

ಬೆಂಗಳೂರು: ರಾಜಕಾಲುವೆಗಳಲ್ಲಿ ಸ್ವಚ್ಚನೀರನ್ನು ಮಾತ್ರ ಹರಿಸುವ ಬಿಬಿಎಂಪಿಯ ಮಹತ್ವಾಕಾಂಕ್ಷಿ ಯೋಜನೆ ‘ಕೆ-100 ನಾಗರಿಕ ಜಲಮಾರ್ಗ’ದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಜ್ಜಾಗಿದೆ. ಆದರೆ, ಈ ಹಂತದಲ್ಲಿ ಮಳೆನೀರನ್ನು ಹರಿಸುವ ಬದಲು ಕೊಳಚೆನೀರು ಹರಿಯಲು ಅವಕಾಶ ಮಾಡಿಕೊಟ್ಟಿರುವ ಜಲಮಂಡಳಿಯು ಪ್ರಾಜೆಕ್ಟ್‌ಅನ್ನು ಕಳಾಹೀನಗೊಳಿಸಿದೆ.
ಉದ್ಘಾಟನೆಗೂ ಮುನ್ನ ಜಲಮಾರ್ಗದ ಅಲ್ಲಲ್ಲಿ ನೀರು ಹರಿಯುವ ಮಧ್ಯೆ ಸೌಂದರ್ಯಿಕರಣದ ಕೆಲಸ ಬಾಕಿ ಇದೆ. ಈ ಕಾರ್ಯ ಮಾಡುವ ಮುನ್ನ ರಾಜಕಾಲುವೆಗೆ ಕೊಳಚೆನೀರು ಹರಿಯದಂತೆ ಕಣ್ಗಾವಲು ಇಡಬೇಕಿದೆ. ಇದಕ್ಕಾಗಿ ಪ್ರತ್ಯೇಕ ಕೊಳಚೆನೀರು ಪೈಪ್‌ಲೇನ್ ನಿರ್ಮಿಸಬೇಕಿದ್ದ ಜಲಮಂಡಳಿ ಕಾಮಗಾರಿಯನ್ನು ನಿಧಾನಗೊಳಿಸಿದೆ. ಇದರ ಪರಿಣಾಮ ಯೋಜನೆಯ ಗುತ್ತಿಗೆದಾರರು ತಮ್ಮ ಕೆಲಸ ಪೂರ್ಣಗೊಳಿಸಲು ದೊಡ್ಡ ಗಾತ್ರದ ಹೂಕುಂಡಗಳನ್ನು ಇರಿಸಿದ್ದಾರೆ. ಕಲುಷಿತ ನೀರಿನ ಮಧ್ಯೆಯೇ ಹೂಕುಂಡಗಳನ್ನು ಇಟ್ಟಿರುವುದು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ.
ಯೋಜನೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ತ್ಯಾಜ್ಯ ನೀರಿನಲ್ಲಿ ಹೂಕುಂಡಗಳನ್ನು ಬೆಳೆಸಲು ಇಷ್ಟೆಲ್ಲಾ ಸರ್ಕಸ್ ಮಾಡಬೇಕಿತ್ತೆ ಎಂದು ರಾಜಕಾಲುವೆ ಬದಿ ನೆಲೆಸಿರುವ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಮಗಾರಿ ಪೂರ್ಣವಾದ ಮೇಲೆಯೇ ಸೌಂದರ್ಯಿಕರಣ ಕೆಲಸಗಳನ್ನು ಕೈಗೊಳ್ಳಬೇಕು ಎಂದು ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಎಸ್.ಅಮರೇಶ್ ಆಗ್ರಹಿಸಿದ್ದಾರೆ.
