ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನ್ಯಾಯ ಒದಗಿಸಿ

Published on

ಬಳ್ಳಾರಿ : ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2017ರ ಅವೈಜ್ಞಾನಿಕ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸೂಕ್ತ ತಿದ್ದುಪಡಿಗೊಳಿಸಿ ನ್ಯಾಯ ಒದಗಿಸಬೇಕು ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾಧ್ಯಕ್ಷ ಸಿ.ನಿಂಗಪ್ಪ ಒತ್ತಾಯಿಸಿದರು.

ನಗರದ ಪತ್ರಿಕಾಭವನದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 2017 ರವರೆಗೆ ನೇಮಕವಾದ ಶಿಕ್ಷಕರನ್ನು ಒಂದರಿಂದ 7ನೇ ತರಗತಿ ಗೆ ನೇಮಕವಾದ ಶಿಕ್ಷಕರೆಂದು ಪರಿಗಣಿಸಬೇಕು. 2೦17ರ ನಂತರ ನೇಮಕವಾದ ಶಿಕ್ಷಕರಿಗೆ ಅನ್ವಯಿಸಬೇಕು. ಯಾವುದೇ ಕಾರಣಕ್ಕೂ 2019ಕ್ಕಿಂತ ಮೊದಲು ನೇಮಕಾತಿಯಾದವರಿಗೆ ಪೂರ್ವನ್ವಯಗೊಳಿಸಬಾರದು ಪದವೀಧರರು ಶಿಕ್ಷಕರೆಂದು ಹಾಗೂ ಪದವಿ ಪೂರೈಸಿದ ಎಲ್ಲರಿಗೂ ಸೇವಾ ಜೇಷ್ಠತೆಯೊಂದಿಗೆ ಪದನಾಮೀಕರಿಸಬೇಕು. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಈ ಪೂರ್ವದಂತೆ ಮುಖ್ಯಗುರುಗಳ ಹಾಗೂ ಹಿರಿಯ ಮುಖ್ಯಗುರುಗಳ ಹುದ್ದೆಗೆ ಸೇವಾ ಜೇಷ್ಠತೆಯ ಆಧಾರದ ಮೇಲೆ ಬಡ್ತಿ ನೀಡಬೇಕು. ಅನ್ಯ ಕಾರ್ಯ ಹಾಗೂ ಆನ್‌ಲೈನ್ ಕೆಲಸಗಳಿಂದ ಶಿಕ್ಷಕರ ಮೇಲೆ ಆಗುತ್ತಿರುವ ಒತ್ತಡ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.

ಆ.27ರೊಳಗಾಗಿ ಬೇಡಿಕೆಗಳು ಈಡೇರದಿದ್ದಲ್ಲಿ ಸೆ.3ರಂದು ರಾಜ್ಯದ ಎಲ್ಲ ಪ್ರಾಥಮಿಕ ಶಾಲಾ ಶಿಕ್ಷಕರು ‘ಫ್ರೀಡಂಪಾರ್ಕ್ ಚಲೋ’ ಹಮ್ಮಿಕೊಳ್ಳಲಾಗುವುದು. ಅದೇ ದಿನ ಆರ ರಿಂದ ಎಂಟನೇ ತರಗತಿಗಳ ಪಾಠ ಬೋಧನೆ ಬಹಿಷ್ಕಾರ ಮಾಡಲಾಗುವುದು. ಯಾವುದೇ ನಿರ್ಣಯ ಬರದಿದ್ದಲ್ಲಿ ಸೆ.4 ರಿಂದ 5ರವರೆಗೆ ಅಹೋರಾತ್ರಿ ಧರಣಿ ನಡೆಸಲಾಗುತ್ತದೆ. ಹಾಗೆಯೇ ಹೋರಾಟದ ಭಾಗವಾಗಿ ‘ಫ್ರೀಡಂಪಾರ್ಕ್‌ನಲ್ಲಿಯೇ ಎಲ್ಲ ಪದಾಧಿಕಾರಿಗಳ, ಪ್ರತಿನಿಧಿಗಳ ನೇತೃತ್ವದಲ್ಲಿ ಶಿಕ್ಷಕರ ದಿನಾಚರಣೆ ಆಚರಿಸುವುದು. ಬೇಡಿಕೆ ಈಡೇರವವರೆಗೆ ಹೋರಾಟ ಮುಂದುವರೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂಘದ ಪದಾಧಿಕಾರಿಗಳಾದ ಕೆ.ವಿರೂಪಾಕ್ಷ, ಎನ್.ಜಯಪ್ರಕಾಶ, ಬಸನಗೌಡ, ವೇದಾವತಿ, ಜಿ.ಶಿವಶಂಕರ್, ಎನ್. ದೇವಣ್ಣ, ಬಸವರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net