ನ್ಯಾಯಬೆಲೆ ಅಂಗಡಿಕಾರರಿಗೆ ರಕ್ಷಣೆ ನೀಡಿ

28manju6-Web
ನ್ಯಾಯಬೆಲೆ ಅಂಗಡಿಕಾರರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕ ಪುರುಷೋತ್ತಮಗೆ ಜಿಲ್ಲಾ ಸರ್ಕಾರಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ರಾಜಶೇಖರ ತಳವಾರ, ಭೈರೇಗೌಡ ಪಾಟೀಲ, ಮಾರುತಿರಾವ ಅಂಬೋಳಕರ ಇತರರಿದ್ದರು.
Published on

ಬೆಳಗಾವಿ: ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ನ್ಯಾಯಬೆಲೆ ಅಂಗಡಿಕಾರರಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿ ಜಿಲ್ಲಾ ಸರ್ಕಾರಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಪದಾಧಿಕಾರಿಗಳು ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ಪುರುಷೋತ್ತಮ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ಕೊರನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ಮಾಡಿದ್ದರೂ ಸರ್ಕಾರದ ಸೂಚನೆ ಮೇರೆಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳ ನ್ಯಾಯಬೆಲೆ ಅಂಗಡಿಕಾರರು ಪಡಿತರ ವಿತರಣೆ ಮಾಡುತ್ತಿದ್ದಾರೆ. ಆದರೆ, ಸ್ಥಳೀಯ ಮಟ್ಟದ ಪೊಲೀಸ್ ಸಿಬ್ಬಂದಿ ಅಂಗಡಿಕಾರರ ಮೇಲೆ ಏಕಾಏಕಿ ಲಾಟಿ ಬೀಸುತ್ತಿದ್ದಾರೆ. ಇದರಿಂದ ಗ್ರಾಹಕರಿಗೆ ಪಡಿತರ ವಿತರಿಸಲು ಸಮಸ್ಯೆ ಆಗುತ್ತಿದ್ದು, ಸೂಕ್ತ ರಕ್ಷಣೆ ನೀಡುವಂತೆ ಕೋರಿದರು.

ನಗರದಲ್ಲಿ ಮಾ. 26ರಂದು ಗಜಾನನ ಜಾಧವ್ ಹಾಗೂ ಪಂಕಜ ಪಾಟೀಲ್ ಎಂಬವರು (ನ್ಯಾಯಬೆಲೆ ಅಂಗಡಿ ಮಾಲೀಕರು) ತಮ್ಮ ಅಂಗಡಿ ತೆರೆದು ಪಡಿತರ ವಿತರಣೆ ಮಾಡುತ್ತಿದ್ದರು. ಕೆಲ ಹೊತ್ತಿನ ಬಳಿಕ ಅಂಗಡಿಗೆ ನುಗ್ಗಿದ ಪೊಲೀಸರು ದಾಳಿ ನಡೆಸಿ ಹಲ್ಲೆ ನಡೆಸಿದ್ದಾರೆ. ಇದರಿಂದ ಎಲ್ಲ ಕಡೆ ನ್ಯಾಯಬೆಲೆ ಅಂಗಡಿಕಾರರು ಪಡಿತರ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಜಿಲ್ಲಾಡಳಿತ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಗ್ರಾಹಕರಿಗೆ ಉಚಿತವಾಗಿ ಪಡಿತರ ಧಾನ್ಯ ವಿತರಣೆ ಮಾಡುತ್ತಿರುವ ಅಂಗಡಿಕಾರರಿಗೆ ಮತ್ತು ಅಂಗಡಿಗಳಿಗೆ ಸೂಕ್ತ ಭದ್ರತೆ ನೀಡಬೇಕು. ಪ್ರತಿ ನ್ಯಾಯಬೆಲೆ ಅಂಗಡಿ ಮುಂದೆ ಒಬ್ಬ ಪೊಲೀಸ್ ಪೇದೆ ನಿಯೋಜಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ರಾಜಶೇಖರ ತಳವಾರ, ಜಿಲ್ಲಾ ಅಧ್ಯಕ್ಷ ಭೈರೇಗೌಡ ಪಾಟೀಲ, ತಾಲೂಕು ಅಧ್ಯಕ್ಷ ಮಾರುತಿರಾವ ಅಂಬೋಳಕರ್, ಮಹಾನಗರದ ಅಧ್ಯಕ್ಷ ಲಕ್ಷ್ಮಣ ಪಾಟೀಲ, ದಿನೇಶ ಚಂದ್ರಶೇಖರ ಬಾಗಡೆ, ಸರೋಜಾ ದೊಡಮನಿ ಸೇರಿ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net