

ಕೆ.ಆರ್.ಪೇಟೆ: ಸೋಲಿಗೆ ನಾನು ಹೆದರಿ ಕೆ.ಆರ್.ಪೇಟೆ ಬಿಟ್ಟು ಎಲ್ಲಿಯೂ ಓಡಿ ಹೋಗುವವನಲ್ಲ. ನನ್ನ ಅಳಿವು ಉಳಿವು ನನ್ನ ಜನ್ಮಭೂಮಿಯಾದ ಕೆ.ಆರ್.ಪೇಟೆಯಲ್ಲೇ ಎಂದು ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನಾ ಸಭೆಯಲ್ಲಿ ಮಾತನಾಡಿದ ಅವರು, ನನ್ನ ರಾಜಕೀಯ ಜೀವನದಲ್ಲಿ ಸೋಲು, ಗೆಲುವು ಎರಡನ್ನೂ ಸಮಾನವಾಗಿ ಕಂಡಿದ್ದೇನೆ. ಸಚಿವನಾಗಿಯೂ ಕೆಲಸ ಮಾಡಿದ್ದೇನೆ. ನಾನು ಕೆಲಸ ಮಾಡಿದ ಬಗ್ಗೆ ಆತ್ಮತೃಪ್ತಿಯಿದೆ. ಕೆ.ಆರ್.ಪೇಟೆ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಸಂಪೂರ್ಣಗೊಳಿಸುವ ನಿಟ್ಟಿನಲ್ಲಿ ನಾನು ನೂತನ ಸರ್ಕಾರದಲ್ಲಿ ವ್ಯವಹರಿಸುವ ಜತೆಗೆ ಕ್ಷೇತ್ರದ ಶಾಸಕರಿಗೆ ಅಗತ್ಯ ಸಹಕಾರ ನೀಡಲು ಬದ್ಧನಿದ್ದೇನೆ ಎಂದು ಹೇಳಿದರು.
ವಿರೋಧಿಗಳು ನನ್ನ ವಿರುದ್ಧ ಏಕವಚನದಲ್ಲಿ ಮಾತನಾಡಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ಈ ವರ್ತನೆಯನ್ನು ಬದಲಿಸಿಕೊಳ್ಳದಿದ್ದರೆ, ಅವರಿಗೆೆ ಬುದ್ಧಿ ಕಲಿಸುವುದು ಹೇಗೆಂದು ನನಗೆ ಗೊತ್ತಿದೆ. ಅಂತಹ ಹತ್ತು ಜನ ನಾಯಕರನ್ನು ಹುಟ್ಟಾಕುವ ಶಕ್ತಿ ದೇವರು ನನಗೆ ಕೊಟ್ಟಿದ್ದಾನೆ. ಕ್ಷೇತ್ರದಲ್ಲಿ ಗೂಂಡಾಗಿರಿ, ಗದ್ದಲ ನಡೆಯಲು ನಾನು ಬಿಡಲ್ಲ. ನನ್ನ ಜೀವನದ ಕೊನೆಯ ಉಸಿರಿನವರೆಗೂ ಕ್ಷೇತ್ರದ ಜನತೆಯ ಸೇವಕನಂತೆ ಕೆಲಸ ಮಾಡುತ್ತೇನೆ. ನಾನು ಕೆ.ಆರ್.ಪೇಟೆ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ನಾನು ಸತ್ತಾಗ ನನ್ನ ದೇಹವು ಮಣ್ಣಾಗುವುದು ಜನ್ಮಭೂಮಿ ಮಣ್ಣಿನಲ್ಲಿ ಎಂದು ನಾರಾಯಣಗೌಡ ಭಾವುಕರಾದರು.
ಜಿಪಂ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಪುರಸಭಾ ಸದಸ್ಯ ಬಸ್ ಸಂತೋಷ್‌ಕುಮಾರ್, ತಾಪಂ ಮಾಜಿ ಅಧ್ಯಕ್ಷ ಜವರಾಯಿಗೌಡ ಮಾತನಾಡಿದರು.
ಜಿಪಂ ಮಾಜಿ ಉಪಾಧ್ಯಕ್ಷ ಕಿಕ್ಕೇರಿ ಪ್ರಭಾಕರ್, ಬೇಲದಕೆರೆ ಪಾಪೇಗೌಡ, ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ಕೆ.ಜಿ.ತಮ್ಮಣ್ಣ, ಡಿ.ಪಿ.ಪರಮೇಶ್, ಪುರಸಭೆ ಅಧ್ಯಕ್ಷೆ ಮಹಾದೇವಿ, ಬಿಜೆಪಿ ನಗರ ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಕಲಾ ರಮೇಶ್, ಪುರಸಭಾ ಸದಸ್ಯರಾದ ಕೆ.ಎಸ್.ಪ್ರಮೋದ್, ಬಿಲ್ಲೇನಹಳ್ಳಿ ಕುಮಾರ್, ಮುಖಂಡ ದಯಾನಂದ್ ಇದ್ದರು.