ವೈಶಿಷ್ಟೃಗಳ ಗ್ರಾಮ ಕೆ.ಹೊನ್ನಲಗೆರೆ

oppo_2
ಕೆ.ಹೊನ್ನಲಗೆರೆ ಗ್ರಾಮದ ಹೊರ ನೋಟ.
Published on

ಮದ್ದೂರು: ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮ ಹಲವಾರು ವೈಶಿಷ್ಟ್ಯ ಹಾಗೂ ಐತಿಹಾಸಿಕ ಹಿನ್ನೆಲೆ ಒಳಗೊಂಡಿರುವ ವಿಶೇಷ ಗ್ರಾಮವಾಗಿದೆ.

ಗ್ರಾಮದಲ್ಲಿ ಹೇರಳವಾಗಿ ಹೊಂದಲಗ ಅಥವಾ ಹೊನ್ನೆಲಗ ಸೊಪ್ಪು ಬೆಳೆಯುತ್ತಿದ್ದ ಕಾರಣ ಸೊಪ್ಪಿನ ಮೂಲದಿಂದ ಕೆರೆ, ಗೇರಿ ಸೇರಿಕೊಂಡು ಕೆ.ಹೊನ್ನಲಗೆರೆ ಆಯ್ತು ಎಂದು ತಿಳಿದು ಬಂದಿದೆ.

ಗ್ರಾಮದಲ್ಲಿ ಒಕ್ಕಲಿಗರು, ಲಿಂಗಾಯತರು, ವೀರಶೈವರು, ಪರಿಶಿಷ್ಟ ಜಾತಿ ಮತ್ತು ಪಂಗಡದವರು, ವಿಶ್ವಕರ್ಮರು, ಮಡಿವಾಳರು ಸೇರಿದಂತೆ ಬಹುತೇಕ ಎಲ್ಲ ಜನಾಂಗದವರು ವಾಸ ಮಾಡುತ್ತಿದ್ದು, ಶೇ.90 ರಷ್ಟು ಜನರು ರಾಗಿ, ಕಬ್ಬು, ಭತ್ತ, ರೇಷ್ಮೆ, ಕುರಿ ಸಾಕಣೆ, ಜಾನುವಾರು ಸಾಕಣೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಶೇ.10 ರಷ್ಟು ಜನರು ವ್ಯಾಪಾರ ಸೇರಿದಂತೆ ಇನ್ನಿತರ ಕಾಯಕ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ.

ಗ್ರಾಮದಲ್ಲಿ ಬಹುತೇಕರು ಪದವಿ ಪಡೆದುಕೊಂಡು ವಿದ್ಯಾವಂತರಾಗಿ, ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಹಾಗೂ ಖಾಸಗಿ ಕಂಪನಿಗಳಲ್ಲೂ ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಗ್ರಾಮದಲ್ಲಿ ಎಲ್ಲರೂ ಸುಖ, ಶಾಂತಿ, ನೆಮ್ಮದಿ ಹಾಗೂ ಹೊಂದಾಣಿಕೆಯಿಂದ ಸರ್ವ ಜನಾಂಗದ ಶಾಂತಿ ತೋಟ ಎಂಬ ರೀತಿಯಲ್ಲಿ ಅನ್ಯೋನ್ಯವಾಗಿ ಜೀವನ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.

ದೇವಾಲಯಗಳ ತವರೂರು

ಗ್ರಾಮದಲ್ಲಿ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರ ದೇವಾಲಯಗಳು ಇರುವುದು ವಿಶೇಷವಾಗಿದ್ದು, ಮೂರು ದೇವರ ದೇವಾಲಯಗಳು ಸಾಮಾನ್ಯವಾಗಿ ಒಂದೇ ಗ್ರಾಮದಲ್ಲಿ ಸಿಗುವುದು ಅಪರೂಪವಾಗಿದ್ದು, ಕೆ.ಹೊನ್ನಲಗೆರೆ ಗ್ರಾಮದಲ್ಲಿ ಮೂರು ದೇವರ ದೇವಾಲಯಗಳು ನಿರ್ಮಾಣವಾಗಿರುವುದು ವಿಶೇಷ ಎನ್ನುತ್ತಾರೆ.

