

ಶಿವಮೊಗ್ಗ: ದೇಶದಲ್ಲಿ ಮತ್ತೆ ಪ್ರಜಾಪ್ರಭುತ್ವಕ್ಕೆ ಗೌರವ ಬಂದಿದೆ. ಸುಳ್ಳಿನ ಮುಂದೆ ನ್ಯಾಯ ಗೆದ್ದಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ರಾಹುಲ್ ಗಾಂಧಿ ಸಂಸದ ಸ್ಥಾನ ವಿಚಾರಕ್ಕೆ ನಗರದಲ್ಲಿ ಶನಿವಾರ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿ ಧೈರ್ಯವನ್ನು ನಿಜವಾಗಲೂ ಮೆಚ್ಚಬೇಕು. ಈವರೆಗೆ ಹಿಂಸೆಯನ್ನು ತಾಳಿಕೊಂಡಿದ್ದರು. ಪ್ರಜಾಪ್ರಭುತ್ವದಲ್ಲಿ ಜನರು ಆಯ್ಕೆ ಮಾಡಿದಂತಹ ಜನಪ್ರತಿನಿಧಿಗೆ ಮೋಸ ಮಾಡಿದರೆ ಈ ದೇಶದ ಪ್ರಜೆಗಳಿಗೆ ಮೋಸ ಮಾಡಿದಂತೆ. ಕಾನೂನು ಏನೇ ಶಿಕ್ಷೆ ಕೊಟ್ಟರೂ ಸ್ವೀಕರಿಸುತ್ತೇನೆ ಅಂತ ಹೇಳಿದ್ದರು. ಒಳ್ಳೆಯ ನಾಯಕನನ್ನು ಕಾನೂನು ಉಳಿಸಿ ಬೆಳೆಸಿದೆ. ಪ್ರಜಾಪ್ರಭುತ್ವ ನಮ್ಮ ದೇಶದಲ್ಲಿ ಉಳಿಯುತ್ತದೆ ಎನ್ನುವ ವಿಶ್ವಾಸವಿದೆ ಎಂದರು.
ಶಾಸಕರ ನಡುವೆ ಅಸಮಾಧಾನ ಸಹಜ. ಇನ್ನೂ ಐದು ವರ್ಷ ಅಧಿಕಾರದಲ್ಲಿ ಇರುತ್ತೇವೆ. ಮಾತುಕತೆಯಲ್ಲೇ ಮುಗಿಸುವಂತಹ ಅಸಮಾಧಾನ ಇದು. ಶಾಸಕರು ಸಿಎಂಗೆ ಪತ್ರ ಬರೆಯಬಾರದೆಂದೇನೂ ಇಲ್ಲ. ಪತ್ರ ಬರೆಯುವಂತಹ ಹಕ್ಕು ಎಲ್ಲರಿಗೂ ಇದೆ ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಆದರೆ ಪತ್ರ ಬರೆಯದೇ ಮಾತುಕತೆ ಮಾಡಬಹುದಿತ್ತು. ಪತ್ರ ಬರೆದವರೆಲ್ಲರೂ ಹಿರಿಯರು. ಅವರ ಮನಸ್ಸಿಗೆ ನೋವಾಗಿರುವುದನ್ನು ಹೇಳಿದ್ದು ತಪ್ಪೇನಿಲ್ಲ ಎಂದು ಸಮರ್ಥಿಸಿಕೊಂಡರು.