

ವಿಜಯವಾಣಿ ಸುದ್ದಿಜಾಲ ಉಡುಪಿ
ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನೀಡಿರುವ ವರದಿ ವೈಜ್ಞಾನಿಕವಾಗಿ ಸಿದ್ಧಪಡಿಸಿದ್ದು, ಅದನ್ನು ಅವೈಜ್ಞಾನಿಕ ಎಂದು ಹೇಳುವುದು ಸರಿಯಲ್ಲ. ಅದು ಜಾತಿ ಗಣತಿ ಅಲ್ಲವೇ ಅಲ್ಲ, ಅದು ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ತಯಾರಿಸಿದ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷಾ ವರದಿಯಾಗಿದೆ. ಅದು ಜಾರಿಗೊಳ್ಳಿ ಎಂದು ಆಶಿಸುತ್ತೇನೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ತಿಳಿಸಿದರು.
ಉಡುಪಿಯಲ್ಲಿ ಏ.14ರಂದು ಮಾಧ್ಯಮದವರೊಂದಿಗೆ ಮಾತನಾಡಿ, ಮಾಡಿರುವ ಸಮೀಕ್ಷೆಗಳಲ್ಲಿ ಜಾತಿಯೂ ಒಂದು ಅಂಶವಾಗಿದೆ. ನಾನು ಈ ಹಿಂದೆ ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದ ವರದಿಯ ಕುರಿತಂತೆ ಏ.17ರಂದು ಕ್ಯಾಬಿನೆಟ್ನಲ್ಲಿ ಚರ್ಚೆಯಾದ ಬಳಿಕ ಹೇಳಿಕೆ ನೀಡೋಣ ಎಂದು ನಿರ್ಧರಿಸಿದ್ದೆ. ಆದರೆ, ಪ್ರಸ್ತುತ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದು, ರಾಜ್ಯದ ಜನರಲ್ಲಿ ಹಾಗೂ ಕೆಲವು ವರ್ಗದಲ್ಲಿ ಗೊಂದಲ ಉಂಟಾಗಿದ್ದರಿಂದ ಸ್ಪಷ್ಟನೆ ನೀಡಬೇಕಾಗಿದೆ ಎಂದರು.
ಕೆಲವರಿಗೆ ತಮ್ಮ ಜಾತಿ ಬಿಟ್ಟು ಹೋಗಿದೆ ಎಂಬ ಶಂಕೆಯಿದೆ. ರಾಜ್ಯದಲ್ಲಿ ಎಷ್ಟು ಜಾತಿಗಳಿವೆಯೋ ಎಲ್ಲವೂ ವರದಿ ಒಳಗೊಂಡಿದೆ. ಆದರೆ, ಆ ಸಂಖ್ಯೆಗಳು ಎಷ್ಟು ಎಂದು ಈಗ ನಾನು ಹೇಳಲು ಸಾಧ್ಯವಿಲ್ಲ. ನಾವು ಜಾತಿ ಹೇಳುವುದಿಲ್ಲ ಎಂದು ಕೆಲವರು ಹೇಳಿದ್ದಾರೆ. ಕೆಲವರು ತಮ್ಮ ಜಾತಿಯ ಬಗ್ಗೆ ಮಾಹಿತಿ ಇಲ್ಲದವರು ಸಹ ಇದ್ದಾರೆ. ಅಂತಹ ಸುಮಾರು ಐನೂರು ಜಾತಿಗಳು ಸಿಕ್ಕಿವೆ. ಹೀಗಾಗಿ ವರದಿಯಲ್ಲಿ ಜಾತಿಯ ಸಮೀಕ್ಷೆ ಆಗಿಲ್ಲ ಎಂದು ಹೇಳುವುದು ಸರಿಯಲ್ಲ ಎಂದರು.