ಇದರ ಜತೆಗೆ ಪುರಾಣ ಪ್ರಸಿದ್ಧ ನಾರಾಯಣಸ್ವಾಮಿ, ಕೊಳಲು ಗೋಪಾಲಸ್ವಾಮಿ, ಲಕ್ಷ್ಮೀದೇವಿ ದೇವಾಲಯಗಳಿದ್ದು, ಈಶ್ವರ ದೇಗುಲವನ್ನು ಚಾವುಂಡರಾಯ, ಮುಖ್ಯ ಪ್ರಾಣ ದೇವರು ಆಂಜನೇಯಸ್ವಾಮಿ ದೇಗುಲವನ್ನು ವ್ಯಾಸ ರಾಜರು ನಿರ್ಮಾಣ ಮಾಡಿದರು ಎನ್ನಲಾಗಿದೆ. ಜತೆಗೆ ಶ್ರೀ ಪಟ್ಟಲದಮ್ಮ, ಶ್ರೀ ಶನೈಶ್ಚರ, ಶ್ರೀ ತೈಲೂರಮ್ಮ, ಶ್ರೀ ಚೌಡೇಶ್ವರಿ, ಶ್ರೀ ಕಬ್ಬಾಳಮ್ಮ, ಶ್ರೀ ಮಾರಮ್ಮ, ಶ್ರೀ ರಾಮಮಂದಿರ ದೇವಾಲಯಗಳಿವೆ.

ಮುತ್ತುರಾಯನ ಹರಿಸೇವೆ, ಶ್ರೀ ಪಟ್ಟಲದಮ್ಮ ಜಾತ್ರೆ ಹಾಗೂ ಶ್ರೀ ನಾರಾಯಣಸ್ವಾಮಿ ವಾರ್ಷಿಕೋತ್ಸವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಈ ವೇಳೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗುತ್ತದೆ. ಈ ಸಂದರ್ಭದಲ್ಲಿ ಗ್ರಾಮದಿಂದ ವಿವಾಹವಾಗಿ ಹೊರಗಡೆ ಹೋದ ಮಹಿಳೆಯರು ಕುಟುಂಬ ಸಮೇತ ಆಗಮಿಸಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ವಿಶೇಷವಾಗಿದೆ.

ಚಿಕ್ಕ, ದೊಡ್ಡ ಕೆರೆ

ಗ್ರಾಮದಲ್ಲಿ ಚಿಕ್ಕ ಹಾಗೂ ದೊಡ್ಡ ಕೆರೆಗಳಿದ್ದು. ಈ ಕೆರೆಗಳಿಂದ ನೂರಾರು ಎಕರೆ ಅಚ್ಚುಕಟ್ಟು ಪ್ರದೇಶಗಳಿಗೆ ನೀರುಣಿಸಲಾಗುತ್ತದೆ. ಇದರಿಂದ ಗ್ರಾಮದಲ್ಲಿರುವ ರೈತರಿಗೆ ಬೇಸಾಯ ಮಾಡಲು ಅನುಕೂಲವಾಗುತ್ತಿದೆ.

ಗ್ರಾಮದ ಬಿ.ರಾಮಕೃಷ್ಣ ಅವರು ಹಲವಾರು ವರ್ಷಗಳ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ್ದರು ಹಾಗೂ ಸಮಾಜ ಸೇವಕರಾಗಿ ಹಲವಾರು ಸಮಾಜಮುಖಿ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ ಹಾಗೂ ಕೆ.ಹೊನ್ನಲಗೆರೆ ಗ್ರಾಮದಲ್ಲಿ ರಾಮಕೃಷ್ಣ ಶಿಕ್ಷಣ ಸಮೂಹ ಸಂಸ್ಥೆಗಳನ್ನು (ಆರ್.ಕೆ.ಶಿಕ್ಷಣ ಸಮೂಹ ಸಂಸ್ಥೆಗಳನ್ನು) ಪ್ರಾರಂಭಿಸಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುತ್ತಿರುವುದು ಮೆಚ್ಚುಗೆಯ ವಿಷಯವಾಗಿದೆ.