ತ್ಯಾಜ್ಯನೀರು ಹರಿಯುತ್ತಿರುವುದು ಏಕೆ?:
ಈಗಾಗಲೇ ರಾಜಕಾಲುವೆಯಲ್ಲಿ ಹೂಳೆತ್ತಿ, ತಡೆಗೋಡೆಯನ್ನು ಹೊಸದಾಗಿ ನಿರ್ಮಿಸಿ ಮಲಿನ ನೀರು ಹರಿಯದಂತೆ ತಡೆ ಒಡ್ಡಲಾಗಿದೆ. ಕೆ.ಆರ್.ಮಾರುಕಟ್ಟೆ ಬಳಿಯ ಕುಂಬಾರಗುಂಡಿ, ಶಾಂತಿನಗರ ಬಸ್ ನಿಲ್ದಾಣದ ಬಳಿ ಸೇರಿ 3 ಕಡೆ ತ್ಯಾಜ್ಯನೀರು ಹರಿಯುವುದಕ್ಕೆ ಇನ್ನೂ ತಡೆಬಿದ್ದಿಲ್ಲ. ಕುಂಬಾರಗುಂಡಿ ಬಳಿ 5 ಎಂಎಲ್ಡಿ ಸಾಮರ್ಥ್ಯದ ತ್ಯಾಜ್ಯನೀರು ಸಂಸ್ಕರಣಾ ಘಟಕದ ಕಾಮಗಾರಿ ಹಾಗೂ ಶಾಂತಿನಗರದ ಬಳಿ 15 ಎಂಎಲ್ಡಿ ಸಾಮರ್ಥ್ಯದ ಇಂಟರ್ ಮೀಡಿಯೆಟ್ ಸೀವೇಜ್ ಪಂಪಿಂಗ್ ಸ್ಟೇಷನ್ (ಐಎಸ್‌ಪಿಎಸ್) ನಿರ್ಮಾಣದ ಕಾಮಗಾರಿ ಬಾಕಿ ಇದೆ. ಜಾಗದ ಹಸ್ತಾಂತರ ನಿಧಾನವಾದ ಕಾರಣ ಕಾಮಗಾರಿ ವಿಳಂಬವಾಗಿದೆ ಎಂದು ಜಲಮಂಡಳಿ ಕಾರಣ ನೀಡುತ್ತಿದೆ. ಇದನ್ನು ಒಪ್ಪದ ಪಾಲಿಕೆಯು ಗಡುವಿನೊಳಗೆ ಕೆಲಸ ಮಾಡಲು ಬಿಡಬ್ಲುೃಎಸ್‌ಎಸ್ ಸಿದ್ಧವಿಲ್ಲ ಎಂದು ಆಕ್ಷೇಪಿಸಿದೆ. ಸಮನ್ವಯ ಕೊರತೆಯಿಂದಾಗಿ ಯೋಜನೆಯ ಕೊನೆಯ ಹಂತದಲ್ಲಿ ಹೊಸ ಸಮಸ್ಯೆಯನ್ನು ಹುಟ್ಟುಹಾಕಲಾಗಿದೆ ಎಂಬ ಆಕ್ಷೇಪವೂ ಕೇಳಿಬಂದಿದೆ.
ಏನಿದು ಕೆ-100 ಯೋಜನೆ?:
ಕೋರಮಂಗಲ ಕಣಿವೆಯ ಭಾಗವಾಗಿ ಕೆ.ಆರ್.ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆಯವರೆಗಿನ 9.2 ಕಿ.ಮೀ. ಉದ್ದದ ರಾಜಕಾಲುವೆಯನ್ನು 179 ಕೋಟಿ ರೂ. ವೆಚ್ಚದಲ್ಲಿ ಜಲಮಾರ್ಗವಾಗಿ ಮಾರ್ಪಡಿಸಲಾಗುತ್ತಿದೆ. ಕಲುಷಿತಗೊಂಡಿರುವ ರಾಜಕಾಲುವೆಯ ತಳಭಾಗವನ್ನು ಪೂರ್ಣವಾಗಿ ಸ್ವಚ್ಛಗೊಳಿಸಿ ನೀರು ಇಂಗುವಂತೆ ವಿನ್ಯಾಸಗೊಳಿಸಿ ಅಭಿವೃದ್ಧಿಗೊಳಿಸಲಾಗಿದೆ. ರಾಜಕಾಲುವೆಯ ಎರಡೂ ಬದಿಯ ತಡೆಗೋಡೆ, ತಳಮಟ್ಟದ ಸೇತುವೆಗಳನ್ನು ವಾಸ್ತುಶಿಲ್ಪದ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಮಾರ್ಗದುದ್ದಕ್ಕೂ ಅಲ್ಲಲ್ಲಿ ನಾಗರಿಕರಿಗಾಗಿ ವಿಹಾರ ತಾಣ ನಿರ್ಮಿಸಲಾಗಿದೆ. ರಾತ್ರಿ ವೇಳೆ ಉದ್ಯಾನದ ರೀತಿಯಲ್ಲಿ ಅಲಂಕಾರಿಕ ವಿದ್ಯುದ್ದೀಕರಣ ಅಳವಡಿಸಲಾಗಿದೆ. ಪಾದಚಾರಿ ಮಾರ್ಗ, ರಾಜಕಾಲುವೆಯ ಒಂದು ಕಡೆಯಿಂದ ಇನ್ನೊಂದೆಡೆಗೆ ಸಂಚರಿಸಲು ಬ್ರಿಡ್ಜ್ ನಿರ್ಮಿಸಿ, ಎರಡೂ ಬದಿಯ ಸರ್ವೀಸ್ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಮರಗಿಡಗಳನ್ನೂ ಬೆಳೆಸಿ ಪರಿಸರವನ್ನು ಚಂದಗೊಳಿಸುವ ಕಾರ್ಯ ಪೂರ್ಣಗೊಳಿಸಲಾಗಿದೆ.
