ಕೆ.ಸಿ. ವ್ಯಾಲಿ, ಎಚ್.ಎನ್.ವ್ಯಾಲಿಯಿಂದ ಅಂತರ್ಜಲ ವೃದ್ಧಿ, ಶಾಸಕ ಕೃಷ್ಣಭೈರೇಗೌಡ ಅಭಿಮತ, ವೆಂಕಟಗಿರಿಕೋಟೆ ಕೆರೆ ಪರಿಶೀಲಿಸಿದ ಮುಖಂಡರು

9-vij-1a-venkatagirikote-H N vally
Published on

ವಿಜಯಪುರ: ಬರಗಾಲ ಪೀಡಿತ ಪ್ರದೇಶಗಳಾದ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರ, ಕೋಲಾರದ ಭಾಗಗಳಿಗೆ ಕೆ.ಸಿ. ವ್ಯಾಲಿ ಹಾಗೂ ಎಚ್.ಎನ್.ವ್ಯಾಲಿ ಯೋಜನೆಯಿಂದ ಅನುಕೂಲವಾಗಲಿದೆ ಎಂದು ಶಾಸಕ ಕೃಷ್ಣಭೈರೇಗೌಡ ತಿಳಿಸಿದರು.

ಹೋಬಳಿಯ ವೆಂಕಟಗಿರಿಕೋಟೆಯ ಕೆರೆಗೆ ಎಚ್.ಎನ್.ವ್ಯಾಲಿ ಯೋಜನೆಯಲ್ಲಿ ಹರಿಯುತ್ತಿರುವ ನೀರು ಹಾಗೂ ಕೆರೆಗಳು ವೀಕ್ಷಣೆ ಮಾಡಿ ಮಾತನಾಡಿದರು.

ಮಳೆಯಾಶ್ರಿತ ಪ್ರದೇಶಗಳ ಕೆರೆಗಳನ್ನು ತುಂಬಿಸಿ ಅಂತರ್ಜಲ ಪ್ರಮಾಣ ಹೆಚ್ಚಿಸುವಲ್ಲಿ ಸ್ವಲ್ಪಮಟ್ಟಿಗೆ ಯಶಸ್ಸು ಕಂಡಿದ್ದೇವೆ. ಲಾಕ್‌ಡೌನ್ ಕಾರಣದಿಂದಾಗಿ ಕಾರ್ಮಿಕರ ಕೊರತೆಯಿಂದ ಈ ಭಾಗಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹರಿಯಬೇಕಾಗಿದ್ದ ನೀರಿನ ಪ್ರಮಾಣ ಕಡಿಮೆಯಾಗಿದೆ. ಸೆಪ್ಟೆಂಬರ್‌ನಲ್ಲಿ ನೀರಿನ ಪ್ರಮಾಣ ಏರಿಕೆಯಾಗಲಿದೆ ಎಂದು ಹೇಳಿದರು.

ಕೆ.ಸಿ. ವ್ಯಾಲಿ ಯೋಜನೆಗೆ 1,400 ಕೋಟಿ, ಎಚ್.ಎನ್.ವ್ಯಾಲಿ ಯೋಜನೆಗೆ 1,000 ಕೋಟಿ ಅನುದಾನವನ್ನು ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿತ್ತು. ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರದ ಯೋಜನೆ ಮೊಟಕುಗೊಳಿಸಬಾರದು ಎಂದು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದ್ದೇವೆ. ಯಾವುದೇ ಯೋಜನೆ ಕೈ ಬಿಡುವುದಿಲ್ಲ ಎಂದು ಸಣ್ಣ ನೀರಾವರಿ ಸಚಿವ ಭರವಸೆ ನೀಡಿದ್ದಾರೆ ಎಂದರು.

ವೃಷಭಾವತಿ ವ್ಯಾಲಿ ಯೋಜನೆಯಡಿ ದೇವನಹಳ್ಳಿಯ 9 ಕೆರೆ, ತೂಬುಗೆರೆಯ 15 ಸೇರಿ ದೊಡ್ಡಬಳ್ಳಾಪುರದಲ್ಲಿ 78 ಕೆರೆಗಳಿಗೆ ನೀರು ಹರಿಸಲು ಸಮ್ಮಿಶ್ರ ಸರ್ಕಾರದಲ್ಲಿ ಯೋಜನೆ ರೂಪಿಸಲಾಗಿತ್ತು. ಮುಂದಿನ ದಿನಗಳಲ್ಲಿ ಈ ಯೋಜನೆಯೂ ಅನುಷ್ಠಾನಗೊಂಡರೆ ಗ್ರಾಮಾಂತರ ಜಿಲ್ಲೆಯ ಎಲ್ಲ ಕೆರೆಗಳಿಗೂ ನೀರು ಸಮೃದ್ಧಿಯಾಗಿ ಹರಿಯಲಿದೆ ಎಂದರು.

ಕೆಪಿಸಿಸಿ ಸದಸ್ಯ ಚಿನ್ನಪ್ಪ, ಜಿಲ್ಲಾ ಘಟಕದ ಪ್ರಚಾರ ಸಮಿತಿ ಅಧ್ಯಕ್ಷ ಬಿ.ಚೇತನ್ ಗೌಡ, ಜಗನ್ನಾಥ್, ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ರಾಮಚಂದ್ರಪ್ಪ, ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯೆ ರಾಧಮ್ಮಮುನಿರಾಜು, ತಾಪಂ ಸದಸ್ಯೆ ನಂದಿನಿ, ಮುಖಂಡರಾದ ಎಂ.ಮುನಿನರಸಿಂಹಯ್ಯ, ಎಂ.ನಾರಾಯಣಸ್ವಾಮಿ, ಶಾಂತಕುಮಾರ್, ಬುಳ್ಳಹಳ್ಳಿ ರಾಜಪ್ಪ, ಯುವ ಘಟಕದ ಅಧ್ಯಕ್ಷ ನಾಗೇಶ್, ಮಂಡಿಬೆಲೆ ದೇವರಾಜಪ್ಪ, ನಟರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net