

ಚಿತ್ರದುರ್ಗ: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗಾಗಿ ರಚಿಸಿದ್ದ ನ್ಯಾ.ಎಚ್.ಎನ್.ನಾಗಮೋಹನ್‌ದಾಸ್ ಆಯೋಗದ ವರದಿ ಅವೈಜ್ಞಾನಿಕವಾಗಿದೆ ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ಗುರುಪೀಠದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಯೋಗ ರಚನೆ ಆದಾಗಿನಿಂದಲೂ ಆಗುತ್ತಿರುವ ಲೋಪ ದೋಷಗಳ ಕುರಿತಂತೆ ಸಿಎಂ ಸಿದ್ದರಾಮಯ್ಯ ಹಾಗೂ ಆಯೋಗಕ್ಕೆ ಖುದ್ದು ತಿಳಿಸಿದ್ದೇವೆ. ಸಾಕಷ್ಟು ಸಮಯವನ್ನು ಕೊಟ್ಟು ಗಣತಿ ಮಾಡಬೇಕು ಎಂದು ಕೋರಿದ್ದೆವು. ಆದರೂ ಆಯೋಗ ನಿಖರವಾದ ವರದಿ ಮಂಡಿಸುವಲ್ಲಿ ಎಡವಿದೆ ಎಂದರು.
ವರದಿ ಕುರಿತ ಚರ್ಚೆಗೆ ಆ.16ರಂದು ಸಂಪುಟದ ವಿಶೇಷ ಸಭೆ ಕರೆಯಲಾಗಿದೆ. ಅಂದು ವರದಿ ಅಧ್ಯಯನಕ್ಕೆ ಸಂಪುಟದ ಉಪ ಸಮಿತಿ ರಚಿಸಿ, ಮತ್ತೊಮ್ಮೆ ವರದಿ ಪರಿಶೀಲಿಸಬೇಕು. ಸರಿಯಾದ ಸಮೀಕ್ಷೆಯೊಂದಿಗೆ ಅಂಕಿ ಅಂಶಗಳನ್ನು ಪಡೆಯಬೇಕು. ಆ ಮೂಲಕ ಪರಿಶಿಷ್ಟ ಜಾತಿಯ 101 ಸಮುದಾಯಗಳಿಗೂ ನ್ಯಾಯ ಒದಗಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ ಶ್ರೀಗಳು, ಇದಕ್ಕಾಗಿ ಬುಧವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡುವುದಾಗಿ ಹೇಳಿದರು.
ಸರ್ಕಾರದ 38 ಇಲಾಖೆಗಳಲ್ಲಿ 13 ಇಲಾಖೆಗಳ ಮಾಹಿತಿ ಸಿಕ್ಕಿಲ್ಲವೆಂದು ಆಯೋಗವೇ ಹೇಳಿದೆ. ತರಾತುರಿ, ತಾರತಮ್ಯ, ಗೊಂದಲಕ್ಕೆ ಎಡೆಮಾಡಿರುವ ಈ ವರದಿ ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಪೂರಕವಾಗಿಲ್ಲ. ಸ್ವಾಭಾವಿಕ ಜನಸಂಖ್ಯೆ ಏರಿಕೆ ಮಾನದಂಡವನ್ನು ಭೋವಿ ಸಮುದಾಯದ ವಿಚಾರದಲ್ಲಿ ಅನುಸರಿಸಿಲ್ಲ. ಈ ಸಮುದಾಯದ ಸಂಖ್ಯೆ ಕಳೆದ 15 ವರ್ಷಗಳಲ್ಲಿ ಶೇ.14-16ಕ್ಕಿಂತ ಹೆಚ್ಚಾಗಿದ್ದರೂ ಶೇ.1 ಹೆಚ್ಚಾಗಿದೆ ಎಂದು ತೋರಿಸಲಾಗಿದೆ ಎಂದರು.
ಇನ್ನು ಅನಕ್ಷರತೆಯಿಂದ ಕೂಡಿರುವ, ಸ್ಮಾರ್ಟ್ ಫೋನ್ ಬಳಸದ ಅಲೆಮಾರಿ, ಅರೆ ಅಲೆಮಾರಿ ಈ ಸಮುದಾಯದ ಸಮೀಕ್ಷೆ ಸರಿಯಾಗಿಲ್ಲ. ಒಂದೆಡೆ ಆಯೋಗದ 26 ಕೋಷ್ಠಕಗಳ ಪೈಕಿ 19ರಲ್ಲಿ ಭೋವಿ ಸಮುದಾಯದ ಅತ್ಯಂತ ಹಿಂದುಳಿದಿದೆ ಎಂದು ಗುರುತಿಸಿದ್ದರೆ, ಮತ್ತೊಂದೆಡೆ ಅತ್ಯಂತ ಹಿಂದುಳಿದ ಹಾಗೂ ಕಡಿಮೆ ಹಿಂದುಳಿದ ಸಮುದಾಯದ ಗುಂಪುಗಳಲ್ಲಿ ಭೋವಿ ಸಮುದಾಯವನ್ನು ಗುರುತಿಸಿ ಅನ್ಯಾಯ ಮಾಡಲಾಗಿದೆ. ಆದ್ದರಿಂದ ಯಾವುದೇ ಗುಂಪಿನ ಜತೆಗೆ ಸೇರಿಸದೆ ಪ್ರತ್ಯೇಕ ಗುಂಪು ಮಾಡಿ ಭೋವಿ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಶ್ರೀಗಳು ಒತ್ತಾಯಿಸಿದರು.