ್ ನೀಡುವ ಬೆದರಿಕೆ ಹಾಕುತ್ತಾರೆ ಎಂಬ ಆರೋಪ ಕೇಳಿಬರುತ್ತಿದೆ.
ಚಿಕಿತ್ಸೆ ದೊರೆಯದೆ ಸಾವು: ತೀವ್ರ ಅನಾರೋಗ್ಯಗೊಂಡಿದ್ದ ಕೊರಳೂರಿನ 40 ವರ್ಷದ ಅಕ್ಬರ್ ಎಂಬುವರನ್ನು ಮಂಗಳವಾರ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು. ಆದರೆ ವೈದ್ಯರಿಲ್ಲದೆ ಪ್ರಾಥಮಿಕ ಚಿಕಿತ್ಸೆ ದೊರೆಯದ ಕಾರಣ ಹೊಸಕೋಟೆಗೆ ಸಾಗಿಸುವ ಮಾರ್ಗಮಧ್ಯೆ ಅಕ್ಬರ್ ಕೊನೆಯುಸಿರೆಳೆದರು ಎಂದು ಮೃತನ ಕುಟುಂಬದವರು ಆರೋಪಿಸಿದ್ದಾರೆ.
ಇಲ್ಲಿನ ವೈದ್ಯಾಧಿಕಾರಿ ರಜೆಗೆ ಆರ್ಜಿ ಸಲ್ಲಿಸಿದ್ದಾರೆ, ಹೆಚ್ಚು ರಜೆ ಬೇಕಿದ್ದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಅನುಮತಿ ಪಡೆಯಲು ಸೂಚಿಸಲಾಗಿದೆ ಆದರೆ ಈ ಬಗ್ಗೆ ಮಾಹಿತಿ ಬಂದಿಲ್ಲ, ಅವರಿಗೆ ಮೆಮೋ ನೀಡುವಂತೆ ಡಿಎಚ್‌ಒ ಸೂಚಿಸಿದ್ದಾರೆ. ಇಲ್ಲಿನ ಅವ್ಯವಸ್ಥೆ ಬಗ್ಗೆ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಪರಿಹರಿಸುವ ಕೆಲಸ ಮಾಡಲಾಗುವುದು.
ಯಾವುದೇ ಕಾರಣಕ್ಕೂ ವೈದ್ಯಾಧಿಕಾರಿಗಳಿಗೆ ಹೆಚ್ಚಿನ ದಿನಗಳ ರಜೆ ನೀಡುವುದಿಲ್ಲ, ಕರ್ತವ್ಯಲೋಪ ಕಂಡು ಬಂದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಮತ್ತು ಕೆ.ಮಲ್ಲಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ದುರಸ್ತಿ ಕುರಿತು ಕ್ರಮಕೈಗೊಳ್ಳಲಾಗುವುದು.
ಕಳೆದೆರಡು ವರ್ಷದಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ದರ್ಶನವೇ ಆಗಿಲ್ಲ, ಯಾವುದೇ ಆರೋಗ್ಯ ಸಮಸ್ಯೆಗೆ ಬಂದರೂ ಇಲ್ಲಿನ ಸಿಬ್ಬಂದಿ ಪ್ರವೀಣ್ ಎಂಬುವರೇ ವೈದ್ಯೋಪಚಾರ ಮಾಡುತ್ತಾರೆ, ವೈದ್ಯರನ್ನು ಕಾಣಬೇಕು ಎಂದರೆ ಸಬೂಬು ಹೇಳುತ್ತಾರೆ, ಇಲ್ಲಿ ವೈದ್ಯರಿದ್ದಾರೋ ಇಲ್ಲವೋ ನನಗಂತೂ ಗೊತ್ತಾಗಿಲ್ಲ.
ಲಕ್ಷ್ಮಮ್ಮ, ನಡವತ್ತಿ ಗ್ರಾಮದ ನಿವಾಸಿ.