ಗೀತರಚನೆಕಾರ ಕಲ್ಯಾಣ್ ಪತ್ನಿ ಸಲ್ಲಿಸಿದ ವಿಚ್ಛೇದನ ಅರ್ಜಿಯ ಕಥೆ ಏನಾಯ್ತು?

kalyan
Published on

ಬೆಳಗಾವಿ: ಕನ್ನಡ ಚಲನಚಿತ್ರ ರಂಗದ ಖ್ಯಾತ ಗೀತರಚನೆಕಾರ ಕೆ. ಕಲ್ಯಾಣ್ ಅವರ ಪತ್ನಿ ಅಶ್ವಿನಿ, ತಾವು ಇತ್ತೀಚೆಗೆ ಇಲ್ಲಿನ ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ವಿಚ್ಛೇದನದ ಅರ್ಜಿಯನ್ನು ಹಿಂಪಡೆಯುವುದಾಗಿ ಸ್ಪಷ್ಟಪಡಿಸಿದ್ದು, ಇದರೊಂದಿಗೆ ಕಲ್ಯಾಣ ಕುಟುಂಬದ ವಿವಾದ ಸುಖಾಂತ್ಯ ಕಂಡಂತಾಗಿದೆ.

‘‘ಕೌಟುಂಬಿಕ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯನ್ನು ಹಿಂಪಡೆದು ಪತಿಯೊಂದಿಗೆ ಮತ್ತೆ ಸಂಸಾರ ಆರಂಭಿಸುತ್ತೇನೆ. ಸದ್ಯದಲ್ಲೇ ಅವರನ್ನು ಭೇಟಿ ಮಾಡಿ, ಮಾತನಾಡುತ್ತೇನೆ. ನಮ್ಮ ಮಧ್ಯೆ ಮೂಡಿದ್ದ ಭಿನ್ನಾಭಿಪ್ರಾಯಗಳೆಲ್ಲವೂ ಬಗೆಹರಿದಿವೆ’’ ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

‘‘ಮಂತ್ರವಾದಿ ಶಿವಾನಂದ ವಾಲಿ ನಮ್ಮ ಕುಟುಂಬವನ್ನು ವಶೀಕರಣ ಮಾಡಿಕೊಂಡಿದ್ದು ನಿಜ. ಅವನಿಗೆ ನಮ್ಮ ಮನೆಗೆಲಸದ ಗಂಗಾ ಕುಲಕರ್ಣಿ ಸಹಕರಿಸಿದ್ದಳು. ಪೂಜೆ ಮಾಡಿಸಿದರೆ ಮಾತ್ರ ನಮ್ಮ ಜೀವ-ಜೀವನ ಉಳಿಯುತ್ತದೆ ಅಂತ ನಂಬಿಸಿದ್ದರಿಂದ ನಾವು ಆತನಿಗೆ ಹಣ ಕೊಟ್ಟಿದ್ದೆವು. ಆಸ್ತಿಯನ್ನೆಲ್ಲ ಬರೆದುಕೊಟ್ಟಿದ್ದೆವು. ಪೂಜೆಯನ್ನು ಮಾತ್ರ ನಮ್ಮ ಸಮ್ಮುಖದಲ್ಲಿ ಅವರು ಮಾಡುತ್ತಿರಲಿಲ್ಲ. ಇದೀಗ ಪೊಲೀಸರು ಮಧ್ಯಪ್ರವೇಶಿಸಿ ನಮ್ಮ ಕಣ್ತೆರೆಸಿದ್ದಾರೆ. ನಮ್ಮ ಕುಟುಂಬವನ್ನು ಉಳಿಸಿದ್ದಾರೆ’’ ಎಂದು ವಿವರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net