

ಬೆಂಗಳೂರು:ಸಿಎಂ ಹುದ್ದೆಯನ್ನು ಹಿರಿಯ ಸಚಿವ ಕೆ.ಎಚ್.ಮುನಿಯಪ್ಪ ಆವರಿಗೆ ನೀಡಬೇಕೆಂದು ಚಿತ್ರದುರ್ಗದ ಮಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಮಾದಿಗ ಪ್ರಾಧ್ಯಾಪಕರ ವೇದಿಕೆ ಭಾನುವಾರ ಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ "ಒಳಮೀಸಲಾತಿ:ಚಿಂತನ-ಮಂಥನ' ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು.
ಒಳ ಮೀಸಲಾತಿ ಜಾರಿಗೊಳಿಸಿಸುವ ಜತೆಗೆ ಸಿಎಂ ಹುದ್ದೆಯನ್ನು ನಮ್ಮ ಸಮುದಾಯದವರಿಗೆ ನೀಡಬೇಕು. ಕೆಪಿಸಿಸಿ ಅಧ್ಯ ಸ್ಥಾನ,ಡಿಸಿಎಂ ಹುದ್ದೆ ಈವರೆಗೆ ನಮ್ಮ ಸಮಾಜದವರಿಗೆ ನೀಡಿಲ್ಲ. ಪ್ರಸ್ತುತ ಸಚಿವ ಸಂಪುಟದಲ್ಲಿಯೂ ಸಮಾಜದ ರಾಜಕಾರಣಿಗಳಿಗೆ ಸೂಕ್ತ ಖಾತೆ ಅಥವಾ ಪ್ರಭಾವಿ ಸ್ಥಾನಮಾನ ಕೊಟ್ಟಿಲ್ಲ. ನಾಲ್ಕು ದಶಕಗಳಿಂದ ಪಕ್ಷಕ್ಕೆ ನಿಷ್ಠರಾಗಿರುವ ಕೆ.ಎಚ್.ಮುನಿಯಪ್ಪ, 7 ಬಾರಿ ಸಂಸದ, 3 ಬಾರಿ ಕೇಂದ್ರ ಸಚಿವರಾಗಿ ಅನುಭವ ಇದೆ. ಪ್ರಸ್ತುತ ಆಹಾರ ಇಲಾಖೆ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ದೀರ್ಕಾಲದ ತ್ಯಾಗ ಗೌರವಿಸಿ ಸಿಎಂ ಸ್ಥಾನಕ್ಕೆ ಮುನಿಯಪ್ಪನನ್ನು ನೇಮಕ ಮಾಡುವ ಮೂಲಕ ತಳ ಸಮುದಾಯಕ್ಕೆ ಆದ್ಯತೆ ನೀಡುವಂತಾಗಬೇಕು. 2 ತಿಂಗಳಲ್ಲಿ ಸಮಗ್ರ ಮಾಹಿತಿ ಆಧರಿಸಿ ಒಳ ಮೀಸಲಾತಿಯನ್ನು ಸರ್ಕಾರ ಜಾರಿಗೊಳಿಸಬೇಕೆಂದು ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಒತ್ತಾಯಿಸಿದರು.
ಹೊಸಪೇಟೆ ಮಠದ ಶ್ರೀ ಪೂರ್ಣಾನಂದ ಭಾರತಿ ಸ್ವಾಮೀಜಿ, ಮಾಜಿ ರಾಜ್ಯಸಭೆ ಸದಸ್ಯ ಎಲ್. ಹನುಮಂತಯ್ಯ, ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಗೋನಾಲ್ ಬೀಮಪ್ಪ ಮತ್ತಿತರರಿದ್ದರು.
ಸಮುದಾಯದಲ್ಲಿ ಆತಂಕ: "ನ್ಯಾಯಮೂರ್ತಿ ನಾಗಮೋಹನದಾಸ್ ನೀಡುವ ವರದಿಯಲ್ಲಿ ಯಾವ ವ್ಯಾಕ್ಯದಲ್ಲಿ ಯಾರ ವಿರುದ್ಧ ಇದೆಯೋ ಎಂಬ ಆತಂಕ ಸಮುದಾಯದಲ್ಲಿ ಮನೆಮಾಡಿದೆ. ವರದಿ ನಂತರ ಜನಸಂಖ್ಯೆ ಬಗ್ಗೆ ಉಂಟಾಗಬಹುದಾದ ಗೊಂದಲವು ಮಾದಿಗ ಮೀಸಲಾತಿಗೆ ಕೊಕ್ಕೆ ಹಾಕುತ್ತವೆಯೋ ಎಂಬ ಕಳವಳ ಸಮುದಾಯವನ್ನು ಕಾಡುತ್ತಿದೆ' ಎಂದು ಕೇಂದ್ರ ಮಾಜಿ ಸಚಿವ ಎ.ನಾರಾಯಣಸ್ವಾಮಿ ಹೇಳಿದರು. ನಮಗೆ ಬೇಕಿರುವುದು ಜನಸಂಖ್ಯಾ ಆಧಾರಿತ ಮೀಸಲಾತಿ ಅಲ್ಲ. ಸರ್ಕಾರದ ಸೌಲಭ್ಯ ಪಡೆಯದೆ ಅಥವಾ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಲವು ಸಮುದಾಯಗಳು ಹಿಂದುಳಿದಿವೆ. ಅದನ್ನು ಆಧರಿಸಿ ನಮಗೆ ಮೀಸಲಾತಿ ಕಲ್ಪಿಸಬೇಕು ಎಂದು ಪ್ರತಿಪಾದಿಸಿದ ಅವರು, "ಯಾಕೆ ನಮಗೆ ಒಳಮೀಸಲಾತಿಯ ಅವಶ್ಯಕತೆ ಇದೆ ಎಂಬುದರ ವಿವರವಾದ ಮನವಿಯನ್ನು ಆಯೋಗಕ್ಕೆ ಕೊಟ್ಟು ಮನದಟ್ಟು ಮಾಡುವ ಅವಶ್ಯಕತೆಯೂ ಇದೆ ಎಂದರು.