

ಪ್ರವೀಣ್‌ರಾಜ್ ಕೊಲ ಕಡಬ
ಸಾಲು ಸಾಲು ಗುಡ್ಡಗಳಿಗೆ ಪ್ರಕೃತಿಯ ಹಚ್ಚ ಹಸಿರಿನ ಹೊದಿಕೆ... ನೋಡುಗರ ಕಣ್ಮನ ಸೆಳೆಯುವ, ಪ್ರವಾಸಿಗರನ್ನು ಕೈಬೀಸಿ ಕರೆಯುವ ತಾಣ... ಕಡಬ ತಾಲೂಕು ಕೊಲ ಗ್ರಾಮದ ಕೆ.ಸಿ.ಫಾರಂ ಗುಡ್ಡ.
ಇಂಥ ಮನೋಹರ ಪರಿಸರವನ್ನು ಕಿಡಿಗೇಡಿಗಳು ಹಾಳುಗೆಡವುತ್ತಿದ್ದಾರೆ. ಇಲ್ಲಿನ ಗುಡ್ಡದಲ್ಲಿ ಅಲ್ಲಲ್ಲಿ ಸಿಗುವ ಖಾಲಿ ಬಿಯರ್ ಬಾಟಲ್, ಒಡೆದ ಗ್ಲಾಸಿನ ಚೂರುಗಳು, ಅನೈತಿಕ ಚಟುವಟಿಕೆಗೆ ಬಳಕೆಯಾಗುವ ವಸ್ತುಗಳು ಗುಡ್ಡದ ದುರ್ಬಳಕೆ ಬಗ್ಗೆ ಗಮನ ಸೆಳೆಯುತ್ತದೆ. ಗುಡ್ಡದ ಅಂದ ಸವಿಯಲು ಬರುವ ಕೆಲವರು ಪಾರ್ಟಿಗೆ ಬಳಸಿಕೊಂಡು ನೈಜತೆ ಹಾಳುಗೆಡುವುತ್ತಿರುವುದು ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿದೆ.
704 ಎಕರೆಯಲ್ಲಿ ಹರವಿಕೊಂಡಿರುವ ಪಶುಸಂಗೋಪನಾ ಇಲಾಖೆ ಒಂದು ಕಾಲದಲ್ಲಿ ರಾಜ್ಯದಲ್ಲೇ ಹೆಸರು ಪಡೆದಿತ್ತು. ಈ ಫಾರ್ಮ್‌ನ ಈಗಿನ ಪರಿಸ್ಥಿತಿ ಎಲ್ಲವೂ ಅಯೋಮಯ. ಸಿಬ್ಬಂದಿ ಕೊರತೆಯಿಂದ ಎಲ್ಲವೂ ತೊಂದರೆಗೀಡಾಗಿದೆ. ಈ ಹಿಂದೆ ಫಾರ್ಮ್ ಸುತ್ತ ಮಣ್ಣು ಅಗೆದು ಬೇಲಿ ಹಾಕಲಾಗಿತ್ತು. ಈಗ ಗಂಡಿಬಾಗಿಲು, ಆನೆಗುಂಡಿ ಮೊದಲಾದೆಡೆ ಬೇಲಿ ಕಿತ್ತು ಒಳಪ್ರವೇಶಿಸುತ್ತಾರೆ. ಉಪ್ಪಿನಂಗಡಿ- ಕಡಬ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಗೋಕುಲನಗರ ಎಂಬಲ್ಲಿ ಈ ಇಲಾಖಾ ಜಾಗಕ್ಕೆ ಪ್ರವೇಶ ದ್ವಾರವಿದ್ದು ಈ ಹಿಂದೆ ಇಲ್ಲಿ ಕಾವಲುಗಾರ ಇರುತ್ತಿದ್ದ. ಈಗ ಯಾವುದೂ ಇಲ್ಲಿಲ್ಲ. ಈ ಹಿಂದೆ ಇದ್ದ ಗೇಟಿನ ಪಕ್ಕದಲ್ಲೆ ಇನ್ನೊಂದು ಸುಂದರ ಗೇಟು ನಿರ್ಮಾಣವಾಗಿದೆ. ಈ ಗೇಟು ಈಗ ಸದಾ ತೆರೆದಿದ್ದು, ಕೇಳುವರಿಲ್ಲದಂತಾಗಿದೆ. ರಜಾದಿನಗಳಲ್ಲಿ ಇಲ್ಲಿಗೆ ಬರುವ ಕೆಲವರು ತಿಂಡಿ ಪೊಟ್ಟಣಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಕುಡಿದು ಮದ್ಯದ ಬಾಟಲಿಗಳನ್ನು ಹುಡಿ ಮಾಡಿ ಮೋಜು ಮಸ್ತಿಯಲ್ಲಿ ತೊಡಗಿರುತ್ತಾರೆ.
ಯುವಜನತೆಯ ಮಜಾ ಉಡಾಯಿಸುವ ತಾಣವಾಗಿ ಮಾರ್ಪಟ್ಟಿರುವ ುಡ್ಡದ ಮೂಲ ಅಸ್ತಿತ್ವ ಉಳಿಸಿಕೊಳ್ಳಬೇಕು. ಇಲ್ಲೊಂದು ಪೊಲೀಸ್ ಹೊರಠಾಣೆ ನಿರ್ಮಿಸಿ ಭದ್ರತೆ ಒದಗಿಸಬೇಕು.
ಹೇಮಾ ಎಂ.ಶೆಟ್ಟಿ, ಕೊಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ
ಪರಿಸರ ವೀಕ್ಷಿಸಲು ಬರುವ ನೆಪದಲ್ಲಿ ಗುಡ್ಡಗಳ ನೈಜತೆ ಹಾಳುಗಡವುತ್ತಿರುವ ಬಗ್ಗೆ ಇಲಾಖೆ ಗಮನಕ್ಕೆ ಬಂದಿದೆ. ಗುಡ್ಡಕ್ಕೆ ಬರುವ ಮಂದಿಯನ್ನು ತೆರಳಲು ಸೂಚಿಸಿದರೆ ನಮ್ಮ ಮೇಲೆಯೆ ಎರಗಿ ಬೀಳುತ್ತಾರೆ. ಭದ್ರತೆ ಒದಗಿಸುವ ಸಲುವಾಗಿ ಇಲಾಖಾ ಜಾಗದಲ್ಲಿ ಪೊಲೀಸ್ ಹೊರಠಾಣೆ ನಿರ್ಮಿಸಿ ಎಂದು ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಲಾಗಿದೆ.
ಡಾ.ಹೆನ್ರಿ ರೊನಾಲ್ಡ್, ಕೊಲ ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