ಪತ್ರಿಕಾ ವಿತರಕರು ಯೋಧರಿದ್ದಂತೆ, ರಾಜಾಪುರ ಸಂಸ್ಥಾನ ಮಠದ ಶ್ರೀ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಮತ

08ank news and photos 01
Published on

ಆನೇಕಲ್: ಪತ್ರಿಕಾ ವಿತರಕರು ಯೋಧರಿದ್ದಂತೆ. ಇವರೂ ಕೂಡ ದಿನಬೆಳಗಾದರೆ ನಮ್ಮ ಸೇವೆ ಮಾಡುತ್ತಾರೆ. ಇವರ ಸಹಕಾರಕ್ಕೆ ನಿಲ್ಲಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿ ಎಂದು ರಾಜಾಪುರ ಸಂಸ್ಥಾನ ಮಠದ ಶ್ರೀ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಪಟ್ಟಣದಲ್ಲಿ ಚಾಕಲೇಟ್ ಪ್ರಸಾದ್ ಹಾಗೂ ವಿಜಯವಾಣಿ ವಿತರಕ ನವೀನ್‌ಚಂದ್ರ ಶೆಟ್ಟಿ ನೇತೃತ್ವದಲ್ಲಿ ಬುಧವಾರ ದಾನಿಗಳಿಂದ ಸಹಕಾರ ಪಡೆದು ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಪತ್ರಿಕಾ ವಿತರಕರಿಗೆ ದಿನಸಿ ಪದಾರ್ಥ ವಿತರಿಸಿ ಮಾತನಾಡಿದರು.

ಹಗಲು-ರಾತ್ರಿಯೆನ್ನದೆ ವೈದ್ಯರು, ನರ್ಸ್‌ಗಳು, ಪೊಲೀಸರು ಸೇವೆ ಮಾಡುತ್ತಿದ್ದಾರೆ. ದೇಶದಲ್ಲಿ ಕಾರ್ಮಿಕರ ಸಂಖ್ಯೆ ದೊಡ್ಡ ಮಟ್ಟದಲ್ಲಿದೆ. ಇಂತಹ ಸಮಯದಲ್ಲಿ ಅವರ ಸೇವೆಗೆ ನಾವೆಲ್ಲರೂ ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಪ್ರತಿದಿನ ಪತ್ರಿಕೆ ಹಂಚುವ ಯುವಕರ ಸಹಾಯಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.

ಇಸ್ಲಾಂ ಧರ್ಮ ಗುರುಗಳಾದ ಇಮಾಮ್ ಸಾಬ್ ಕಯ್ಯಮ್ ಮಾತನಾಡಿ, ಕರೊನಾ ತಡೆಗಟ್ಟಲು ನಾವೆಲ್ಲರೂ ಒಗ್ಗಟ್ಟಿನ ಮೂಲಕ ಅಂತರ ಕಾಯ್ದುಕೊಂಡು, ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯ ಹರಿಸಿಂಗ್ ಮಾತನಾಡಿ, ಪತ್ರಿಕಾ ವಿತರಕರು ನಿರಂತರ ಶ್ರಮ ಪಡುವವರು. ಯಾರಾದರೂ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದರೆ, ಮುಂದಿನ ದಿನಗಳಲ್ಲಿ ಅಂತಹವರನ್ನು ಗುರುತಿಸಿ ಸಹಕಾರ ನೀಡಲಾಗುವುದು ಎಂದರು.

ಚಾಕಲೇಟ್ ಪ್ರಸಾದ್ ಮಾತನಾಡಿ, ವಿತರಕರು ಪ್ರತಿದಿನ ನಮ್ಮ ಸೇವೆ ಮಾಡುತ್ತಿದ್ದಾರೆ. ಅವರ ಸಹಕಾರಕ್ಕೆ ನಿಲ್ಲುವ ಸಲುವಾಗಿ ದಿನಬಳಕೆ ವಸ್ತುಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು. ಪತ್ರಿಕೆ ಹಾಕುವ ಹುಡುಗರಿಗೆ ಹೂವಿನ ಮಳೆಗರೆಯುವ ಮೂಲಕ ಅವರಲ್ಲಿ ಧೈರ್ಯ ತುಂಬಲಾಯಿತು.

ಆನೇಕಲ್ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಮುರಳೀಧರ್, ಹಿರಿಯ ಹೋರಾಟಗಾರ, ಸಾಹಿತಿ ಆದೂರು ಪ್ರಕಾಶ್, ಪುರಸಭೆ ಸದಸ್ಯೆ ಸುಧಾ ನಿರಂಜನ್, ಕ್ರೈಸ್ತ ಮುಖಂಡರಾದ ಅಂಥೋನಿ, ರಾಜು ಬಾಬಣ್ಣ, ಕ್ರೈಸ್ತ ಧರ್ಮದ ಮುಖಂಡ ಜೆ.ಎಂ.ಜೆ.ಕುಮಾರ್, ನಿವೃತ್ತ ಶಿಕ್ಷಕ ದಶರಥ ರಾವ್, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಮೂರ್ತಿ, ಮುಖಂಡರಾದ ಮುನೀರ್ ಪಾಷಾ, ನಟರಾಜು, ಅರ್ಜುನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net