ಕ.ಕ. ಭಾಗದಲ್ಲಿ ಗಜಲ್ ಸಾಹಿತ್ಯ ಪ್ರಚಲಿತ

background
ಗಂಗಾವತಿ ಐಎಂಎ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಮಾತು-ಕತೆ ಕಾರ್ಯಕ್ರಮವನ್ನು ಕೇಂದ್ರ ಸಾಹಿತ್ಯ ಅಕಾಡಮಿ ಕನ್ನಡ ಭಾಷಾ ಸಲಹಾ ಸಮಿತಿ ಸದಸ್ಯ ಡಾ.ಚಿದಾನಂದ ಸಾಲಿ ಸೋಮವಾರ ಉದ್ಘಾಟಿಸಿದರು. ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊ.ಪಾಟೀಲ್, ತಾಲೂಕು ಅಧ್ಯಕ್ಷ ಶ್ರೀನಿವಾಸ ಅಂಗಡಿ, ವೈದ್ಯ ಡಾ.ಕೆ.ಅಮರೇಶ ಪಾಟೀಲ್ ಇತರರಿದ್ದರು.
Published on

ಗಂಗಾವತಿ: ರಾಜ್ಯಾದ್ಯಂತ ಹಲವು ಸಾಹಿತಿಗಳು ಗಜಲ್ ಪ್ರಾಕಾರ ಆಯ್ಕೆ ಮಾಡಿಕೊಂಡಿದ್ದು, ಉತ್ತಮ ಸಾಹಿತ್ಯ ಪ್ರಕಟಗೊಳ್ಳುತ್ತಿವೆ ಎಂದು ಕೇಂದ್ರ ಸಾಹಿತ್ಯ ಅಕಾಡಮಿ ಕನ್ನಡ ಭಾಷಾ ಸಲಹಾ ಸಮಿತಿ ಸದಸ್ಯ ಡಾ.ಚಿದಾನಂದ ಸಾಲಿ ಹೇಳಿದರು.


ನಗರದ ಐಎಂಎ ಹಾಲ್‌ನಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಮತ್ತು ಲಯನ್ಸ್ ಕ್ಲಬ್ ಸಹಯೋಗದಲ್ಲಿ ನಶೀಲಿ ಗಜಲ್ ಕುರಿತು ಹಮ್ಮಿಕೊಂಡಿದ್ದ ಮಾತು-ಕತೆ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು.


ಸಿನಿಮಾ ಮತ್ತು ಸಂಗೀತ ಕ್ಷೇತ್ರದಲ್ಲಿ ಗಜಲ್ ಸಾಹಿತ್ಯ ಜನರಿಗೆ ಹತ್ತಿರವಾಗುತ್ತಿದೆ. ರಾಯಚೂರಿನ ಡಾ.ಶಾಂತರಸರು ಕನ್ನಡದಲ್ಲಿ ಗಜಲ್ ಪ್ರಾಕಾರಕ್ಕೆ ಶ್ರೀಕಾರ ಹಾಕಿದ್ದಾರೆ. ಹಿಂದಿ ಮತ್ತು ಉರ್ದು ಭಾಷೆಯಲ್ಲಿದ್ದ ಗಜಲ್ ಸಾಹಿತ್ಯ ಕನ್ನಡದಲ್ಲಿಯೂ ಹೆಚ್ಚು ಪ್ರಸಿದ್ಧಿ ಪಡೆದಿದೆ. ಅಲ್ಲದೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. 1980ರ ನಂತರ ಡಾ.ರಾಜಕುಮಾರ್ ಆಸಕ್ತಿಯಂತೆ ಉರ್ದುವಿನ ಪ್ರಖ್ಯಾತ ಗಜಲ್ ರಾಗಗಳ ಮೂಲಕ ಕನ್ನಡ ಸಿನಿಮಾದಲ್ಲೂ ಅವಕಾಶ ಸಿಕ್ಕಿದೆ ಎಂದರು.


ಗಜಲ್ ಪ್ರಾಕಾರದ ಛಂದೋ ವೈಶಿಷ್ಟೃತೆ ಮತ್ತು ಪ್ರಾಕಾರಗಳ ಬಗ್ಗೆ ಮಾಹಿತಿ ನೀಡಿ, ಕೆಲ ಗಜಲ್‌ಗಳನ್ನು ಪ್ರಸ್ತುತಪಡಿಸಿದರು. ಸಂಯೋಜಕ ಗುಂಡೂರು ಪವನಕುಮಾರ ಮಾತನಾಡಿದರು. ಹಾಸ್ಯ ಭಾಷಣಕಾರ ಗಂಗಾವತಿ ಬೀಚಿ ಬಿ.ಪ್ರಾಣೇಶ, ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊ.ಪಾಟೀಲ್, ತಾಲೂಕು ಅಧ್ಯಕ್ಷ ಶ್ರೀನಿವಾಸ ಅಂಗಡಿ, ಮಾಜಿ ಅಧ್ಯಕ್ಷ ನಿಜಲಿಂಗಪ್ಪ ಮೆಣಸಿಗಿ, ಪ್ರಾಚಾರ್ಯ ಡಾ.ಜಾಜಿ ದೇವೇಂದ್ರಪ್ಪ, ಪ್ರಾಧ್ಯಾಪಕರಾದ ಪ್ರೊ.ಸುಂಕೇಶ್ವರ ಕರಿಗೂಳಿ, ಡಾ.ಮುಮ್ತಾಜ್ ಬೇಗಂ, ಕೆಪಿಸಿಸಿ ವಕ್ತಾರೆ ಎಚ್.ಎಂ.ಶೈಲಜಾ, ಸಾಹಿತಿ ಲಿಂಗಾರೆಡ್ಡಿ ವೀ.ಆಲೂರು, ಗಾಯಕ ರಮೇಶ ಗಬ್ಬೂರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net