ರಾಜ್ಯದಲ್ಲಿ ‘ಗ್ರೀನ್ ಹೈಡ್ರೋಜನ್‌‘ನ್‌ಗೆ ಶೀಘ್ರ ಹೊಸ ನೀತಿ - ಇಂಧನ ಸಚಿವ ಕೆ.ಜೆ. ಜಾರ್ಜ್

mng-feb5-mescom
Published on


ಮಂಗಳೂರು : ನವೀಕರಿಸಬಹುದಾದ ಗ್ರೀನ್ ಹೈಡ್ರೋಜನ್ ಎನರ್ಜಿ ಉತ್ಪಾದನೆ ಸಂಬಂಧಿಸಿ ರಾಜ್ಯದಲ್ಲಿ ಶೀಘ್ರ ಹೊಸ ನೀತಿ ರೂಪಿಸಲಾಗುವುದು. ಇದರ ಪೈಲಟ್ ಪ್ರಾಜೆಕ್ಟ್‌ಗಾಗಿ ಮಂಗಳೂರನ್ನು ಆಯ್ಕೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ನಗರದ ಬಿಜೈಯ ಮೆಸ್ಕಾಂ ಭವನದ ಸಭಾಂಗಣದಲ್ಲಿ ಸೋಮವಾರ ದ.ಕ. ಜಿಲ್ಲೆಯ ಚುನಾಯಿತ ಪ್ರತಿನಿಧಿಗಳೊಂದಿಗೆ ಮೆಸ್ಕಾಂ ಹಾಗೂ ಕೆಪಿಟಿಸಿಎಲ್‌ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ನಡೆದ ಸಭೆಯ ಬಳಿಕ ಸುದ್ದಿಗಾರರಿಗೆ ಅವರ ಜತೆ ಮಾತನಾಡಿದರು.
ನವೀಕರಿಸಬಹುದಾದ ಗ್ರೀನ್ ಹೈಡ್ರೋಜನ್ ಉತ್ಪಾದನೆಗೆ ಕರ್ನಾಟಕ ಅತ್ಯುತ್ತಮ ತಾಣವಾಗಿದೆ. ರಾಜಸ್ತಾನ ಹಾಗೂ ಗುಜರಾತ್‌ನಲ್ಲಿ ಗ್ರೀನ್ ಹೈಡ್ರೋಜನ್ ಯೋಜನೆ ಜಾರಿಯಲ್ಲಿದ್ದು, ಕರ್ನಾಟಕದಲ್ಲಿ ಇದರ ಬಳಕೆ ಬಗ್ಗೆ ಪೂರಕವಾದ ನೀತಿ ರೂಪಿಸಬೇಕಾಗಿದೆ. ತುಮಕೂರಿನ ಪಾವಗಡವನ್ನು ಈ ಹಿಂದೆ ಪೈಲಟ್ ಯೋಜನೆಗೆ ಆಯ್ಕೆ ಮಾಡಲಾಗಿತ್ತು. ಆದರೆ ಮಂಗಳೂರಿನಲ್ಲಿ ಸಮುದ್ರ, ಬಂದರು ವ್ಯವಸ್ಥೆ ಇದೆ. ಹಾಗಾಗಿ ಇಲ್ಲಿ ಪೈಲಟ್ ಯೋಜನೆ ಕೈಗೆತ್ತಿಕೊಳ್ಳುವುದು ಸೂಕ್ತ. ಯೋಜನೆ ಜಾರಿಗೆ ದೊಡ್ಡ ಉದ್ಯಮಗಳು ಮುಂದೆ ಬರಬೇಕಾಗಿದೆ. ಜಾಗತಿಕ ಹೂಡಿಕಾ ಸಮಾವೇಶದಲ್ಲಿ ಈ ಬಗ್ಗೆ ಕೈಗಾರಿಕೋದ್ಯಮಿಗಳು ಆಸಕ್ತಿ ತೋರಿಸಿದ್ದಾರೆ. 300 ಕೆ.ವಿ.
ಸಾಮರ್ಥ್ಯದ ಪೈಲಟ್ ಪ್ರಾಜೆಕ್ಟ್‌ಗೆ ಚಿಂತಿಸಲಾಗಿದೆ. ಪ್ರಕ್ರಿಯೆಗಳು ಪ್ರಾಥಮಿಕ ಹಂತದಲ್ಲಿವೆ ಎಂದು ಸಚಿವರು ವಿವರ ನೀಡಿದರು.
*ವಿದ್ಯುತ್ ಕೊರತೆ ತಡೆಯಲು ಕ್ರಮ
