

ಶಿಗ್ಗಾಂವಿ: ಪ್ರತಿಯೊಬ್ಬ ವ್ಯಕ್ತಿಯೂ ನ್ಯಾಯಯುತವಾಗಿ ಸಮಾಜದಲ್ಲಿ ಬದುಕಲು ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು ಒದಗಿಸಲಾಗಿದೆ. ಇಂತಹ ಹಕ್ಕುಗಳನ್ನು ಪ್ರತಿಯೊಬ್ಬರೂ ತಿಳಿದುಕೊಂಡು ಕಾನೂನಿನ ಅಡಿಯಲ್ಲಿ ನ್ಯಾಯೋಚಿತವಾಗಿ ಬದುಕಬೇಕೆಂದು ಜೆಎಂಎಫ್ಸಿ ನ್ಯಾಯಾಲಯದ ದಿವಾಣಿ ನ್ಯಾಯಾಧೀಶ ಸುರೇಶ ವಗ್ಗನವರ ಹೇಳಿದರು.
ಪಟ್ಟಣದ ಶ್ರೀಮತಿ ಗೌರಮ್ಮ ಅಂಕಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಅಖಿಲ ಭಾರತ ಮಾನವ ಹಕ್ಕುಗಳ ಪರಿಷತ್ತು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಮಾನವ ಹಕ್ಕುಗಳ ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾನವ ಸಹವಾಸ ಜೀವಿ. ಸಮಾಜ ಮತ್ತು ಸಮುದಾಯವಿಲ್ಲದೆ ಆತ ಬದುಕಲು ಸಾಧ್ಯವಿಲ್ಲ. ಸಮಾಜದಲ್ಲಿ ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿ ಅಥವಾ ಜೀವಿ ಎಂಬ ತಾರತಮ್ಯವಿಲ್ಲದೆ ಪರಸ್ಪರ ಗೌರವಿಸಬೇಕು. ಸಾಂವಿಧಾನಿಕ ಮತ್ತು ಮೂಲಭೂತ ಕರ್ತವ್ಯಗಳಾದ ಹಕ್ಕುಗಳ ರಕ್ಷಣೆಯನ್ನೂ ಅನುಸರಿಸಬೇಕು ಎಂದು ಹೇಳಿದರು.
ನ್ಯಾಯವಾದಿ ಎಫ್. ಬಿ. ಗಂಜಿಗಟ್ಟಿ ವಿಶೇಷ ಉಪನ್ಯಾಸ ನೀಡಿ, ಶೋಷಿತ ವರ್ಗದಿಂದ ಹಿಡಿದು ಎಲ್ಲರಿಗೂ ಕಾನೂನು ನ್ಯಾಯೋಚಿತವಾಗಿದೆ. ಕಾನೂನಿನ ಅರಿವಿಲ್ಲದೆ ಅನೇಕರು ನಿರಪರಾಧಿಯಾಗಿದ್ದರೂ ಅಪರಾಧಿಯ ಸ್ಥಾನದಲ್ಲಿ ನಿಲ್ಲುವಂಥ ಪರಿಸ್ಥಿತಿ ಬರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಸಾಮಾನ್ಯ ಕಾನೂನುಗಳನ್ನಾದರೂ ತಿಳಿದುಕೊಳ್ಳಬೇಕೆಂದು ತಿಳಿಸಿದರು.
ಅಖಿಲ ಭಾರತ ಮಾನವ ಹಕ್ಕುಗಳ ಪರಿಷತ್ ಅಧ್ಯಕ್ಷೆ ಎಚ್. ಆರ್. ಅಹಮದ್ ಅಲಿಖಾನ್ ಮಾತನಾಡಿ, ಅನೇಕ ಖಾಸಗಿ ಸಂಸ್ಥೆಗಳು ಮಾನವನ ಹಕ್ಕುಗಳನ್ನು ಬದಿಗಿಟ್ಟು ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಅನಕ್ಷರಸ್ಥರು, ಮಹಿಳೆಯರು, ಮಕ್ಕಳು, ಶೋಷಿತ ವರ್ಗ, ಕೂಲಿ ಕಾರ್ವಿುಕರನ್ನು ಶೋಷಿಸುತ್ತಿವೆ. ಇದರ ವಿರುದ್ಧವಾಗಿ ಹೋರಾಟ ಮಾಡಿ ಪ್ರತಿಯೊಬ್ಬ ವ್ಯಕ್ತಿಗೂ ನ್ಯಾಯ ಕೊಡಿಸುವುದು ನಮ್ಮ ಪರಿಷತ್ತಿನ ಉದ್ದೇಶವಾಗಿದೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಚೆನ್ನಬಸಪ್ಪ ಎಸ್. ಕುಮ್ಮೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರೊ. ಡಿ. ಎಸ್. ಭಟ್ ಸ್ವಾಗತಿಸಿದರು. ಪ್ರೊ. ಪ್ರವೀಣ ಸಿದ್ದಣ್ಣನವರ ವಂದಿಸಿದರು. ಪ್ರೊ. ಆನಂದ ಇಂದೂರ ಕಾರ್ಯಕ್ರಮ ನಿರೂಪಿಸಿದರು.