

ಕೋಲಾರ: ಗಾಂಧಿ ಕುಟುಂಬ ಪ್ರಶ್ನಾತೀತ ನಾಯಕತ್ವ ಹೊಂದಿದೆ. ರಾಹುಲ್ ಗಾಂಧಿಯೇ ಎಐಸಿಸಿ ಅಧ್ಯಕ್ಷರಾಗಬೇಕು. ಗಾಂಧಿ ಕುಟುಂಬಕ್ಕೆ ಹತ್ತಿರವಾಗಿದ್ದ ಗುಲಾಂ ನಬಿ ಆಜಾದ್ ಪತ್ರ ಬರೆದಿದ್ದು ಸರಿಯಲ್ಲ ಎಂದು ಎಐಸಿಸಿ ಕಾಯಂ ಆಹ್ವಾನಿತ ಸದಸ್ಯ, ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ನಗರ ನಿವಾಸದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಐಸಿಸಿ ಅಧ್ಯಕ್ಷರಾಗಿ ಸೋನಿಯಾಗಾಂಧಿ ಮುಂದುವರಿದರೂ ಮುಂದೆ ರಾಹುಲ್ ಗಾಂಧಿಯೇ ಅಧ್ಯಕ್ಷರಾಗಬೇಕು, ಸಾಂಸ್ಥಿಕ ಚುನಾವಣೆಗೆ ಆಗ್ರಹಿಸಿ 23 ಮುಖಂಡರು ಪತ್ರ ಬರೆದಿದ್ದರೇ ವಿನಃ ಸೋನಿಯಾಗಾಂಧಿ ನಾಯಕತ್ವದ ವಿರುದ್ಧವಲ್ಲ. ಗುಲಾಂ ನಬಿ ಆಜಾದ್ ನೇರವಾಗಿ ಮಾತನಾಡಲು ಅವಕಾಶವಿತ್ತಾದರೂ ಪತ್ರ ಬರೆದಿದ್ದು ಸರಿಯಲ್ಲ. ಪತ್ರ ಸೋರಿಕೆಯಾಗಿ ಪಕ್ಷಕ್ಕೆ ಹಾನಿಯಾಯಿತು. ಪಕ್ಷ ಸಂಘಟನೆಯ ಪುನಾರಚನೆಯಲ್ಲಿ ವೀರಪ್ಪಮೊಯ್ಲಿ ಅವರನ್ನು ತೆಗೆದಿಲ್ಲ, ಕೇಂದ್ರ ಚುನಾವಣಾ ಕಮಿಟಿಯಲ್ಲಿದ್ದಾರೆ ಎಂದರು.
ಮೋದಿ ಅಲೆಯಿಂದ ನನಗೆ ಸೋಲಾಯಿತು: ಜಿಲ್ಲೆಯಲ್ಲಿ ಹಿಂದೆ ಅನಾಹುತ ಆಗಿದೆ. ಪಕ್ಷಕ್ಕಾಗಿ ಎಲ್ಲರೂ ಒಗ್ಗಟ್ಟಾಗಬೇಕು. ಏನೇ ಆದರೂ ಪಕ್ಷ ಬಲಿಕೊಡಲು ನಾನು ತಯಾರಿಲ್ಲ. ಲೋಕಸಭೆ ಚುನಾವಣೆಯಲ್ಲಿ ಸೋತರೂ 5 ಲಕ್ಷ ವೋಟ್ ಸಿಕ್ಕಿದ್ದು, ಮೋದಿ ಅಲೆಯಿಂದ ನನಗೆ ಸೋಲಾಯಿತು ಎಂದರು.
ಸಮಿತಿ ರಚನೆಗೆ ಗಡುವು: ಮುಳಬಾಗಿಲಿನಿಂದಲೇ ಪಕ್ಷ ಸಂಘಟನೆ ಶುರು ಮಾಡುತ್ತೇವೆ. ತಿಂಗಳೊಳಗೆ ಬೂತ್ ಸಮಿತಿ ರಚನೆಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರೆಸಿ ಸಮಾವೇಶ ಮಾಡಬೇಕು. ಯಾವಾಗ ಚುನಾವಣೆ ಘೋಷಣೆಯಾದರೂ ಎದುರಿಸಲು ಸಜ್ಜಾಗಿರಬೇಕು. ಪಕ್ಷ ಸಂಘಟಿಸಿ ಗ್ರಾಪಂ, ತಾಪಂ ಹಾಗೂ ಜಿಪಂ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಸಜ್ಜಾಗಿ ಎಂದು ಕರೆ ನೀಡಿದರು.