ರಾಜ್ಯದಲ್ಲಿ ವಿದ್ಯುತ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಸಮಗ್ರ ಕ್ರಮ ಕೈಗೊಳ್ಳಲಾಗಿದೆ. ಅಗತ್ಯವಿದ್ದಲ್ಲಿ ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿಗೂ ವ್ಯವಸ್ಥೆ ಮಾಡಲಾಗಿದೆ. ಕಳೆದ 4-5ವರ್ಷಗಳಲ್ಲಿ ವಿದ್ಯುತ್ ಖರೀದಿ ಒಪ್ಪಂದ ಮಾಡಿರಲಿಲ್ಲ. ಮಳೆ ಕಡಿಮೆಯಾಗಿ ನೀರಿನ ಕೊರತೆಯಿಂದ ಸಮಸ್ಯೆ ಆಗಿತ್ತು. ಖಾಸಗಿಯವರು ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಿದ್ದರೂ ಖರೀದಿಗೆ ವ್ಯವಸ್ಥೆ ಇರಲಿಲ್ಲ. ವಿಂಡ್ ಪವರ್ ಉತ್ಪಾದನೆಗೂ ಗಾಳಿಯ ಕೊರತೆಯಾಗಿತ್ತು. ಇದರಿಂದ 8900 ಮೆಗಾವ್ಯಾಟ್ ಇದ್ದ ಬೇಡಿಕೆ 16000 ಮೆಗಾವ್ಯಾಟ್‌ಗೆ ಏರಿಕೆಯಾಗಿತ್ತು. ಇದರಿಂದ ಕೊರತೆ ಎದುರಾಯಿತು ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿಯವರು ತುರ್ತು ಸಭೆ ಕರೆದು ಒಂದು ತಿಂಗಳ ಅವಧಿಗೆ 7 ಗಂಟೆಯ ವಿದ್ಯುತ್ ಪೂರೈಕೆಯನ್ನು ರೈತರಿಗೆ 5 ಗಂಟೆಗೆ ಸೀಮಿತಗೊಳಿಸಲಾಗಿತ್ತು. ಉತ್ತರ ಪ್ರದೇಶ ಮತ್ತು ಪಂಜಾಜ್ ರಾಜ್ಯಗಳಿಂದ ವಿನಿಮಯ ವ್ಯವಸ್ಥೆಯಡಿ ಒಪ್ಪಂದ ಮಾಡಿಕೊಂಡು ವಿದ್ಯುತ್ ಖರೀದಿಗೆ ಕ್ರಮ ವಹಿಸಲಾಯಿತು. ಕೇಂದ್ರ ಇಂಧನ ಸಚಿವರೂ ಸ್ಪಂದನೆ ನೀಡಿದ್ದರು. ಈ ಮೂಲಕ ಸಮಸ್ಯೆ ಬಗೆಹರಿಸಲಾಗಿದೆ. ರಾಜ್ಯಗಳಿಂದ ಗುಣಮಟ್ಟದ ಕಲ್ಲಿದಲು ಆಮದಿಗೆ ಕ್ರಮ ವಹಿಸಲಾಗಿದೆ. ಬೆಂಗಳೂರಿನ ಗ್ಯಾಸ್ ಸ್ಥಾವರ ಪುನರಾರಂಭಗೊಂಡಿದೆ.
ಅಲ್ಲಿ ಎರಡು ತಿಂಗಳಲ್ಲಿ 380 ಮೆಗಾ ವ್ಯಾಟ್ ಉತ್ಪಾದನೆಯಾಗಲಿದೆ. ಶರಾವತಿ ಮತ್ತು ವಾರಾಹಿ ಯೋಜನೆಗಳ ಮೂಲಕವೂ ವಿದ್ಯುತ್ ಉತ್ಪಾದನೆಗೆ ಕ್ರಮ ವಹಿಸಲಾಗಿದೆ ಎಂದು ಅವರು ತಿಳಿಸಿದರು.
...................

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net