

ಗಂಗಾವತಿ: ಪಂಪಾನಗರದ ಎಚ್.ಆರ್.ಸರೋಜಮಮ್ಮ ಪ.ಪೂ.ಕಾಲೇಜಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹದಿಹರೆಯದ ಸಮಸ್ಯೆಗಳು ಮತ್ತು ಅನೀಮಿಯಾ ನಿಯಂತ್ರಣ ಜಾಗೃತಿ ಕಾರ್ಯಾಗಾರ ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಕಾಲೇಜಿನ ಎನ್ನೆಸ್ಸೆಸ್ ಘಟಕದಿಂದ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಉಪವಿಭಾಗ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶ್ರೀದೇವಿ ನಾಗರಾಜ ಮಾತನಾಡಿ, ಆಹಾರ ಪದ್ಧತಿ ವ್ಯತ್ಯಾಸದಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಜಂಕ್ ುಡ್ ಸೇವನೆ ಅತಿಯಾದರೆ ರಕ್ತ ಹೀನತೆ ಉಂಟಾಗಲಿದೆ. ಕಬ್ಬಿಣ ಮತ್ತು ವಿಟಮಿನ್ ಬಿ 12 ಕೊರತೆಯಿಂದ ರಕ್ತ ಹೀನತೆ ಹೆಚ್ಚಾಗಲಿದ್ದು, ನಿಯಂತ್ರಣಕ್ಕೆ ಹಣ್ಣು, ತರಕಾರಿ ಹೆಚ್ಚು ಬಳಸುವಂತೆ ಸಲಹೆ ನೀಡಿದರು.
ವೈದ್ಯಾಧಿಕಾರಿ ಡಾ.ಸಿ.ಕೀರ್ತಿ ಮಾತನಾಡಿ, ಹದಿಹರೆಯದವರು ದೈಹಿಕ ಮತ್ತು ಮಾನಸಿಕ ಸದೃಢರಾಗಬೇಕಿದ್ದು, ಯೋಗ ಮತ್ತು ವ್ಯಾಯಾಮಕ್ಕೆ ಆದ್ಯತೆ ನೀಡುವಂತೆ ಸಲಹೆ ನೀಡಿದರು. ರಕ್ತ ಹೀನತೆ, ಋತುಚಕ್ರ ಸೇರಿ ಹದಿಹರೆಯ ಸಮಸ್ಯೆಗಳ ನಿವಾರಣೆಗೆ ಪರಿಹಾರ ತಿಳಿಸಿದರು.
ಆಪ್ತ ಸಮಾಲೋಚಕ ಅಕ್ಬರ್ ಅಲಿ, ಪ್ರಾಚಾರ್ಯ ಡಾ.ಎನ್. ರವಿ ಚವ್ಹಾಣ, ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಹನುಮಂತ ವಡ್ಡರ್, ಉಪನ್ಯಾಸಕರಾದ ಕೆ.ಎಚ್.ಕೊಳ್ಳನ್ನವರ್, ಶ್ವೇತಾ ರಾಮಾತ್ನಾಳ, ವೆಂಕಟೇಶ ಚವ್ಹಾಣ, ಯಮನೂರಪ್ಪ ಕಂಬಳಿ ಇತರರಿದ್ದರು.