

ಉಡುಪಿ: ಕೆಲ ದಿನದಿಂದ ಸಾಯಂಕಾಲ ಪಶ್ಚಿಮ ಆಕಾಶದಲ್ಲಿ ಗುರು ಮತ್ತು ಶುಕ್ರರ ಜೋಡಿ ಬಲು ಸುಂದರವಾಗಿ ಕಾಣುತ್ತಿದೆ. ಮಾರ್ಚ್ 1 ರಂದು ಗುರು ಗ್ರಹ ಮತ್ತು ಶುಕ್ರ ಗ್ರಹದ ಅರ್ಧ ಡಿಗ್ರಿ ಸಮೀಪ ಕಾಣಿಸಲಿದ್ದು, ಬರೇ ಕಣ್ಣಿಗೆ ಕಾಣುವ ಅತಿ ಸುಂದರ ಗ್ರಹಗಳ ಜೋಡಾಟ ಆಕಾಶದಲ್ಲಿ ಇದೊಂದು ಅಪರೂಪದ ವಿದ್ಯಾಮಾನವಾಗಲಿದೆ.
ಗುರು ಗ್ರಹ ಹಾಗೂ ಶುಕ್ರಗಳು ಬರೇ ಕಣ್ಣಿಗೂ ಸುಂದರ. ಇವು ಕೆಲ ದಿನ ಪಶ್ಚಿಮ ಆಕಾಶದಲ್ಲಿ ಸಂಜೆಯಾಗುತ್ತಿದ್ದಂತೆ ಸರ್ಯಾಸ್ತಕ್ಕೆ ಹಿಡಿದ ಅವಳಿ ದೀವಟಿಕೆಯೋ ಎನ್ನುವಂತೆ ಅಕ್ಕಪಕ್ಕದಲ್ಲಿ ಹೊಳೆಯುತ್ತಿವೆ. ಶುಕ್ರ ಭೂಮಿಯಿಂದ ಈಗ ಸುಮಾರು 20.5 ಕೋಟಿ ಕಿಮೀ ದೂರದಲ್ಲಿದ್ದರೆ , ಗುರುಗ್ರಹ ಭೂಮಿಯಿಂದ 86 ಕೋಟಿ ಕಿಮೀ ದೂರದಲ್ಲಿದೆ. ಗುರುಗ್ರಹದ ಗಾತ್ರ ಶುಕ್ರನಿಗಿಂತ ಸುಮಾರು 1400 ದೊಡ್ಡದು. ಆದರೂ ಶುಕ್ರ ಫಳಫಳ ಹೊಳೆಯುತ್ತಿದೆ. ಶುಕ್ರ ಹೊಳೆಯಲು ಆ ಗ್ರಹದ ವಾತಾವರಣವೇ ಕಾರಣ. ಸ್ವಯಂ ಪ್ರಭೆ ಇಲ್ಲದ ಈ ಗ್ರಹದ ವಾತಾವರಣದಲ್ಲಿರುವ ಕಾರ್ಬನ್ ಅಕ್ಸೈಡು ಹಾಗೂ ಸಲ್ಫರ್ ಡೈಆಕ್ಸೈಡ್ನ ತೆಳು ಕವಚ ಸುಮಾರು 80 ಅಂಶ ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತದೆ. ಶುಕ್ರ ಆಗಸ್ಟ್‌ವರೆಗೂ ಆಕಾಶದಲ್ಲಿ ಬೇರೆ ಬೇರೆ ಎತ್ತರದಲ್ಲಿ ಹೊಳೆಯಲಿದೆ. ಆದರೆ ಗುರು ಗ್ರಹ ಕೆಲವೇ ದಿನಗಳಲ್ಲಿ ಮರೆಯಾಗಲಿದೆ ಎಂದು ಭೌತಶಾಸ್ತ್ರಜ್ಞ ಡಾ. ಎ . ಪಿ . ಭಟ್ ತಿಳಿಸಿದ್ದಾರೆ.