ನ್ಯಾಯಬೆಲೆ ಅಂಗಡಿಯಲ್ಲಿ ಅನ್ಯಾಯ ಆರೋಪ

010201202
Published on

ಗೋಕಾಕ: ಬಡವರಿಗೆ ಪಡಿತರ ಚೀಟಿ ಇಲ್ಲದಿದ್ದರೂ ಸಹ ಅಕ್ಕಿ ಹಾಗೂ ಗೋಧಿಯನ್ನು ಉಚಿತವಾಗಿ ನೀಡಬೇಕು ಎಂದು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಆದರೆ, ಗೋಕಾಕ ತಾಲೂಕಿನ ಕೆಲ ನ್ಯಾಯಬೆಲೆ ಅಂಗಡಿಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆದೇಶ ಗಾಳಿಗೆ ತೂರಿ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ.

ಲಾಕ್‌ಡೌನ್ ಆದೇಶದಿಂದ ಯಾರೂ ಅನ್ನವಿಲ್ಲದೆ ತೊಂದರೆ ಅನುಭವಿಸಬಾರದು ಎಂದು ಸರ್ಕಾರ ಉಚಿತವಾಗಿ ಪಡಿತರ ಧಾನ್ಯ ವಿತರಿಸುತ್ತಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಕುಟುಂಬಕ್ಕೆ 10 ಕೆ.ಜಿ. ಅಕ್ಕಿ ಹಾಗೂ 4 ಕೆ.ಜಿ. ಗೋಧಿ ನೀಡಬೇಕು ಎಂದು ಸರ್ಕಾರ ಆದೇಶಿಸಿದೆ. ಆದರೆ, ಗೋಕಾಕ ತಾಲೂಕಿನಲ್ಲಿ ಕೆಲ ನ್ಯಾಯಬೆಲೆ ಅಂಗಡಿಕಾರರು ಹಣ ಪಡೆದು ಅಕ್ಕಿ ಹಾಗೂ ಗೋಧಿ ಮಾರಾಟ ಮಾಡುತ್ತಿದ್ದಾರೆ. ಅಲ್ಲದೆ, ಕಡ್ಡಾಯವಾಗಿ ಸಾಬೂನು, ಸಕ್ಕರೆ, ಚಹಾಪುಡಿ ಖರೀದಿಸುವಂತೆಯೂ ಒತ್ತಡ ಹೇರುತ್ತಿದ್ದಾರೆ.

ಹೀಗಾಗಿ ಜನರು 100 ರೂ. ನೀಡಿ ಅಕ್ಕಿ ಮತ್ತು ಗೋಧಿ ಪಡೆಯುತ್ತಿದ್ದಾರೆ. ಕೈಯಲ್ಲಿ ಹಣ ಹಿಡಿದು ನ್ಯಾಯಬೆಲೆ ಅಂಗಡಿಗಳ ಎದುರು ಜನರು ಸಾಲುಸಾಲಾಗಿ ನಿಂತಿದ್ದಾರೆ.

ಅಂಗಡಿಕಾರರ ಸಮರ್ಥನೆ: ಗೋಕಾಕ ತಾಲೂಕಿನ ಶಿಂಧಿಕುರಬೇಟ ಗ್ರಾಮದ ನ್ಯಾಯಬೆಲೆ ಅಂಗಡಿ ಮಾಲೀಕನೋರ್ವನಿಗೆ ‘ಹಣ ಯಾಕೆ ಪಡೆಯುತ್ತಿದ್ದೀರಿ’ ಎಂದು ಕೇಳಿದರೆ ‘ಆಳುಗಳಿಗೆ ಸಂಬಳ ನೀಡಬೇಕು’ ಎಂದು ಸಮರ್ಥಿಸಿಕೊಂಡರು. ಈ ಕುರಿತು ಪ್ರತಿಕ್ರಿಯಿಸಿರುವ ಡಿಎಸ್‌ಪಿ ಡಿ.ಟಿ. ಪ್ರಭು, ಜನರಿಗೆ ಗುಟ್ಖಾ ಅವಶ್ಯಕ ವಸ್ತುವಲ್ಲ. ಕಿರಾಣಿ ಅಂಗಡಿಯವರು ಅವಶ್ಯಕ ವಸ್ತುಗಳ ಜತೆಗೆ ಗುಟ್ಖಾ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದ್ದು, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net