ಸೂಚನೆ ಪಾಲಿಸದ ಜಲಮಂಡಳಿ?:
2021ರಲ್ಲಿ ಯೋಜನೆಗೆ ಅನುಮತಿ ನೀಡಿದ ವೇಳೆ ಒಂದೂವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಟೆಂಡರ್ ಒಪ್ಪಿಗೆ ನೀಡಲಾಗಿತ್ತು. 2-3 ಬಾರಿ ಗಡುವು ಮೀರಿದ ಕಾರಣ ಕಳೆದ ೆಬ್ರವರಿಯಲ್ಲಿ ಸರ್ಕಾರದ ಅಭಿವೃದ್ಧಿ ಆಯುಕ್ತರಾಗಿದ್ದ ಶಾಲಿನಿ ರಜನೀಶ್ ಅವರು ಪಾಲಿಕೆ ಮುಖ್ಯಸ್ಥರು, ನಗರ ಡಿಸಿ ಹಾಗೂ ಇತರ ಅಧಿಕಾರಿಗಳೊಂದಿಗೆ ಸ್ಥಳಪರಿಶೀಲನೆ ನಡೆಸಿದ್ದರು. ಬಾಕಿ ಕೆಲಸಕ್ಕೆ ಅಡ್ಡಿಯಾಗಿರುವ ಸಮಸ್ಯೆಗಳನ್ನು ನಿವಾರಿಸಿಕೊಂಡು ಜೂನ್ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ತಾಕೀತು ಮಾಡಿದ್ದರು. ಆದರೆ, ಜಲಮಂಡಳಿ ತನಗೆ ವಹಿಸಿರುವ ಕೆಲಸವನ್ನು ಪೂರ್ಣಗೊಳಿಸಿಲ್ಲ. ಈಗ ಶಾಲಿನಿ ರಜನೀಶ್ ಮುಖ್ಯ ಕಾರ್ಯದರ್ಶಿ ಹುದ್ದೆಗೇರಿದ್ದು, ಅವರೇ ಆಸ್ಥೆವಹಿಸಿ ಯೋಜನೆಗಿರುವ ಅಡ್ಡಿಯನ್ನು ನಿವಾರಿಸಬೇಕಿದೆ.
ಕೆ-100 ಯೋಜನೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಉದ್ಘಾಟನೆಗೂ ಸಿದ್ಧಪಡಿಸುವ ಕೆಲಸ ನಡೆಯುತ್ತಿದೆ. ಆದರೆ, ಜಲಮಂಡಳಿಯು ರಾಜಕಾಲುವೆಗೆ ತ್ಯಾಜ್ಯನೀರು ಹರಿಸುವುದನ್ನು ಪೂರ್ಣವಾಗಿ ನಿಲ್ಲಿಸಿಲ್ಲ. ಹೀಗಾಗಿ ಕೊಳಚೆನೀರು ಹರಿಯುತ್ತಿರುವುದಕ್ಕೆ ಆಕ್ಷೇಪ ಕೇಳಿಬಂದಿದೆ.
- ಪ್ರಹ್ಲಾದ್, ಬಿಬಿಎಂಪಿ ಪ್ರಧಾನ ಇಂಜಿನಿಯರ್