ದೇಶ ರಕ್ಷಣೆಯಲ್ಲಿ ಪ್ರಧಾನಿ ಮೋದಿ ವಿಫಲ, ಕೇಂದ್ರದ ಮಾಜಿ ಸಚಿವ ಮುನಿಯಪ್ಪ ಟೀಕೆ

30-klr-3
Published on

ಕೋಲಾರ: ದೇಶದಲ್ಲಿ ಕರೊನಾ ನಿಯಂತ್ರಣ, ಗಡಿ ರಕ್ಷಣೆಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಎಲ್ಲ ತೀರ್ಮಾನ ತೆಗೆದುಕೊಂಡು ನಾಮಕೇವಾಸ್ತೆಗೆ ಪ್ರತಿಪಕ್ಷಗಳೊಂದಿಗೆ ಮಾತನಾಡುವ ನಾಟಕವಾಡುತ್ತಿದೆ ಎಂದು ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಟೀಕಿಸಿದರು.

ಕರೊನಾ ತಡೆಯಲು ಲಾಕ್‌ಡೌನ್ ತೀರ್ಮಾನ ತೆಗೆದುಕೊಳ್ಳುವಲ್ಲಿ ಕೇಂದ್ರ ಸರ್ಕಾರ ಎಡವಿದೆ. ಕಾಲಾವಕಾಶ ನೀಡದೆ ದಿಢೀರ್ ಲಾಕ್‌ಡೌನ್ ಮಾಡಿದ್ದರಿಂದ ಎಲ್ಲರೂ ತೊಂದರೆಗೆ ಸಿಲುಕಿದರು, ಲಾಕ್‌ಡೌನ್ ತೆರವಿನ ನಂತರ ಹೆಚ್ಚುತ್ತಿರುವ ಕರೊನಾ ಪ್ರಕರಣಗಳ ನಿಯಂತ್ರಣದಲ್ಲೂ ವಿಫಲವಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು.

ದೇಶದ ಗಡಿ ರಕ್ಷಣೆಯಲ್ಲಿ ಪ್ರಧಾನಿ ಮೋದಿ ವಿಫಲರಾಗಿದ್ದಾರೆ, ಗಡಿ ಎಷ್ಟು ಅತಿಕ್ರಮಣವಾಗಿದೆ, ಎಷ್ಟು ಯೋಧರು ಪ್ರಾಣತೆತ್ತಿದ್ದಾರೆಂಬ ಬಗ್ಗೆ ಮಾತೇ ಆಡುವುದಿಲ್ಲ. ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ಪಡೆದು ತೀರ್ಮಾನ ತೆಗೆದುಕೊಳ್ಳುವ ಬದಲು ಮೊದಲೇ ತೀರ್ಮಾನ ಮಾಡಿ ಚರ್ಚಿಸುವುದು ಸರಿಯಾದ ಧೋರಣೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜು.2ರಂದು ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ. ಕರೊನಾ ಮಾರ್ಗಸೂಚಿ ಪಾಲಿಸಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕಾರ್ಯಕ್ರಮ ನೇರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶಲು ಮಾತನಾಡಿ, 7831 ಕಡೆಗಳಲ್ಲಿ 16,000 ಡಿಜಿಟಲ್ ಬಾಕ್ಸ್ ಮೂಲಕ ರಾಜ್ಯದ ಎಲ್ಲ ಪಂಚಾಯಿತಿಗಳಲ್ಲಿ 10 ಲಕ್ಷ ಜನ ವೀಕ್ಷಿಸಲು ಸಿದ್ಧತೆ ಮಾಡಲಾಗಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿ, ಜಿಲ್ಲೆಯ 187 ಕಡೆ ಪದಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಕಾಂಗ್ರೆಸ್ ಶಾಸಕರು ಇರುವೆಡೆ ಆಯಾ ಶಾಸಕರೇ ಜವಾಬ್ದಾರಿ ವಹಿಸಿದ್ದಾರೆ. ಕೋಲಾರ ಮತ್ತು ಮುಳಬಾಗಿಲು ತಾಲೂಕಿಗೆ ಕೆ.ಎಚ್. ಮುನಿಯಪ್ಪ ನೇತೃತ್ವ ವಹಿಸಿದ್ದಾರೆ ಎಂದರು.

ಮುಖಂಡರಾದ ಜಮೀರ್ ಆಹಮದ್, ಜಿಲ್ಲಾ ಉಪಾಧ್ಯಕ್ಷ ಎಲ್.ಎ.ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸಾದ್‌ಬಾಬು, ಉದಯ್‌ಕುಮಾರ್, ಕಿಸಾನ್ ಖೇತ್ ಜಿಲ್ಲಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಎಸ್ಟಿ ಘಟಕ ಅಧ್ಯಕ್ಷ ನಾಗರಾಜ್, ಕೆಪಿಸಿಸಿ ಒಬಿಸಿ ಉಪಾಧ್ಯಕ್ಷ ಎಸ್.ಮಂಜುನಾಥ್, ಎಸ್ಸಿ ಘಟಕ ಜಿಲ್ಲಾಧ್ಯಕ್ಷ ಕೆ. ಜಯದೇವ್, ರಾಜ್ಯ ಮುಖಂಡ ಎಚ್.ವಿ. ಕುಮಾರ್, ಖಾದ್ರಿಪುರ ಬಾಬು, ಇಕ್ಬಾಲ್ ಆಹಮದ್ ಇದ್ದರು.

ಪದಗ್ರಹಣ ಮುಗಿಯಲಿ ಮಾತಾಡ್ತೇನೆ: ನನ್ನ ಅವಧಿಯಲ್ಲಿ ಆಗದ ಕೆಲಸವನ್ನು ಹಾಲಿ ಸಂಸದರು ವರ್ಷದಲ್ಲೇ ಮಾಡಿದ್ದಾರೆ ಎಂಬ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆ.ಎಚ್.ಎಂ., ನಾನು ಏನು ಮಾಡಿಲ್ಲ, ಅವರು ಏನು ಮಾಡಿದ್ದಾರೆಂದು ಅವರನ್ನೇ ಕೇಳಿ, ಸ್ವಪಕ್ಷೀಯ ಎದುರಾಳಿಗಳ ವಿರುದ್ಧ ಕ್ರಮಕ್ಕೆ ಈ ಸಂದರ್ಭದಲ್ಲಿ ಉತ್ತರಿಸಲ್ಲ, ನಿಮಗೆ ಬರೆಯುವ ಕೆಲಸವೂ ಇಲ್ಲ. ಡಿಕೆಶಿ ಪದಗ್ರಹಣ ಸಮಾರಂಭ ಮುಗಿಯಲಿ, ನಂತರ ಹಲವು ವಿಷಯಗಳ ಬಗ್ಗೆ ಮಾತನಾಡುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net