

ಬೇಲೂರು: ಕನ್ನಡ ರಾಜ್ಯೋತ್ಸವವನ್ನು ತಾಲೂಕು ಆಡಳಿತ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು, ಆಟೋ ಚಾಲಕರ ಸಂಘಗಳ ಜತೆಗೆ ಕನ್ನಡದ ಪ್ರಥಮ ಶಿಲಾ ಶಾಸನ ದೊರೆತ ಹಲ್ಮಿಡಿಯಿಂದ ತಂದ ಕನ್ನಡ ಜ್ಯೋತಿಯನ್ನು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶಾಸಕ ಎಚ್.ಕೆ.ಸುರೇಶ್, ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಸೇರಿದಂತೆ ಗಣ್ಯರು ಸ್ವಾಗತಿಸಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸಲಾಯಿತು.
ಕನ್ನಡ ಜ್ಯೋತಿಯನ್ನು ಮಂಗಳ ವಾಧ್ಯ ಹಾಗೂ ನಾಡ ಧ್ವಜದೊಂದಿಗೆ ಪಟ್ಟಣದ ಜ್ಯೂನಿಯರ್ ಕಾಲೇಜು ಮೈದಾನಕ್ಕೆ ಮೆರವಣಿಗೆಯಲ್ಲಿ ಕರೆ ತರಲಾಯಿತು. ಮಾರುತಿ ಯುವಜನ ಸಂಘದ ಭುವನೇಶ್ವರಿ, ಜಯ ಕರ್ನಾಟಕ ಸಂಘಟನೆಯ ವೇಲಾಪುರಿ ವೈಭವದ ಸ್ತಬ್ದಚಿತ್ರಗಳು ನೋಡುಗರ ಗಮನ ಸೆಳೆದವು. ವಿದ್ಯಾರ್ಥಿಗಳು ಪಥಸಂಚಲನ, ಸಾಂಸ್ಕೃತಿಕ ನೃತ್ಯ ನಡೆಸಿಕೊಟ್ಟರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರು, ಹತ್ತನೇ ತರಗತಿ ಮತ್ತು ಪದವಿ ಪೂರ್ವ ತರಗತಿಯಲ್ಲಿ ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಚ್.ಕೆ.ಸುರೇಶ್, ಕನ್ನಡವನ್ನ ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿ ನಾಗರಿಕರ ಕರ್ತವ್ಯವಾಗಿದ್ದು, ತಂತ್ರಜ್ಞಾನ, ಶಿಕ್ಷಣ, ವ್ಯಾಪಾರ ಮತ್ತು ಆಡಳಿತದ ಎಲ್ಲ ಕ್ಷೇತ್ರಗಳಲ್ಲೂ ಕನ್ನಡ ಬಳಕೆ ವಿಸ್ತರಿಸಬೇಕಿದೆ. ಇಂದಿನ ಯುವ ಪೀಳಿಗೆ ಕನ್ನಡದ ಮೂಲಗಳನ್ನು ತಿಳಿದು, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆ ತಿಳಿದು ಬದುಕಬೇಕು. ಕನ್ನಡದಲ್ಲಿ ಕೆಲಸ ಮಾಡುವುದು ಗೌರವ, ಕನ್ನಡದಲ್ಲಿ ಬದುಕುವ ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲ ವರ್ಗದ ಜನರು ಕೈಜೋಡಿಸಿದಾಗ ಮಾತ್ರ ರಾಜ್ಯೋತ್ಸವಕ್ಕೆ ಅರ್ಥ ಬರುತ್ತದೆ ಎಂದರು.
ತಹಸೀಲ್ದಾರ್ ಶ್ರೀಧರ್, ಪುರಸಭೆ ಅಧ್ಯಕ್ಷೆ ಉಷಾ ಸತೀಶ್ ಮಾತನಾಡಿದರು.
ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸೈಯದ್ ತೌಫಿಕ್, ಮುಖ್ಯಾಧಿಕಾರಿ ಪುರಸಭೆ ಸದಸ್ಯರಾದ ತೀರ್ಥಕುಮಾರಿ, ಭರತ್, ಮೀನಾಕ್ಷಿ, ಮುಖ್ಯಾಧಿಕಾರಿ ಬಸವರಾಜ್ ಶಿಗ್ಗಾವಿ, ಕರವೇ ಅಧ್ಯಕ್ಷರಾದ ಚಂದ್ರಶೇಖರ್, ಭೋಜೇಗೌಡ, ಜಯ ಕರ್ನಾಟಕದ ಅಧ್ಯಕ್ಷ ರಾಜು, ಕಸಾಪ ಅಧ್ಯಕ್ಷ ಮಂಜೇಗೌಡ, ಬಿಇಒ ಭಾಗ್ಯಮ್ಮ, ಪತ್ರಕರ್ತರ ಸಂಘದ ಕಾರ್ಯದರ್ಶಿ ಬಿ.ಬಿ ಶಿವರಾಜು ಇತರರಿದ್ದರು.