ಕೇಂದ್ರ, ರಾಜ್ಯ ವಿಫಲ: ಕರೊನಾ ನಿರ್ವಹಣೆಯಲ್ಲಿ ಕೇಂದ್ರ-ರಾಜ್ಯ ಸರ್ಕಾರ ವಿಫಲವಾಗಿವೆ. ಕರೊನಾ ಸಂದರ್ಭದಲ್ಲೂ ರಾಜ್ಯ ಸರ್ಕಾರ 4,000 ಕೋಟಿ ರೂ. ಅವ್ಯವಹಾರ ನಡೆಸಿದೆ. ಕಾಂಗ್ರೆಸ್ ಆರೋಗ್ಯಹಸ್ತದ ಮೂಲಕ ಜನರ ಮನೆಗಳಿಗೆ ಹೋಗಿ ಆರೋಗ್ಯ ವಿಚಾರಿಸಿ ಬರಲು ಸ್ವಯಂಸೇವಕರನ್ನು ನೇಮಿಸಿದೆ ಎಂದರು.
ವೈಫಲ್ಯಗಳಲ್ಲಿ ಮುಳುಗಿರುವ ರಾಜ್ಯ ಸರ್ಕಾರಕ್ಕೆ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಸುವ ಧೈರ್ಯವೂ ಇದ್ದಂತಿಲ್ಲ, ಅದನ್ನೂ ಮುಂದೂಡಲು ಪ್ರಯತ್ನಿಸುತ್ತಿದೆ ಎಂದು ಟೀಕಿಸಿದರು.
ಸಿಎಂ ಭೇಟಿಯಾಗುವೆ: ಕಾಂಗ್ರೆಸ್‌ನಲ್ಲಿ ಎಡ-ಬಲ, ಭೋವಿ, ಲಂಬಾಣಿ ಹೀಗೆ ಎಲ್ಲ ವರ್ಗದವರಿದ್ದೇವೆ. ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆ ಬೆಂಬಲವಿದೆ. ಸಿಎಂ ಯಡಿಯೂರಪ್ಪ ಬಳಿ ಪಕ್ಷದ ಮುಖಂಡರ ನಿಯೋಗ ತೆರಳಿ ವರದಿ ಜಾರಿಯಿಂದ ಯಾರಿಗೂ ತೊಂದರೆ ಆಗುವುದಿಲ್ಲವೆಂದು ಮನವರಿಕೆ ಮಾಡಿಕೊಡುವುದಾಗಿ ಮುನಿಯಪ್ಪ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿ, ಜಿಲ್ಲೆಯ 5 ತಾಲೂಕಿನಲ್ಲೂ ಆರೋಗ್ಯ ಹಸ್ತ ಕಾರ್ಯಕ್ರಮ ಯಶಸ್ವಿಯಾಗಿದೆ. ವಾರದಲ್ಲಿ ಮುಳಬಾಗಿಲಿನಲ್ಲಿ ಚಾಲನೆ ನೀಡಲಾಗುವುದು. ಪಕ್ಷದ ವಿರುದ್ಧ ಕೆಲಸ ಮಾಡಿದ ಶಾಸಕರ ಮೇಲೆ ಕ್ರಮದ ಕುರಿತು ಶಿಸ್ತು ಸಮಿತಿ ಪರಿಶೀಲಿಸುತ್ತಿದೆ. ವಿವಿಧ ಘಟಕಗಳ ಪದಾಧಿಕಾರಿಗಳಾದ ಊರುಬಾಗಿಲು ಶ್ರೀನಿವಾಸ್, ಇಕ್ಬಾಲ್ ಅಹಮದ್, ಪ್ರಸಾದ್ ಬಾಬು, ಉದಯಶಂಕರ್, ಕೆ.ಜಯದೇವ್, ನಾಗರಾಜ್, ಎಸ್. ಮಂಜುನಾಥ್, ರತ್ನಮ್ಮ, ಕುಮಾರ್, ಕೃಷ್ಣೇಗೌಡ, ಅರಹಳ್ಳಿ ಗೋಪಾಲಕೃಷ್ಣ, ಬೆಳ್ಳೂರು ಆಂಜಿನಪ್ಪ, ಯಲ್ಲಪ್ಪ, ಕಾರ್ಗಿಲ್ ವೆಂಕಟೇಶ್ ಇತರರಿದ್ದರು.