ರಂಗಕಲೆ ಪ್ರೋತ್ಸಾಹ

ಗ್ರಾಮದಲ್ಲಿ ಹಲವಾರು ವರ್ಷಗಳ ಹಿಂದೆ ಹಬ್ಬ ಹಾಗೂ ವಿಶೇಷ ದಿನಗಳಂದು ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳನ್ನು ಇಲ್ಲಿನ ಗ್ರಾಮಸ್ಥರು ಹಾಗೂ ಯುವಕರು ಆಡುತ್ತಿದ್ದು, ನಾಟಕ ನೋಡಲು ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಬಹಳ ಆಸಕ್ತಿಯಿಂದ ಬರುತ್ತಿದ್ದರು. ಇತ್ತೀಚೆಗೆ ಕಂಪ್ಯೂಟರ್, ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿ ರಂಗಕಲೆ ಆಡುವುದು ಕಡಿಮೆಯಾಗಿದೆ.

ಗ್ರಾಮದ ಐತಿಹ್ಯ:

ಆಡುಭಾಷೆಯಲ್ಲಿ ಹೊಂದಲಗೆರೆ ಎನ್ನುತ್ತಿದ್ದರು. ಇಲ್ಲಿ ಲಭ್ಯವಾಗಿರುವ ಶಾಸನಗಳಲ್ಲಿಯೂ ಹೊಂದಲಗೆರೆ, ಹೊನ್ನಲಗೆರೆ ಎಂದೆಲ್ಲ ಉಲ್ಲೇಖಿಸಿವೆ. ಇಲ್ಲಿ ಹೇರಳವಾಗಿ ಸಿಗುವ ಹೊಂದಲಗ ಹಾಗೂ ಹೊನ್ನೆಲಗ ಸೊಪ್ಪಿನ ಮೂಲದಿದ ಕೆರೆ-ಗೆರೆ ಸೇರಿಕೊಂಡು ಹೊನ್ನಲಗೆರೆ ಆಯಿತು ಎಂದು ಹೇಳುತ್ತಾರೆ ಇತಿಹಾಸ ತಜ್ಞರು.

ಇದರ ಜತೆಗೆ ಕೆ.ಹೊನ್ನಲಗೆರೆ ಸಮೀಪವಿರುವ ಕೋಳಿರಾಯನ ಗುಡ್ಡದಲ್ಲಿ ವಿಜಯನಗರ ಅರಸರ ಕಾಲದಲ್ಲಿ ಖಜಾನೆಯಿದ್ದ ಪರಿಣಾಮ ಹೊನ್ನಿನಗೆರೆ ಎಂದು ಕರೆಯುತ್ತಿದ್ದರು, ಕಾಲ ಕ್ರಮೇಣ ಹೊನ್ನಿನಗೆರೆ ಹೋಗಿ ಬಾಯಿಂದ ಬಾಯಿಗೆ ಹೊನ್ನಲಗೆರೆ ಆಯಿತು. ಕೊನೆಗೆ ಹೊನ್ನಲಗೆರೆ ಆಡಳಿತಾತ್ಮಕವಾಗಿ ಮದ್ದೂರು ತಾಲೂಕು ಕಸಬಾಗೆ ಸೇರಿಕೊಂಡು ಪರಿಣಾಮ ಅಂತಿಮವಾಗಿ ಕೆ.ಹೊನ್ನಲಗೆರೆ ಆಯ್ತು ಎಂದು ಹೇಳುತ್ತಾರೆ.

ನಾನು ಎಂದವನಿಗೆ 10 ವರ್ಷ ಮಾತ್ರ ಏಳಿಗೆ

ಗ್ರಾಮದ ಅರಳೀಕಟ್ಟೆ ಬಳಿ ಪ್ರಾಚೀನ ಶಾಸನ ಕಲ್ಲು ಇದೆ. ಈ ಶಾಸನದಲ್ಲಿ ನಾನು ಎಂದವನಿಗೆ ಹತ್ತು ವರ್ಷ ಮಾತ್ರ ಏಳಿಗೆ ಎಂದು ಬರೆಯಲಾಗಿದೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.

