

ಹಿರೇಕೆರೂರ: ತಾಲೂಕಿನ ಆಲದಕಟ್ಟಿ ಗ್ರಾಮದ ವಿದ್ಯಾರ್ಥಿನಿ ಅರ್ಚನಾ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲೂಕು ಎಬಿವಿಪಿ ಸಂಘಟನೆ ವತಿಯಿಂದ ಶುಕ್ರವಾರ ಪಟ್ಟಣದ ಸರ್ವಜ್ಞ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಎಬಿವಿಪಿ ಸಂಚಾಲಕ ಅಭಿಷೇಕ ದೊಡ್ಮನಿ ಮಾತನಾಡಿ, ಆಲದಕಟ್ಟಿಯ ಬಡ ವಿದ್ಯಾರ್ಥಿನಿ ಅರ್ಚನಾ ಗೌಡಣ್ಣನವರ ದೂದಿಹಳ್ಳಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಓದುತ್ತಿದ್ದಳು. ಶಾಲೆಯಲ್ಲಿ ಓದು, ಆಟೋಟಗಳಲ್ಲಿ ಮುಂದೆ ಇದ್ದಳು. ಇದನ್ನು ಸಹಿಸದ ಅದೇ ಶಾಲೆಯ ಹಿಂದಿ ಶಿಕ್ಷಕ ಆರಿಫವುಲ್ಲಾ ಅವರ ಪುತ್ರಿ ಮತ್ತು ಅವರ ಪತ್ನಿ ಸೇರಿ ಅರ್ಚನಾಗೆ ನಿತ್ಯ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದರು. ಇದನ್ನು ತಾಳಲಾರದೆ ವಿದ್ಯಾರ್ಥಿನಿ ಯಾರಿಗೂ ವಿಷಯವನ್ನು ಹೇಳದೇ ಮನೆಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಿದರು.
ಹಿಂದಿ ಶಿಕ್ಷಕನ ಪತ್ನಿ, ಪುತ್ರಿ ವಿರುದ್ಧ ಡೆತ್ ನೋಟ್ ಬರೆದಿಟ್ಟಿದ್ದಾಳೆ. ಈ ವಿಷಯವನ್ನು ಪೊಲೀಸರಿಗೆ ತಿಳಿಸದೆ ಪಾಲಕರು, ಶಾಲೆ ಸಿಬ್ಬಂದಿ ಅಂತ್ಯಕ್ರಿಯೆ ನಡೆಸಿದ್ದಾರೆ. ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ಮಾಡಿ ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು. ಅರ್ಚನಾಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಬಜರಂಗದಳ ಸಂಚಾಲಕ ಅನಿಲ ಹಲವಾಗಿಲು ಮಾತನಾಡಿ, ಅರ್ಚನಾ ಕುಟುಂಬಕ್ಕೆ ನ್ಯಾಯ ಸಿಗಬೇಕು. ಸೂಕ್ತ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ವಸತಿ ನಿಲಯದಲ್ಲಿರುವ ಮಕ್ಕಳಿಗೆ ಸೂಕ್ತ ರಕ್ಷಣೆ, ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.
ವಿಕಾಸ ರಟ್ಟಿಹಳ್ಳಿ, ಪ್ರವೀಣ ಕಡೂರ, ಮನೋಜ ಬೂದಿಹಾಳ, ಸಾಗರ ಕಲಾಲ, ಕಿರಣ ಶಿಗಿಹಳ್ಳಿ, ಸಂತೋಷ ಬೆಳಗುತ್ತಿ, ಬಸವರಾಜ ಓಲೇಕಾರ, ವಿನಾಯಕ ಕರ್ನಲ್, ಹನುಮಂತಪ್ಪ ಭೋವಿ, ವಿಠ್ಠಲ ನಾಮದೇವ, ಪ್ರಕಾಶ ನಿಟ್ಟೂರ, ಅಶೋಕ ಬಡಿಗೇರ, ಈರಪ್ಪ ಬಣಕಾರ, ಅಜೀಜ್ ಮನ್ನಳ್ಳಿ, ವಿದ್ಯಾರ್ಥಿಗಳು ಇದ್ದರು.
ಮನವಿ: ಕರವೇ ತಾಲೂಕು ಪ್ರವೀಣ ಶೆಟ್ಟಿ ಬಣದ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. ಕರವೇ ತಾಲೂಕಾಧ್ಯಕ್ಷ ಭರಮಪ್ಪ ಡಮ್ಮಳ್ಳಿ ಮಾತನಾಡಿ, ಘಟನೆ ನಡೆದಿರುವುದು ದುರದೃಷ್ಟಕರ. ವಿದ್ಯಾರ್ಥಿನಿ ನೇಣು ಹಾಕಿಕೊಂಡಿದ್ದರ ಬಗ್ಗೆ ಪೋಲಿಸ್ ಇಲಾಖೆಗೆ ಏಕೆ ಮಾಹಿತಿ ನೀಡಿಲ್ಲ ಎಂಬ ಕುರಿತು ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.