ನನಗಿಂತ ಮೊದಲು ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ ಅವರು ಸಮೀಕ್ಷೆಗಾಗಿ ಒಂದು ಮಾದರಿ ಫಾರ್ಮೆಟ್ ತಯಾರಿಸಿದ್ದರು. ಅದು 54 ಪ್ರಶ್ನಾವಳಿ ಒಳಗೊಂಡಿತ್ತು. ಹೀಗಾಗಿ ಈ ವರದಿ ಖಂಡಿತ ಅವೈಜ್ಞಾನಿಕವಲ್ಲ. ಜನರು ಹೇಳಿರುವ ಜಾತಿಯನ್ನುಫಾರ್ಮೆಟ್ನಲ್ಲಿ ಬರೆದುಕೊಳ್ಳಲಾಗಿದೆ. ಜನರ ಜಾತಿ ನಾವು ನಿರ್ಧರಿಸಲು ಆಗುವುದಿಲ್ಲ. ಮನೆಯವರು ಕೊಟ್ಟ ಜಾತಿ ನಮೂದಿಸಲಾಗಿದೆ. ವರದಿ ಸಾರ್ವಜನಿಕಗೊಂಡ ನಂತರ ಈ ಬಗ್ಗೆ ಚರ್ಚೆ ಮಾಡಬಹುದು. ವರದಿಯಲ್ಲಿ ತಪ್ಪಿದ್ದರೆ ಸರಿಪಡಿಸಿಕೊಳ್ಳಳೂ ಅವಕಾಶ ಇದೆ. ತಪ್ಪಾಗಿದ್ದರೆ ಸರಿ ಮಾಡುತ್ತೇವೆ ಎಂದು ಸರ್ಕಾರವೂ ಹೇಳಿದೆ. ಶೇ.95ರಷ್ಟು ಸರಿ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ ಎಂದರು.
ಈ ನಡುವೆ ನಾವು ಹಿಂದಿನ ಸರ್ಕಾರ ಇದ್ದಾಗ ಒಂದು ಮಧ್ಯಂತರ ವರದಿ ನೀಡಿದ್ದೆವು. ಅದರಲ್ಲಿನ ಅನೇಕ ಅಂಶಗಳನ್ನು ಸ್ವೀಕರಿಸಿದೆ. ಆದರೆ, ಯಾರೋ ಸುಪ್ರೀಂ ಕೋರ್ಟ್ಗೆ ಹೋದ ಕಾರಣ ಜಾರಿ ಮಾಡುವುದಿಲ್ಲ ಎಂದಿದ್ದರು. ಆಗ ಬಿಜೆಪಿ ಒಪ್ಪಿದ ವರದಿಯನ್ನು ಈಗ ನಿರಾಕರಿಸುವುದು ಎಷ್ಟು ಸರಿ? ಬಿಜೆಪಿ ಸರ್ಕಾರ ಇದ್ದಾಗಲೇ ಆಯೋಗಕ್ಕೆ ಸದಸ್ಯರನ್ನೂ ನೇಮಿಸಿದ್ದರು. ಬಿಜೆಪಿಯಲ್ಲಿ ಇದ್ದವರನ್ನೇ ಆಯ್ಕೆ ಮಾಡಿದ್ದರು. ಈ ಸಮಿತಿಯನ್ನು ಮಾಡಿದ್ದು ಕಾಂಗ್ರೆಸ್ ಸರ್ಕಾರ ಅಲ್ಲ ಎಂದು ಜಯಪ್ರಕಾಶ ಹೆಗ್ಡೆ ತಿಳಿಸಿದರು.
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸರ್ವೆಯಾಗಿದೆ ತಯಾರಿಸಿದ ವರದಿಯದು. ಭಾರತ್ ಇಲೆಕ್ಟ್ರಾನಿಕ್ಸ್ನವರು ವರದಿ ಅಪ್ಲೋಡ್ ಮಾಡಿದ್ದಾರೆ. ಅವರು ಯಾರಿಗೂ ಪಾಸ್ವರ್ಡ್ ಕೊಡುವುದಿಲ್ಲ. ಈಗ ಎಲ್ಲ ರೀತಿಯ ಊಹಾಪೋಹ ಚರ್ಚೆಯಾಗುತ್ತಿವೆ. ಮೊದಲು ಸಚಿವ ಸಂಪುಟದಲ್ಲಿ ವರದಿ ಚರ್ಚೆಯಾಗಲಿ. ಜನರ ಮನಸ್ಸಿನಲ್ಲಿರುವ ಅನುಮಾನ ದೂರಗೊಳ್ಳಲು ವರದಿ ಸಾರ್ವಜನಿಕಗೊಳ್ಳಲಿ. | ಕೆ.ಜಯಪ್ರಕಾಶ ಹೆಗ್ಡೆ. ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