ಅರಳೀ ಕಟ್ಟೆಯ ಬಳಿ ಮಾಸ್ತಿ ಕಲ್ಲುಗಳಿವೆ. ಈ ಶಾಸನ ಕಲ್ಲು ವಿಜಯನಗರ ಸಾಮ್ಯಾಜ್ರದ ಎರಡನೇ ಶ್ರೀರಂಗನ ಮಗ ರಾಮರಾಯನ ಕಾಲದ ಶಾಸನವಾಗಿದೆ. ಇದನ್ನು ನಾಗರ ಲಿಪಿಯಲ್ಲಿ ಬರೆಯಲಾಗಿದೆ. ಈ ಶಾಸನದಲ್ಲಿ ರಾಮರಾಯ ಮೈಸೂರು ವಂಶಸ್ಥರಾದ ಚಾಮರಾಜ ಒಡೆಯರ್ ಮಕ್ಕಳಾದ ರಾಮರಾಜಯ್ಯ, ವಿರುಪಾಕ್ಷಯ್ಯ. ಕೋವಿಂದಯ್ಯರಿಗೆ ದತ್ತಿ ನೀಡಿ ಮಾಂಡಲಿಕರಾಗಿ ನೇಮಕ ಮಾಡಿದ ಉಲ್ಲೇಖವಿದೆ ಎಂದು ಇತಿಹಾಸ ತಜ್ಞರು ತಿಳಿಸಿದ್ದಾರೆ.

ಕೆ.ಹೊನ್ನಲಗೆರೆ ಗ್ರಾಮಕ್ಕೆ ತನ್ನದೇಯಾದ ಹಲವಾರು ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ ಹೊಂದಿರುವ ಗ್ರಾಮವಾಗಿದೆ. ಇಲ್ಲಿ ಎಲ್ಲರೂ ಶಾಂತಿ, ಸೌಹಾರ್ದತೆಯಿಂದ ಜೀವನ ನಡೆಸುವ ಗ್ರಾಮ ಸರ್ವ ಜನಾಂಗದ ಶಾಂತಿ ತೋಟವಾಗಿದೆ ಹಾಗೂ ಅನ್ಯೋನ್ಯತೆಗೆ ಇನ್ನೊಂದು ಹೆಸರು ನಮ್ಮ ಗ್ರಾಮಕ್ಕೆ ಎಂಬುದು ಅತೀವ ಸಂತೋಷದ ವಿಷಯವಾಗಿದೆ. ಬಿ.ರಾಮಕೃಷ್ಣ ವಿಧಾನ ಪರಿಷತ್ ಮಾಜಿ ಸದಸ್ಯರು, ಕೆ.ಹೊನ್ನಲಗೆರೆ ಕೆ.ಹೊನ್ನಲಗೆರೆ ಗ್ರಾಮದಲ್ಲಿ ಹಲವಾರು ದೇವಾಲಯಗಳಿದ್ದು, ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಣೆ ಮಾಡುತ್ತೇವೆ. ಎಲ್ಲರೂ ಒಂದೇ ಕುಟುಂಬದ ರೀತಿಯಲ್ಲಿ ಜೀವನ ಮಾಡುತ್ತಿರುವುದು ಹರ್ಷ ತಂದಿದೆ. ಗ್ರಾಮದಲ್ಲಿ ಚಿಕ್ಕ ಹಾಗೂ ದೊಡ್ಡ ಕೆರೆಗಳಿದ್ದು ಹಾಗೂ ಸುಂದರ ಪ್ರಕೃತಿ ಇರುವುದು ಹೆಮ್ಮೆಯ ವಿಷಯವಾಗಿದೆ. ಎಚ್.ಬಿ.ಪುಟ್ಟಸ್ವಾಮಿ ಹಿರಿಯ ಮುಖಂಡ, ಕೆ.ಹೊನ್ನಲಗೆರೆ ಕೆ.ಹೊನ್ನಲಗೆರೆ ಗ್ರಾಮ ಹಲವಾರು ರೀತಿಯಲ್ಲಿ ವಿಶೇಷತೆಗಳನ್ನು ಹೊಂದಿದ್ದು, ಗ್ರಾಮದ ಬಗ್ಗೆ ಪುರಾತತ್ವ ಹಾಗೂ ಸಂಬಂಧಿಸಿದ ಇಲಾಖೆಯವರು ಹೆಚ್ಚಿನ ಮಾಹಿತಿ ಸಂಗ್ರಹಿಸಿದರೆ ಗ್ರಾಮದ ಬಗ್ಗೆ ಮತ್ತಷ್ಟು ಮಾಹಿತಿ ಮತ್ತು ಹಿನ್ನೆಲೆ ಸಿಗಬಹುದು. ಈ ಬಗ್ಗೆ ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು. ಎಚ್.ಪಿ.ಸ್ವಾಮಿ ಮುಖಂಡ, ಕೆ.ಹೊನ್ನಲಗೆರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net