ಕೆಇಬಿ ನೌಕರನ ಸಾವಿಗೆ ನ್ಯಾಯ ಒದಗಿಸಿ

26 smg Girish
Published on

ಶಿವಮೊಗ್ಗ: ಮೂರು ದಿನಗಳ ಹಿಂದೆ ವಿದ್ಯುತ್ ಅವಘಡದ ಪರಿಣಾಮ ಮಾಚೇನಹಳ್ಳಿಯಲ್ಲಿ ಮೃತಪಟ್ಟ ಕೆಇಬಿ ನೌಕರ ಕಿರಣ್ ಸಾವಿಗೆ ಸೂಕ್ತ ನ್ಯಾಯ ಸಿಗಬೇಕು. ಕರ್ತವ್ಯಲೋಪ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ರಾಜ್ಯ ಬಂಜಾರ ಯುವಕರ ಮತ್ತು ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಿ.ಆರ್.ಗಿರೀಶ್ ಒತ್ತಾಯಿಸಿದ್ದಾರೆ.

ಸೆ.24ರ ಬೆಳಗ್ಗೆ 11ರ ಸುಮಾರಿಗೆ ಮಾಚೇನಹಳ್ಳಿಯ ಕೈಗಾರಿಕಾ ಪ್ರದೇಶದ ವಿದ್ಯುತ್ ಮಾರ್ಗದ ದುರಸ್ತಿ ಕಾರ್ಯದಲ್ಲಿ ತೊಡಗಿದ್ದ ಕಿರಣ್ ವಿದ್ಯುತ್ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿದ್ಯುತ್ ಸ್ಥಗಿತಗೊಳಿಸಿ ದುರಸ್ತಿ ಮಾಡುತ್ತಿದ್ದರೂ ವಿದ್ಯುತ್ ಪ್ರವಹಿಸಿ ಅವಘಡ ಸಂಭವಿಸಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಶ್ಚರ್ಯ ವ್ಯಕ್ತಪಡಿಸಿದರು.
ಆ ಮಾರ್ಗದಲ್ಲಿ ವಿದ್ಯುತ್ ಪ್ರವಹಿಸಿದ್ದು ಹೇಗೆ ಎಂಬುದು ನಿಗೂಢವಾಗಿದೆ. ಇದನ್ನು ಪ್ರಶ್ನಿಸಿದರೆ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಿದ್ದಾರೆ. ಇತ್ತೀಚೆಗೆ ವಿನೋಬನಗರದಲ್ಲಿ ಇಂಥದ್ದೇ ಘಟನೆ ನಡೆದು ಹಾಲಸ್ವಾಮಿ ಎಂಬುವರು ಮೃತಪಟ್ಟಿದ್ದರು. ಆಗ ಮೆಸ್ಕಾಂ ಅಧೀಕ್ಷಕ ಅಭಿಯಂತ ಶಶಿಧರ್ ಆಸಕ್ತಿವಹಿಸಿ ಶೀಘ್ರ ಸ್ಪಂದಿಸಿದ್ದರು. ಆದರೆ ತಾಂಡಾದ ಯುವಕ ಕಿರಣ್ ಸಾವಿನ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಇಂತಹ ಅವಘಡಗಳಿಗೆ ಅಧಿಕಾರಿಗಳ ನಿರ್ಲಕ್ಷೃವೇ ಕಾರಣ. ಘಟನೆಯಲ್ಲಿ ತಪ್ಪು ಯಾರದ್ದು ಎಂಬುದನ್ನು ತನಿಖೆ ನಡೆಸಬೇಕು. ಕರ್ತವ್ಯಲೋಪ ಎಸಗಿರುವ ಮೆಸ್ಕಾಂ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಸಂಘಟನೆಯ ಭದ್ರಾವತಿ ತಾಲೂಕು ಅಧ್ಯಕ್ಷ ಕೃಷ್ಣಾ ನಾಯ್ಕ, ಬಂಜಾರ ಸಮಾಜದ ಮುಖಂಡರಾದ ಜಯಾ ನಾಯ್ಕ, ಜಗದೀಶ್ ರಾನಡೆ, ಅಭಿರಾಮ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net