ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಜಾರಿಗೆ ಅಹೋರಾತ್ರಿ ಧರಣಿ

21Tmk_Ahoratri_Protest
Published on

ತುಮಕೂರು: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ವರದಿ ಜಾರಿ ಹಕ್ಕೊತ್ತಾಯ ಸಮಿತಿ ಸೋಮವಾರದಿಂದ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದೆ. ಒಳಮೀಸಲಾತಿ ವರ್ಗೀಕರಣಕ್ಕಾಗಿ ವರದಿಯ ಶಿಫಾರಸುಗಳನ್ನು ಕೇಂದ್ರ, ರಾಜ್ಯ ಸರ್ಕಾರಗಳು ಅನುಷ್ಠಾನ ಗೊಳಿಸುವಂತೆ ಪ್ರತಿಭಟನಾನಿರತರು ಆಗ್ರಹಿಸಿದರು.

ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಭಾಗವಹಿಸಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ಸದಾಶಿವ ವರದಿ ಶಿಫಾರಸುಗಳ ಜಾರಿಗಾಗಿ ಬಹಳ ದಿನದಿಂದ ಹೋರಾಟ ನಡೆಯುತ್ತಲೇ ಇದೆ. ನ್ಯಾಯುಯತ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ಆ ಸಮುದಾಯಗಳಿಗೆ ಆಗುವ ಅನ್ಯಾಯ ಸರಿಪಡಿಸಲು ಸಾಧ್ಯವಿಲ್ಲ. ಇನ್ನಾದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ನ್ಯಾಯಯುತ ಹೋರಾಟಕ್ಕೆ ಎಲ್ಲರೂ ಕೈ ಜೋಡಿಸುವ ಅವಶ್ಯಕತೆಯಿದೆ, ಬೇಡಿಕೆ ದಲಿತ ಸಮುದಾಯದ ಒಂದು ವರ್ಗಕ್ಕೆ ಸೀಮಿತವಲ್ಲ, ಸಮುದಾಯದಲ್ಲಿರುವ ಉಪ ಪಂಗಡಗಳು, ಶೋಷಣೆಗೆ ಒಳಗಾಗಿರುವ ಎಲ್ಲರಿಗೂ ಈ ವರದಿ ಅನುಷ್ಠಾನದ ಅಗತ್ಯವಿದೆ. ಸಂವಿಧಾನಬದ್ಧವಾದ ಹಕ್ಕುಗಳನ್ನು ಗಳಿಸಲು ಹೋರಾಟ ತೀವ್ರಗೊಳ್ಳಬೇಕಿದೆ ಎಂದರು.

ಒಳಮೀಸಲಾತಿ ವರ್ಗೀಕರಣ ಜಾರಿಯಾಗದಿದ್ದರೆ ಪ್ರಾಣ ತ್ಯಾಗಕ್ಕೂ ಸಿದ್ಧರಾಗಿದ್ದೇವೆ. ಮಾದಿಗ ಜನಾಂಗವನ್ನು ಕೇವಲ ಮತಬ್ಯಾಂಕ್ ಮಾಡಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳು ಸೌಲಭ್ಯ ಒದಗಿಸಿಕೊಡುವಲ್ಲಿ ನಿರ್ಲಕ್ಷ್ಯ ತೋರಿವೆ. ನಮಗಾಗಿರುವ ಅನ್ಯಾಯ ಖಂಡಿಸಿ ಹೋರಾಟ ಮಾಡುತ್ತಿದ್ದೇವೆ ಎಂದು ದಲಿತ ಮುಖಂಡ ವಾಲೆಚಂದ್ರಯ್ಯ ಹೇಳಿದರು.

ಧರಣಿಯಲ್ಲಿ ಜಿಲ್ಲಾ ರೈತಸಂಘದ ಅಧ್ಯಕ್ಷ ಯೋಗೀಶ್ ಮೆಳೆಕಲ್ಲಹಳ್ಳಿ ಮುಖಂಡರಾದ ಜೆಸಿಬಿ ವೆಂಕಟೇಶ್, ರಾಮಯ್ಯ, ಮೋಹನ್ ಪರಮೇಶ್, ಮುನಿರಾಜು, ರಾಮಮೂರ್ತಿ, ಕೆಂಪರಾಜು ಶಿವರಾಜು, ಬಂಡೆ ಕುಮಾರ್ ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net