

ತುಮಕೂರು: ನಗರದ ಬಟವಾಡಿಯ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಶಾಸಕ, ಬಿಜೆಪಿ ಅಭ್ಯರ್ಥಿ ಜಿ.ಬಿ.ಜ್ಯೋತಿಗಣೇಶ್ ಗುರುವಾರ ಬಿರುಸಿನ ಪ್ರಚಾರ ನಡೆಸಿದರು.
ವಿವಿಧ ಸಂಘ-ಸಂಸ್ಥೆಗಳ ಮುಖಂಡರ ಜತೆ ಎಪಿಎಂಸಿ ಯಾರ್ಡ್‌ನಲ್ಲಿ ಪ್ರತಿ ಅಂಗಡಿಗೂ ತೆರಳಿ ಮತಯಾಚಿಸಿದ ಅವರು ತಮ್ಮ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಮತ ನೀಡುವಂತೆ ಮನವಿ ಮಾಡಿದರು.
ರಾಜ್ಯ, ಕೇಂದ್ರದಲ್ಲಿ ಡಬಲ್ ಇಂಜಿನ್ ಸರ್ಕಾರದ ಸಾಧನೆಗಳ ಮೂಲಕ ಅಭಿವೃದ್ಧಿ ಪಥದಲ್ಲಿ ರಾಜ್ಯವನ್ನು ಕೊಂಡೊಯ್ಯಲಾಗಿದೆ. ಕರೊನಾ ಸಂಕಷ್ಟ ಕಾಲದಲ್ಲೂ ವರ್ತಕರನ್ನು ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಜನಪರ ಯೋಜನೆಗಳನ್ನು ಕೈಗೆತ್ತಿಕೊಂಡಿದೆ ಎಂದು ಜ್ಯೋತಿಗಣೇಶ್ ಹೇಳಿದರು.
ರೈತರು, ಬೀದಿ ಬದಿ ವ್ಯಾಪಾರಿಗಳು ಹಾಗೂ ವರ್ತಕರಿಗಾಗಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ನೀಡಿದೆ. ಸರ್ಕಾರದ ಸವಲತ್ತುಗಳು ಎಲ್ಲ ಸಮುದಾಯವನ್ನು ತಲುಪಿದ್ದು, ಜನರು ಹೆಚ್ಚಿನ ರೀತಿಯಲ್ಲಿ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ನಗರದ ಅಭಿವೃದ್ಧಿಗಾಗಿ ಸ್ಮಾರ್ಟ್‌ಸಿಟಿಯಿಂದ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಅವುಗಳು ಪೂರ್ಣಗೊಂಡರೆ ನಗರ ಇನ್ನಷ್ಟು ಸ್ಮಾರ್ಟ್ ಆಗಲಿದೆ ಎಂದರು.
ಮುಖ್ಯಮಂತ್ರಿಗಳ ವಿಶೇಷ ಅನುದಾನ, 15ನೇ ಹಣಕಾಸು ಯೋಜನೆ ಸೇರಿ ಕಳೆದ 5 ವರ್ಷಗಳಲ್ಲಿ ನೂರಾರು ಕೋಟಿ ಅನುದಾನವನ್ನು ತಂದು ಶಿಕ್ಷಣ, ಆರೋಗ್ಯ, ಕ್ರೀಡಾಕ್ಷೇತ್ರಗಳ ಅಭಿವೃದ್ಧಿಗೆ ವಿನಿಯೋಗಿಸಲಾಗಿದೆ. ನಮ್ಮ ಕ್ಲಿನಿಕ್ ಯೋಜನೆ ಜನರ ಮನೆ ಬಾಗಿಲಿನಲ್ಲಿಯೇ ಆರೋಗ್ಯ ಒದಗಿಸಲಿದೆ. ಹಾಗಾಗಿ, ದೇಶದ ಅಭಿವೃದ್ಧಿ ಮತ್ತು ಐಕ್ಯತೆಯ ದೃಷ್ಟಿಯಿಂದ ಮತ್ತೊಮ್ಮೆ ಬಿಜೆಪಿಯನ್ನು ಬೆಂಬಲಿಸಿ. ಎಪಿಎಂಸಿಲ್ಲೂ ಧಾನ್ಯ ವರ್ತಕರ ಬೇಡಿಕೆಯಂತೆ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕೋಲ್ಡ್ ಸ್ಟೋರೇಜ್ ಸೇರಿದಂತೆ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಮತ್ತೊಮ್ಮೆ ಆಶೀರ್ವದಿಸಿ. ನಗರದಲ್ಲಿ ಮತ್ತೊಮ್ಮೆ ಕಮಲವನ್ನು ಅರಳಿಸಲು, ಶಾಂತಿ ಸಹ ಬಾಳ್ವೆಗೆ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು.
ಸ್ಫೂರ್ತಿ ಡೆವಲಪರ್ಸ್‌ನ ಚಿದಾನಂದ್, ಜಿಲ್ಲಾ ವಾಣಿಜ್ಯ ಮಂಡಳಿಯ ಗಿರೀಶ್, ಎಂ.ಎನ್.ಲೋಕೇಶ್ ಸೇರಿ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಜ್ಯೋತಿಗಣೇಶ್‌ಗೆ ಪ್ರಚಾರದ ವೇಳೆ ಸಾಥ್ ನೀಡಿದರು.